ಕರ್ನಾಟಕ

ಕಬ್ಬು ಬೆಳೆಗಾರರ ಹೋರಾಟಕ್ಕೆ ಗೆಲುವು

Pinterest LinkedIn Tumblr


ಬೆಂಗಳೂರು: ಕಬ್ಬು ಬೆಳೆಗಾರರ ಸಂಕಷ್ಟ ನಿವಾರಣೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಪರಿಹಾರ ಮಾರ್ಗ ಕಂಡುಹಿಡಿದಿದ್ದಾರೆ. ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಲು 50-50 ಸೂತ್ರ ಮುಂದಿಟ್ಟಿದ್ದಾರೆ. ಅದರಂತೆ, ಕಬ್ಬಿನ ಬಾಕಿ ಹಣವನ್ನು ರಾಜ್ಯ ಸರಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಸಮಾನವಾಗಿ ಭರಿಸಲಿವೆ. ಇವತ್ತು ಮಧ್ಯಾಹ್ನ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿದೆ.

ಪ್ರತೀ ಟನ್ ಕಬ್ಬಿಗೆ 300-350 ರೂ ದರದಂತೆ ಹಣ ಕೊಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಆದರೆ, ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮಿಂದ 150 ರೂ ದರದಂತೆ ಹಣ ಪಾವತಿ ಮಾಡಲು ಸಾಧ್ಯ ಎಂದು ಸ್ಪಷ್ಟಪಡಿಸಿದವು. ಇನ್ನುಳಿದ 150 ರೂ ಹಣವನ್ನು ಸರಕಾರದಿಂದಲೇ ಭರಿಸುವುದಾಗಿ ಹೆಚ್​ಡಿಕೆ ಭರವಸೆ ಕೊಟ್ಟಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಪ್ರಾರಂಭವಾದ ಸಭೆಯಲ್ಲಿ ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಇವರಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಮುರುಗೇಶ್ ನಿರಾಣಿ, ಜಾರಕಿಹೊಳಿ ಸಹೋದರರು ಮೊದಲಾದವರೂ ಇದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರು.

ಕೇಂದ್ರ ಸರಕಾರವು ನಿಮ್ಮೆಲ್ಲರನ್ನೂ ಕೂರಿಸಿಕೊಂಡೇ ಎಫ್​ಆರ್​ಪಿ ದರ ನಿಗದಿ ಮಾಡಿದ ನಂತರ, ನೀವು ಅದಕ್ಕಿಂತ ಹೆಚ್ಚಿನ ದರ ಕೊಡುವುದಾಗಿ ರೈತರಿಗೆ ಭರವಸೆ ಕೊಟ್ಟಿದ್ದು ಈಗ ಸಮಸ್ಯೆ ತಂದಿದೆ. ನಿಮ್ಮಲ್ಲೇ ಕಾಂಪಿಟೀಶನ್ ಮಾಡಿಕೊಂಡು ಈಗ ಸರಕಾರಕ್ಕೆ ತಲೆನೋವು ತಂದಿದ್ದೀರಿ. ನೀವು ಭರವಸೆ ಕೊಟ್ಟಂತೆ ಕಬ್ಬಿನ ರೈತರಿಗೆ ಅದೇ ದರದಲ್ಲಿ ಹಣ ಕೊಡಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ತಾಕೀತು ಮಾಡಿದರು.

