ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೀಗಳಲ್ಲಿ ಗದಗಿನ ತೋಂಟದಾರ್ಯ ಸ್ವಾಮಿಗಳು ಒಬ್ಬರು. ಇವತ್ತು ಲಿಂಗೈಕ್ಯರಾದ ಅವರಿಗೆ ಗೌರವ ಸೂಚಿಸಲು ಸೇರಿದ್ದ ಸಭೆಯೇ ಲಿಂಗಾಯತ ಹೋರಾಟಕ್ಕೆ ಹೊಸ ಸ್ಫೂರ್ತಿಯ ವೇದಿಕೆಯಾಯಿತು. ಲಿಂಗಾಯತ ಹೋರಾಟದಲ್ಲಿ ನಿಷ್ಠುರವಾಗಿ ತೊಡಗಿಸಿಕೊಂಡಿದ್ದ ತೋಂಟದಾರ್ಯ ಶ್ರೀಗಳ ಹಾದಿಯಲ್ಲೇ ನಡೆಯಲು ಇತರ ಲಿಂಗಾಯತ ನಾಯಕರು ಹಾಗೂ ಸ್ವಾಮಿಗಳು ಪಣ ತೊಟ್ಟಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಮಾತೃಸ್ವರೂಪದಂತಿದ್ದ ಶ್ರೀಗಳ ಮಹತ್ವಾಕಾಂಕ್ಷೆಯನ್ನು ಈಡೇರಿಸುವ ಸಂಕಲ್ಪ ಮಾಡಿದ್ದಾರೆ.
ಬೇಲಿಮಠದ ಶ್ರೀಗಳು, ಜಯಮೃತ್ಯುಂಜಯ ಶ್ರೀಗಳು, ಎಸ್.ಎಂ. ಜಾಮ್ದಾರ್ ಮೊದಲಾದವರು ಲಿಂಗಾಯತ ಹೋರಾಟ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೋರಾಟಕ್ಕೆ ಹಿನ್ನಡೆಯಾಗುವಂತೆ ಮಾಡಿದ ಶಾಮನೂರು ಶಿವಶಂಕರಪ್ಪ ಮೊದಲಾದ ನಾಯಕರಿಗೆ ಛೀಮಾರಿ ಹಾಕಿದ್ದಾರೆ. ಇದೀಗ ಲಿಂಗಾಯತ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದೇ ಪ್ರಮಾದ ಎಂಬಂತೆ ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್ ವಿರುದ್ಧವೂ ಲಿಂಗಾಯತ ಹೋರಾಟಗಾರರು ಸಿಡಿಗುಟ್ಟಿದ್ದಾರೆ.
ಇದೇ ವೇಳೆ, ಡಿಕೆಶಿ ಹೇಳಿಕೆಯನ್ನು ಸಿದ್ದರಾಮಯ್ಯ ಕೂಡ ಅಲ್ಲಗಳೆದಿದ್ದಾರೆ. ಇಡೀ ಸಂಪುಟವೇ ತೆಗೆದುಕೊಂಡ ನಿರ್ಧಾರವಾದ್ದರಿಂದ ಕ್ಷಮೆಯಾಚಿಸುವ ಅಗತ್ಯವಿಲ್ಲ. ಡಿಕೆಶಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ ಹೇಳಿದ್ದೇನು?
ಧರ್ಮದ ವಿಚಾರದಲ್ಲಿ ರಾಜಕೀಯ ಪಕ್ಷ ತಲೆಹಾಕಬಾರದು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಮಧ್ಯಪ್ರವೇಶಿಸಿದ್ದು ತಪ್ಪಾಯಿತು. ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸೋಲುಂಟಾಗಲು ಅದೇ ಕಾರಣವಾಯಿತು ಎಂದು 3 ದಿನಗಳ ಹಿಂದೆ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟು, ಲಿಂಗಾಯತ ಧರ್ಮೀಯರಲ್ಲಿ ಕ್ಷಮೆ ಕೂಡ ಕೋರಿದ್ದರು. ಡಿಕೆಶಿ ಹೇಳಿಕೆಯನ್ನು ಬಿಜೆಪಿ ಮುಖಂಡರು ಸ್ವಾಗತಿಸಿದ್ದರು.
