ಕರ್ನಾಟಕ

13 ಜಯಂತಿಗಳ ಜಾರಿ ಮಾಡಿದ ನಾನು ಹಿಂದೂ ವಿರೋಧಿಯೇ?: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: 13 ಜಯಂತಿಗಳನ್ನು ಮಾಡಿದ್ದು ನಾನು. ಆದರೂ ನನ್ನನ್ನು ಹಿಂದೂ ವಿರೋಧಿ ಅಂತ ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಓಕಳೀಪುರಂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ, ಎಲ್ಲ ಸರ್ಕಾರಿ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನ ಫೋಟೋ ಇಡಲು ಹೇಳಿದ್ದೇ ನಾನು. ವಿಜಯಪುರ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅಂತ ಹೆಸರಿಟ್ಟೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ನಾಮಕರಣ ಮಾಡಿದೆ. ಕೆಂಪೇಗೌಡ ಜಯಂತಿ, ವಿಶ್ವಕರ್ಮ ಜಯಂತಿ, ಮಾಚಿದೇವರ ಜಯಂತಿ ಮಾಡಿದ್ಯಾರು? ನನ್ನನ್ನು ಜಾತಿ ವಿರೋಧಿ ಎನ್ನುವವರು ಏನು ಮಾಡಿದ್ದಾರೆ? ಒಟ್ಟು 13 ಜಯಂತಿಗಳಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಕೂಡಾ ಒಂದು ಹೇಳಿದರು.

ಟಿಪ್ಪು ಜಯಂತಿಗೆ ಬಿಜೆಪಿಯವರು ಅಪಪ್ರಚಾರ ಮಾಡಿದರು. ನನ್ನನ್ನು ಧರ್ಮ ವಿರೋಧಿ, ಹಿಂದೂ ವಿರೋಧಿ ಅಂತಾ ಕರೆದರು. ದಿವಾನ್ ಪೂರ್ಣಯ್ಯ ಅವರು ಟಿಪ್ಪು ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಶೃಂಗೇರಿ ಮಠವನ್ನು ರಕ್ಷಣೆ ಮಾಡಿದ್ದು ಟಿಪ್ಪು ಸುಲ್ತಾನ್. ಆದರೆ ಜಯಂತಿ ತಡೆಯಲು ಸುಮ್ಮನೆ ಕಥೆ ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.

ನನ್ನ ಹೆಸರು ಸಿದ್ದರಾಮಯ್ಯ, ನಮ್ಮ ಅಪ್ಪ ಸಿದ್ದರಾಮ ಗೌಡ, ನಮ್ಮ ದೇವರು ಸಿದ್ದರಾಮ ಊರು ಸಿದ್ದರಾಮನಹುಂಡಿ. ಹೀಗಿರುವಾಗ ನಾನು ಹೇಗೆ ಹಿಂದೂ ವಿರೋಧಿ ಆಗ್ತೇನೆ? ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದರಲ್ಲಿ ನಂಬಿಕೆ ಇಡಬೇಕು. ನಾನು ದೇವರು ನಂಬುತ್ತೇನೆ. ನನ್ನ ಪತ್ನಿ ಮತ್ತು ಮಗ ಪ್ರತಿ ದಿನ ಪೂಜೆ ಮಾಡುತ್ತಾರೆ ಎಂದರು.

