ಹುಬ್ಬಳ್ಳಿ: ಅನ್ನಭಾಗ್ಯ ಯೋಜನೆಯ ಅಕ್ಕಿ ಪಾಲಿಶ್ ಮಾಡಿ ಅಕ್ರಮವಾಗಿ ಮುಂಬೈಗೆ ಸಾಗಿಸುತ್ತಿದ್ದ ಲಾರಿಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬೆಂಗಳೂರು- ಪುಣೆ ಹೆದ್ದಾರಿಯಲ್ಲಿ ತಾಲೂಕಿನ ಛಬ್ಬಿ ಬಳಿ ಭಾನುವಾರ ರಾತ್ರಿ ತಡೆದು, ಒಂದು ಸಾವಿರ ಚೀಲ ಅಕ್ಕಿ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.
ಸರ್ಕಾರದ ಅನ್ನಭಾಗ್ಯದ ಅಕ್ಕಿಯನ್ನು ಪಾಲಿಶ್ ಮಾಡಿ 25 ಕೆಜಿ ಪ್ಯಾಕೆಟ್ಗಳಲ್ಲಿ ತುಂಬಲಾಗಿದ್ದು, ಸಾವಿರ ಚೀಲಗಳನ್ನು ಹೇರಿದ್ದ ಲಾರಿ ಕೋಲಾರ ಜಿಲ್ಲೆ ಬಂಗಾರ ಪೇಟೆಯಿಂದ ಮುಂಬೈ ಬಳಿಯ ವಸಾಯಿ ಎಂಬ ಪ್ರದೇಶಕ್ಕೆ ಹೊರಟಿತ್ತು.
ವಾಹನ ತಪಾಸಣೆ ವೇಳೆ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ಬೇರೆ ಕಂಪನಿಯ ಹೆಸರು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಹಾಗೂ ಚಾಲಕರು ಪಂಜಾಬ್ ಮೂಲದವರಾಗಿದ್ದು ಲಾರಿ ಮಾಲೀಕರು ಯಾರು ? ಅಕ್ಕಿ ಸಾಗಣೆಯ ಹಿಂದೆ ಯಾರ ಕೈವಾಡ ಇದೆ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಬಡವರಿಗೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿ ಕಾಳಸಂತೆಕೋರರ ಅಕ್ರಮ ವ್ಯವಹಾರಕ್ಕೆ ಹೋಗುತ್ತಿದ್ದು ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂಬುದು ಸಾಬೀತಾಗಿದೆ.
Comments are closed.