ಜಾಮದಾರ್ ಗರಂ:
ಕಳೆದ ಮೂರ್ನಾಲ್ಕು ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ನಾಯಕರ ಹೇಳಿಕೆಗಳು ರಾಜ್ಯದ ಜನರಿಗೆ ಆತಂಕ ಹುಟ್ಟಿಸಿವೆ ಎಂದು ಹೇಳಿದ ಲಿಂಗಾಯತ ಧರ್ಮ ಹೋರಾಟ ಸಮಿತಿ ಕಾರ್ಯದರ್ಶಿ ಎಸ್.ಎಂ. ಜಾಮ್ದಾರ್ ಅವರು ಡಿಕೆಶಿ ಕ್ಷಮಾಪಣೆಗೆ ಆಗ್ರಹಿಸಿದರು.
ಹಿಂದಿನ ಮೂರು ಸಭೆಗಳಲ್ಲಿ ಡಿಕೆ ಶಿವಕುಮಾರ್ ಏನೂ ಮಾತಾಡಿಲ್ಲ. ಈಗ ಅವರ ಆತ್ಮಸಾಕ್ಷಿ ಎಚ್ಚರಗೊಂಡಿತಾ? ಯಾವುದೇ ಗುಂಪನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸುವ ಅಧಿಕಾರ ಸರಕಾರಕ್ಕೆ ಮಾತ್ರ ಇದೆ. ಹಾಗಾಗಿ ನಾವು ಸರಕಾರವನ್ನು ಕೇಳಿದೆವು. ಡಿಕೆ ಶಿವಕುಮಾರ್ ಸಾರ್ವಜನಿಕರ ಎದುರು ಸ್ಪಷ್ಟೀಕರಣ ಕೊಡಬೇಕು ಎಂದು ಜಾಮದಾರ್ ಒತ್ತಾಯಿಸಿದರು.
ಹಾಗೆಯೇ, ಶಾಮನೂರು ಶಿವಶಂಕರಪ್ಪ ವಿರುದ್ಧವೂ ಜಾಮದಾರ್ ವಾಗ್ದಾಳಿ ನಡೆಸಿದರು. “ಲಿಂಗಾಯತ ಹೋರಾಟಕ್ಕೆ ಕೈಹಾಕಿ ಸುಟ್ಟುಕೊಂಡರು ಎಂದು ಶಾಮನೂರು ಹೇಳುತ್ತಾರೆ. ಆದರೆ ಹೋರಾಟಕ್ಕೆ ಕೈಹಾಕಿ ಎಂದು ಹೇಳಿದ್ದೇ ಅವರು. ಈಗ ಈ ರೀತಿ ಮಾತನಾಡುವ ಹಕ್ಕು ಅವರಿಗಿಲ್ಲ. ವೀರಶೈವ ಮಹಾಸಭಾದವರು ಪಂಚಾಚಾರ್ಯರಿಗೇ ಮೋಸ ಮಾಡ್ತಿದ್ದೀರಿ. ನಿಮ್ಮ ಮೌಖಿಕ ಹೇಳೀಕೆಗಳು ಹಾಗೂ ವೆಬ್ಸೈಟ್ ಹೇಳಿಕೆಗಳು ಎರಡೂ ವಿಭಿನ್ನವಾಗಿವೆ” ಎಂದು ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ಜಾಮ್ದಾರ್ ಟೀಕಿಸಿದರು.
ಹೋರಾಟ ನಿಲ್ಲಿಸಲು ಹೇಳಿದ ಶ್ಯಾಮನೂರು ಶಿವಶಂಕರಪ್ಪ ವಿರುದ್ಧ ತೋಂಟದಾರ್ಯ ಶ್ರೀಗಳು ಗರಂ ಆಗಿದ್ದ ಘಟನೆಯೊಂದನ್ನು ಜಾಮದಾರ್ ಇಂದು ಉಲ್ಲೇಖಿಸಿದರು. “ಹೋರಾಟ ಪ್ರಾರಂಭಿಸಿದ್ದು ಯಾರು? ಈಗ ನಿಲ್ಲಿಸಲು ನನ್ನನ್ನು ಯಾಕೆ ಕೇಳ್ತೀರಿ? ಸುಮ್ನೆ ಬಾಯಿ ಮುಚ್ಚಿ” ಎಂದು ಗದುಗಿನ ಶ್ರೀಗಳು ಶಾಮನೂರು ವಿರುದ್ಧ ನಿಷ್ಠುರವಾಗಿಯೇ ಗುಡುಗಿದ್ದರೆಂದು ಜಾಮದಾರ್ ಹೇಳಿದರು.