ಜನ ಧರ್ಮ, ಜಾತಿ ಹಿಡಿದುಕೊಂಡು ಮತಹಾಕಿದರು. ನಮ್ಮ ಕೆಲಸ ನೋಡಿ ಮತ ಹಾಕಲಿಲ್ಲ. ಕರಾವಳಿ ಕಡೆ ಬಿಜೆಪಿಯವರು ಬಹಳಷ್ಟು ಅಪಪ್ರಚಾರ ಮಾಡಿದರಂತೆ. ನಾನು ಅಲ್ಲಿಗೆ ಹೋದಾಗ ಜನ ಹೇಳಿದರು. ನಿಮ್ಮ ಮಕ್ಕಳು ಮನೆಗೆ ಸುರಕ್ಷಿತವಾಗಿ ಬರಬೇಕು ಅಂದರೆ ಬಿಜೆಪಿಗೆ ಮತ ಹಾಕಿ. ದೇವಸ್ಥಾನದಲ್ಲಿ ಪೂಜೆ ಮಾಡಬೇಕಂದರೆ, ನಿಮ್ಮ ಕೊಟ್ಟಿಗೆಗೆ ದನ ವಾಪಾಸ್ ಬರಬೇಕಾದರೆ ಬಿಜೆಪಿಗೆ ಮತ ಹಾಕಿ ಅಂತಾ ಅಪಪ್ರಚಾರ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಾವ ಧರ್ಮದಲ್ಲಿ ಸಮಾನತೆ, ಮನುಷ್ಯತ್ವ ಇಲ್ಲವೋ ಆ ಧರ್ಮಕ್ಕೆ ನನ್ನ ವಿರೋಧವಿದೆ. ನನ್ನ ಅಧಿಕಾರ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಯಾವ ರಾಜ್ಯಗಳು ಮಾಡಲಿಲ್ಲ. ಇದನ್ನು ನಾನು ಎಲ್ಲಿ ಬೇಕಾದರೂ ಹೇಳುತ್ತೇನೆ. ಶೇ.99 ಭರವಸೆಗಳನ್ನು ಈಡೇರಿಸಿದ ಸರ್ಕಾರ ಅಂದ್ರೆ ಅದು ನಮ್ಮ ಸರ್ಕಾರ. ನನ್ನ ಮೇಲೆ ಇದುವರೆಗೂ ಯಾವುದೇ ಹಗರಣಗಳಿಲ್ಲ ಎಂದರು.

ದಿನೇಶ್ ಗುಂಡೂರಾವ್ ಕಾಲೆಳೆದ ಮಾಜಿ ಸಿಎಂ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುರ್ಚಿಯಲ್ಲಿ ಕುರಿಸುವವರು ಹಾಗೂ ಕೆಳಗಿಳಿಸುವವರು ಜನಗಳೇ. ಒಂದು ಕಾಲದಲ್ಲಿ ನಾನು ದಿನೇಶ್ ಗುಂಡೂರಾವ್ ಅವರನ್ನು ಸೋಲಿಸಿ ಅಂತ ಮತದಾರರಲ್ಲಿ ಕೇಳಿಕೊಂಡಿದ್ದೆ. ಆದರೆ ಮತ್ತೊಂದು ಬಾರಿ ಅವರನ್ನು ಗೆಲ್ಲಿಸಿಯೆಂದು ಜನತೆಗೆ ಕೇಳಿಕೊಂಡೆ ಎಂದು ಸಿದ್ದರಾಮಯ್ಯ ಹೇಳಿದರು.

ದಿನೇಶ್ ಗುಂಡೂರಾವ್ ಅವರು ಶಾಸಕರಾದ ನಂತರ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಿದ್ದೆ. ಆಮೇಲೆ ಮಂತ್ರಿಯಾಗಿದ್ದು ಸಾಕು, ಪಕ್ಷದ ಕೆಲಸ ಮಾಡಿ ಅಂತಾ ಸಲಹೆ ಕೊಟ್ಟಿರುವೆ ಎಂದು ಅವರು, ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿಯನ್ನು ಖುಷಿಯಿಂದ ಒಪ್ಪಿಕೊಂಡು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಂಬರ್ 1 ಪಕ್ಷವಾಗಿ ಗೆದ್ದು ಬಂದಿದೆ. ಹೀಗಾಗಿ ಅವರು ಮೊದಲ ಪರೀಕ್ಷೆಯಲ್ಲಿ ಜಯಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ನಮ್ಮ ಕೈ ಹಿಡಿಯಲಿಲ್ಲ. ರಾಜ್ಯದ ಜನತೆಗೆ ನಾವು ನೀಡಿದ ಯೋಜನೆಗಳ ಆಧಾರದ ಮೇಲೆ ನಾವೇ ಗೆಲ್ಲುತ್ತಿದ್ದೇವು. ಆದರೆ ಚುನಾವಣೆ ಅದ್ಯಾವುದರ ಮೇಲೂ ನಡೆಯಲಿಲ್ಲ. ಇದರಿಂದಾಗಿ ನಾವು ಸೋಲಬೇಕಾಯಿತು ಎಂದರು.

Comments are closed.