ಕರ್ನಾಟಕ

ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್: ಅಕ್ರಮ ಸಂಬಂಧ ಮುಚ್ಚಿಡಲು ಬಾಲಕಿ ಹತ್ಯೆ

Pinterest LinkedIn Tumblr


ಮೈಸೂರು: ಅಕ್ರಮ ಸಂಬಂಧ ಕುರಿತು ಸಂಬಂಧಿಕರ ಎದುರು ಬಾಯ್ಬಿಟ್ಟರೆ ಕಷ್ಟ ಎನ್ನುವ ಕಾರಣಕ್ಕಾಗಿ ಬಾಲಕಿಯನ್ನು ಕೊಲೆಗೈದಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಇದರಿಂದ ಸಾರ್ವಜನಿಕ ವಲಯದಲ್ಲಿ ಉಂಟಾಗಿದ್ದ ಅತ್ಯಾಚಾರ ಪ್ರಕರಣದ ವಿವಾದಕ್ಕೆ ತೆರೆಬಿದ್ದಿದೆ.

13 ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದ ಮೃತ ಬಾಲಕಿಯ ಸಂಬಂಧಿಕ ಸಿದ್ದರಾಜು ಹಾಗೂ ರಾಜಮ್ಮನನ್ನು ಬಂಧಿಸಲಾಗಿದೆ. ನಂಜನಗೂಡು ತಾಲೂಕಿನ ಚಾಮಲಾಪುರದಲ್ಲಿ ನ.16ರಂದು 13 ವರ್ಷದ ಶಾಲಾ ಬಾಲಕಿಯನ್ನು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಬಗ್ಗೆ ಮೃತಳ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ರಾಜಮ್ಮ, ಸಿದ್ದರಾಜುರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಕ್ರಮ ಸಂಬಂಧ ಮುಚ್ಚಿಟ್ಟುಕೊಳ್ಳಲು ಹತ್ಯೆ
ಆರೋಪಿ ರಾಜಮ್ಮ ಮೃತ ಬಾಲಕಿಯ ಸ್ವಂತ ಚಿಕ್ಕಮ್ಮ, ಬಾಲಕಿಯ ದೂರದ ಸಂಬಂಧಿ ಸಿದ್ದರಾಜು ನಡುವೆ ಅಕ್ರಮ ಸಂಬಂಧವಿತ್ತು. ನ.16ರಂದು ರಾಜಮ್ಮ ಹಾಗೂ ಸಿದ್ದರಾಜು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾಗ ಬಾಲಕಿ ನೋಡಿದ್ದಳು. ಗಮನಿಸಿದ ಇಬ್ಬರು ಆರೋಪಿಗಳು, ಸಂಬಂಧ ಬಯಲಾಗುವ ಭೀತಿ ಶುರುವಾಗಿತ್ತು.

ಬಾಲಕಿ ಅಕ್ರಮ ಸಂಬಂಧವನ್ನು ಯಾರಿಗಾದರೂ ಹೇಳಬಹುದೆಂಬ ಆತಂಕಕ್ಕೆ ಸಿಲುಕಿದ ಆರೋಪಿಗಳು, ನ.16ರಂದು ಬಾಲಕಿಯ ತಮ್ಮ ಹಾಗೂ ತಂಗಿ ಶಾಲೆಗೆ ತೆರಳಿದ ಬಳಿಕ ಈ ಕೃತ್ಯವೆಸಗಿದ್ದಾರೆ. ಬಾಲಕಿ ಒಬ್ಬಳೇ ಇದ್ದಾಗ ಮನೆಗೆ ತೆರಳಿದ ಆರೋಪಿಗಳು ಆಕೆಯ ಕತ್ತುಹಿಸುಕಿ ಕೊಲೆ ಮಾಡಿದ್ದಾರೆ.

ಘಟನೆಯಲ್ಲಿ ಸಿಕ್ಕ ಕೆಲವು ಸಾಕ್ಷಿಗಳು, ಬಾಲಕಿಯ ಕುಟುಂಬದವರ ವಿಚಾರಣೆ ಮೇಲೆ ಕೆಲವರನ್ನು ಅನುಮಾನಾಸ್ಪದವಾಗಿ ಕರೆತಂದು ವಿಚಾರಣೆ ನಡೆಸಿದಾಗ ಬಾಯ್ಬಿಟ್ಟರು. ಆದರೆ, ಮೃತ ಬಾಲಕಿಯ ಅತ್ಯಾಚಾರ ನಡೆದಿರುವುದು ಇನ್ನೂ ಧೃಡಪಟ್ಟಿಲ್ಲ. ಮೃತ ಬಾಲಕಿಯ ಶವದ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.

Comments are closed.