ಇದೇ ವೇಳೆ, ಸ್ವತಂತ್ರ ಧರ್ಮದ ಹೋರಾಟ ನಿಲ್ಲಿಸಿದರೆ ತೋಂಟದಾರ್ಯ ಶ್ರೀಗಳಿಗೆ ದ್ರೋಹ ಬಗೆದಂತಾಗುತ್ತದೆ. ತಾವು ಯಾವುದೇ ಕಾರಣಕ್ಕೂ ಲಿಂಗಾಯತ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಿರಿಯ ಸಂಶೋಧಕರೂ ಆಗಿರುವ ಜಾಮದಾರ್ ಸ್ಪಷ್ಟಪಡಿಸಿದರು.
ಬೇಲಿಮಠದ ಶ್ರೀಗಳೂ ಗುಡುಗು:
ಶಾಮನೂರು ಶಿವಶಂಕರಪ್ಪ ವಿರುದ್ಧ ಬೇಲಿಮಠದ ಶ್ರೀಗಳೂ ವಾಗ್ದಾಳಿ ನಡೆಸಿದರು. “ಹಿಂದೆ ಇದೇ ಶಾಮನೂರು ಶಿವಶಂಕರಪ್ಪ ಅವರು ದೆಹಲಿಗೆ ಹೋಗಿ ಸ್ವತಂತ್ರ ಧರ್ಮ ಹೋರಾಟಕ್ಕೆ ಒತ್ತಾಯಿಸಿದ್ದರು. ವೀರಶೈವರು ಚುನಾವಣೆ ಸಂದರ್ಭದಲ್ಲಿ ಸ್ವತಂತ್ರ ಧರ್ಮ ಹೋರಾಟದ ವಿರುದ್ಧ ಮಾಡಿದ ಕುತಂತ್ರ ನಮಗೆ ಗೊತ್ತಿದೆ” ಎಂದು ಬೇಲಿಮಠದ ಶ್ರೀಗಳು ವಿಷಾದಿಸಿರು.
ಕಳೆದ ಬಾರಿ ಲಿಂಗಾಯತ ಧರ್ಮ ವಿಚಾರವು ಚುನಾವಣೆ ಸ್ಟಂಟ್ ರೀತಿ ಕಂಡಿತ್ತು. ಆದರೆ, ಇದು ಹೊಸದಾಗಿ ಆರಂಭವಾದ ಹೋರಾಟವಲ್ಲ. ರಾಜಕೀಯ ಪಕ್ಷಗಳ ಸಹಕಾರವಾಗಲೀ, ಓಲೈಕೆಯಾಗಲೀ ತಮಗೆ ಬೇಕಾಗಿಲ್ಲ ಎಂದು ಹೇಳಿದ ಶ್ರೀಗಳು, ಡಿಕೆಶಿ ವಿರುದ್ಧವೂ ಅಸಮಾಧಾನ ಹೊರಹಾಕಿದರು.
“ಡಿಕೆ ಶಿವಕುಮಾರ್ ಅವರು ಧರ್ಮದ ವಿಚಾರದಲ್ಲಿ ರಾಜಕೀಯ ತಲೆಹಾಕಬಾರದು ಎಂದಿದ್ಧಾರೆ. ಅವರು ಜನರಲ್ಲಿ ಆತ್ಮಗೌರವ ತುಂಬಬೇಕು. ಅದನ್ನು ಬಿಟ್ಟು ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ” ಎಂದು ಬೇಲಿಮಠದ ಸ್ವಾಮಿಗಳು ಆರೋಪಿಸಿದರು.