ಆದರೆ, ಸಕ್ಕರೆ ಕಾರ್ಖಾನೆ ಮಾಲೀಕರು ಈ ಸಂದರ್ಭದಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರೆನ್ನಲಾಗಿದೆ. ಅವರ ಕೆಲ ವಾದಗಳು ಈ ಕೆಳಕಂಡಂತಿವೆ.
* ಎಫ್​ಆರ್​ಪಿ ದರದಲ್ಲಿ ಒಪ್ಪಂದ ಮಾಡಿಕೊಂಡಾಗ ಸಕ್ಕರೆ ದರ ಕಿಲೋಗೆ 35 ರೂ ಇದ್ದದ್ದು ಈಗ 27ಕ್ಕೆ ಇಳಿದಿದೆ. ಹೀಗಾಗಿ, ಕಬ್ಬು ಬೆಳೆಗಾರರಿಗೆ ಹೆಚ್ಚು ಬೆಲೆ ಕೊಡಲು ಸಾಧ್ಯವಾಗುವುದಿಲ್ಲ.
* ಹಿಂದೆ ಸಕ್ಕರೆ ಕಾರ್ಖಾನೆಗಳಿಗೆ ಲಾಭ ಬಂದ ಸಂದರ್ಭದಲ್ಲಿ 2,900 ರೂ.ಗೆ ಒಪ್ಪಂದ ಆಗಿದ್ದರೂ 3,490 ರೂ ಪ್ರಕಾರ ರೈತರಿಗೆ ಹಣ ನೀಡಿ ಗೌರವ ತೋರಿದ್ದೇವೆ.
* ರಾಜ್ಯ ಸರಕಾರದಿಂದ ವಿದ್ಯುತ್ ಖರೀದಿಯಲ್ಲಿ ಮೋಸವಾಗಿದೆ. ಹಿಂದೆ ಪ್ರತೀ ಯೂನಿಟ್​ಗೆ 5.87 ರೂನಂತೆ ವಿದ್ಯುತ್ ಖರೀದಿಸಲು ಸರಕಾರ ಒಪ್ಪಂದ ಮಾಡಿಕೊಂಡಿತ್ತು. ಈಗ ಕೇವಲ 3.87 ಮಾತ್ರ ನೀಡುತ್ತಿದೆ. ನೆರೆಯ ಕೆಲ ರಾಜ್ಯಗಳಲ್ಲಿ ಉತ್ತಮ ದರ ಕೊಟ್ಟು ಸರಕಾರ ವಿದ್ಯುತ್ ಖರೀದಿ ಮಾಡುತ್ತಿದೆ.
* ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಸುವ ಸರಕಾರ ಏಳೆಂಟು ತಿಂಗಳಾದರೂ ಹಣ ನೀಡುವುದಿಲ್ಲ. ಈಗ 15 ದಿನದಲ್ಲಿ ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಿ ಎಂದರೆ ಹೇಗೆ?
* ಅನೇಕ ರಾಜ್ಯಗಳಲ್ಲಿ ಎಫ್​ಆರ್​ಪಿ ದರ ಹೊಂದಿಸಲು ಸಕ್ಕರೆ ಕಂಪನಿಗಳ ಜೊತೆ ಸರಕಾರ ಕೂಡ ಕೈಜೋಡಿಸುತ್ತದೆ. ನಮ್ಮಲ್ಲೂ ಇಂಥ ವ್ಯವಸ್ಥೆಯಾಗಬೇಕು.
* ಬರಗಾಲದಿಂದಾಗಿ ಸಕ್ಕರೆ ಉತ್ಪಾದನೆ ಮೇಲೆ ನಕರಾತ್ಮಕ ಪರಿಣಾಮ ಬಿದ್ದಿದೆ.
* ಇಥೆನಾಲ್​ಗೆ ಕೇಂದ್ರದಿಂದ ಸಬ್ಸಿಡಿ ಸಿಗುತ್ತಿದೆಯಾದರೂ ರಾಜ್ಯ ಸರಕಾರದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ
* ನೆರೆಯ ರಾಜ್ಯಗಳು ಸಕ್ಕರೆ ಕಾರ್ಖಾನೆಗಳಿಗೆ ಬಡ್ಡಿರಹಿತ ಸಾಲ ನೀಡುತ್ತವೆ. ಆದರೆ ರಾಜ್ಯ ಸರಕಾರದಿಂದ ಇಂಥ ಸಹಾಯ ಸಿಗುತ್ತಿಲ್ಲ.

ಸಕ್ಕರೆ ಕಾರ್ಖಾನೆಗಳ ಈ ಕೆಲ ವಾದಗಳನ್ನು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಒಪ್ಪಿಕೊಂಡರೆನ್ನಲಾಗಿದೆ. ಅದಕ್ಕಾಗಿಯೇ, ಟನ್ ಕಬ್ಬಿಗೆ ರೈತರು ಕೇಳಿರುವ 300 ರೂಪಾಯಿಯನ್ನು ಸಕ್ಕರೆ ಕಂಪನಿಗಳ ಜೊತೆ ಸರಕಾರದಿಂದ ಭರಿಸಲು ಸಿಎಂ ಸಮ್ಮತಿಸಿದ್ದಾರೆ.

Comments are closed.