ಇದೇ ವೇಳೆ, ಲಿಂಗಾಯತ ಹೋರಾಟವು ಹಿಂದೂ ಧರ್ಮದ ವಿರುದ್ಧವಲ್ಲ ಎಂದು ಒತ್ತಿಹೇಳಿದ ಶ್ರೀಗಳು, ಬೌದ್ಧರು, ಸಿಖ್ಖರು, ಜೈನರು ತಮ್ಮ ಅಸ್ಮಿತೆ ಸಾಬೀತು ಮಾಡಿಕೊಂಡಂತೆ ತಾವೂ ಪ್ರಯತ್ನಿಸುತ್ತಿದ್ದೇವೆ. ರಾಜಕಾರಣಿಗಳು ಈ ಚಿಂತನೆಯನ್ನು ರಾಜಕೀಯವಾಗಿ ಬಳಸದೆ ದೂರು ಉಳಿಯುವುದು ಒಳಿತು ಎಂದು ಎಚ್ಚರಿಸಿದರು.
ಜಯಮೃತ್ಯುಂಜಯ ಶ್ರೀಗಳ ಹೇಳಿಕೆ:
“ಬಸವಣ್ಣನವರ ಬಗ್ಗೆ, ಲಿಂಗಾಯತ ಧರ್ಮದ ಬಗ್ಗೆ ಶಿವಕುಮಾರ್ ಅವರಿಗೆ ಜ್ಞಾನವಿದೆ. ಆದರೂ ಯಾಕೆ ಹಾಗೆ ಅವರು ಮಾತನಾಡಿದರು ಎಂಬುದು ತಿಳಿಯುತ್ತಿಲ್ಲ… ಡಿಕೆ ಶಿವಕುಮಾರ್ ಈ ಹಿಂದೆ ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದರು. ಇವತ್ತು ಅಸತ್ಯದ ಮಾತುಗಳನ್ನಾಡುತ್ತಿದ್ದಾರೆ. ಅವರ ಹಿಂದೆ ಅನೇಕ ವ್ಯಕ್ತಿಗಳ ಕುಮ್ಮಕ್ಕು ಕೆಲಸ ಮಾಡಿದೆ. ಹೋರಾಟ ಹತ್ತಿಕ್ಕುವವರ ಮೂಲಕ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಹೋರಾಟದ ಗಾಂಭೀರ್ಯತೆ ಅರಿಯದೆ ನೀಡಿರುವ ಅವರ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ. ರಾಜಕೀಯ ಲಾಭಕ್ಕಾಗಿ ಈ ರೀತಿ ಹೇಳಿಕೆ ನೀಡಿರೋದು ಸ್ಪಷ್ಟವಾಗಿದೆ,” ಎಂದು ಜಯಮೃತ್ಯುಂಜಯ ಶ್ರೀಗಳು ಅಭಿಪ್ರಾಯಪಟ್ಟರು.
ಲಿಂಗಾಯತ ಹೋರಾಟಕ್ಕೆ ತಾಯಿಯಂತಿದ್ದ ಗದುಗಿನ ಶ್ರಿಗಳನ್ನ ಕಳೆದುಕೊಂಡಿದ್ದು ತುಂಬಾ ನೋವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಾಗಲಿದೆ ಎಂದು ಶ್ರೀಗಳು ತಿಳಿಸಿದರು.
ಮಾತೆ ಮಹಾದೇವಿ ಗುಡುಗು:
ನಿನ್ನೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಬಸವಧರ್ನ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸಿದ್ದರಾಮಯ್ಯನವರದ್ಏ ತಪ್ಪೆಂದು ಹೇಳಲು ಹೊರಟ ಡಿಕೆಶಿಯದ್ದು ಬಾಲಿಷತನವೆಂದು ಮಾತೆ ಬಣ್ಣಿಸಿದ್ದರು.
“ಡಿಕೆಶಿ ಬಹಳ ವಿಚಿತ್ರವಾದ ಮಾತುಗಳನ್ನಾಡಿದ್ದಾರೆ, ಯಾವುದೋ ಅಪರಾಧವಾದಂತೆ ಹೇಳಿಕೆ ನೀಡಿದ್ದಾರೆ. ಡಿಕೆಶಿಯವರ ಇಂತಹ ಹೇಳಿಕೆ ನಿಜಕ್ಕೂ ಖಂಡನಾರ್ಹ. ಈ ವಿಚಾರವಾಗಿ ಡಿಕೆಶಿ ಲಿಂಗಾಯತರ ಕ್ಷಮೆ ಕೋರಬೇಕು” ಎಂದು ಮಾತೆ ಮಹಾದೇವಿ ಆಗ್ರಹಿಸಿದರು,
ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಲಿಂಗಾಯತ ಪ್ರತ್ಯೇಕ ಧಮ೯ದ ಶಿಫಾರಸ್ಸು ಮಾಡಿದ್ದು ಒಂದು ಐತಿಹಾಸಿಕ ನಿಧಾ೯ರ. ರಾಜಕೀಯ ಏಳುಬೀಳುಗಳು ಏನೇ ಇರಲಿ, ಅದಕ್ಕೆ ಕಾರಣ ಬೇರೆ ಬೇರೆ ಇರುತ್ತವೆ. ಸಿದ್ದರಾಮಯ್ಯ ಬಸವಣ್ಣನ ತತ್ವದಲ್ಲಿ ನಂಬಿಕೆ ಅಭಿಮಾನ ಇಟ್ಟವರು ಎಂದು ಮಾತೆ ಮಹಾದೇವಿ ಮಾಜಿ ಮುಖ್ಯಮಂತ್ರಿಗಳ ಗುಣಗಾನ ಮಾಡಿದರು.
“ನಾಗಮೋಹನ ದಾಸ್ ಸಮಿತಿ ನೇಮಕ ಮಾಡಿ ಅದರ ಅಭಿಪ್ರಾಯದಂತೆ ಶಿಫಾರಸ್ಸು ಮಾಡಿ ಉತ್ತಮ ನಿಣ೯ಯ ಮಾಡಿದ್ದಾರೆ. ಇಂತಹ ನಿಣ೯ಯ ತಪ್ಪೆಂದು ಹೇಳುವ ಡಿಕೆಶಿಯದ್ದು ಬಾಲಿಷತನ ಹೇಳಿಕೆ. ಈ ಹೇಳಿಕೆ ಹಿಂದೆ ರಾಜಕೀಯ ಉದ್ದೇಶ ಬೇರೆಯಿದೆ. ಲೋಕಸಭಾ ಮತ್ತು ಉಪಚುನಾವಣೆಯಲ್ಲಿ ಮತದಾರರನ್ನ ಸೆಳೆಯುವ ತಂತ್ರವಿದ್ದು, ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆಂದು ಜನರಲ್ಲಿ ಭಾವನೆ ಹುಟ್ಟಿಸಲು ಹೊರಟ ಡಿಕೆಶಿ ಮಾತಿನ ಹಿಂದೆ ಕುತಂತ್ರ ಇದೆ. ಸಚಿವ ಸಂಪುಟ ನಿಣ೯ಯಿಸೋ ವೇಳೆ ಏಕೆ ಡಿಕೆಶಿ ವಿರೋಧಿಸಲಿಲ್ಲ, ಆಗ ವಿರೋಧಿಸದೇ ಈಗ ವಿರೋಧಿಸೋದು ರಾಜಕೀಯ ಕುತಂತ್ರ…
“ಪ್ರತ್ಯೇಕ ಧಮ೯ ಹೋರಾಟ ಬೆಂಬಲದಿಂದ ಕಾಂಗ್ರೆಸ್ ಬಲ ಕಡಿಮೆ ಆಗಿಲ್ಲ. ರಾಜ್ಯದಲ್ಲಿ ಈ ಮೊದಲಿಗಿಂತಲೂ ಹೆಚ್ಚಿನ ಮತಗಳು ಕಾಂಗ್ರೆಸ್ ಗೆ ಬಂದಿವೆ. ಅಲ್ಲದೆ ಬೀದರ್ನಲ್ಲೂ ಹೆಚ್ಚಿನ ಸ್ಥಾನವನ್ನ ಕಾಂಗ್ರೆಸ್ ಗಳಿಸಿದೆ. ಹೀಗಾಗಿ ಡಿಕೆಶಿ ಈಗ ಲಿಂಗಾಯತ ಧಮ೯ ವಿಚಾರವನ್ನು ಎಳೆದು ತಂದು ಮಾತನಾಡೋದು ಸರಿಯಲ್ಲ” ಎಂದು ಮಾತೆ ಮಹಾದೇವಿ ವಾದಿಸಿದರು.
Comments are closed.