ಕರ್ನಾಟಕ

ಸಮ್ಮಿಶ್ರ ಸರ್ಕಾರ ಪತನವಾದರೆ ಸರಕಾರ ರಚನೆ ಕುರಿತ ರಹಸ್ಯ ನಿರ್ಣಯಕ್ಕೆ ಬಿಜೆಪಿ ಸಭೆ ಅಂಗೀಕಾರ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾದರೆ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ರಚನೆ ಮಾಡಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಸರ್ಕಾರ ರಚನೆ ಆಸೆ ಇನ್ನೂ ಜೀವಂತವಿದೆ ಎಂಬ ಸಂದೇಶ ರವಾನಿಸಲಾಗಿದೆೆ.

ಇದಕ್ಕೆ ಇಂಬು ಕೊಡುವಂತೆ ಬುಧವಾರ ನಡೆದ ರಾಜ್ಯಮಟ್ಟದ ವಿಶೇಷ ಸಭೆಯಲ್ಲಿ ಗುಪ್ತ ನಿರ್ಣಯವೊಂದಕ್ಕೆ ಅಂಗೀಕಾರ ಪಡೆಯಲಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಯಾವುದೇ ಸಂದರ್ಭದಲ್ಲಿ ಏನೇ ನಿರ್ಣಯ ಕೈಗೊಂಡರೂ ನಮ್ಮ ಬೆಂಬಲ ಇದೆ ಎಂಬ ಒಕ್ಕಣೆಯ ನಿರ್ಣಯಕ್ಕೆ ಅಂಗೀಕಾರ ಪಡೆಯಲಾಗಿದೆ. ಸಾರಾಂಶ ಹೇಳದೆ ಸಭೆಯಲ್ಲಿ ನಿರ್ಣಯ ಮಂಡಿಸಿದ ಯಡಿಯೂರಪ್ಪ, ನಿರ್ಣಯವೊಂದಕ್ಕೆ ನಿಮ್ಮ ಸಹಮತ ಬೇಕು. ಈ ನಿರ್ಣಯಕ್ಕೆ ಕೈ ಎತ್ತಿ ಎಂದು ಕೇಳಿದಾಗ ಶಾಸಕರು, ಸಂಸದರು ಕೈ ಎತ್ತಿ ಒಪ್ಪಿಗೆ ನೀಡಿದರು ಎಂದು ಹೇಳಲಾಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಶಾಸಕರು ಚೆಲ್ಲಾಪಿಲ್ಲಿಯಾಗಬೇಡಿ. ಅವರ ಜತೆ ಇವರು ಹೋಗ್ತಾರೆ, ಇವರ ಜತೆ ಅವರು ಹೋಗ್ತಾರೆ ಅಂತ ಸುದ್ದಿ ಹರಡಿಸುತ್ತಾರೆ. ಯಾವುದೇ ಗೊಂದಲಗಳಿಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ. ನಿಮ್ಮನ್ನು ಯಾರೇ ಸಂಪರ್ಕ ಮಾಡಲಿ ನಿಮ್ಮ ಬುದ್ಧಿ ನಿಮ್ಮ ಕೈಲಿರಲಿ ಎಂದು ಕಿವಿಮಾತು ಹೇಳಿದರು.

ಸದ್ಯಕ್ಕೆ ನಾವು ಆಪರೇಷನ್‌ ಕಮಲ ಮಾಡಲು ಹೋಗುವುದಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಕಚ್ಚಾಟ ಎಲ್ಲಿವರೆಗೆ ಮುಟ್ಟುತ್ತದೆಯೋ ನೋಡೋಣ. ಅವರ ಗೊಂದಲದಿಂದ ಸರ್ಕಾರ ಬಿದ್ದರೆ ನಾವು ರೆಡಿಯಾಗಿದ್ದೇವೆ. ಮುಂದೆ ನೋಡೋಣ. ಮುಂದೆ ಒಳ್ಳೆಯ ಕಾಲ ಬರುತ್ತದೆ. ನಿಮ್ಮ ಸಮ್ಮತಿ ಎಲ್ಲದಕ್ಕೂ ಇರಲಿ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್‌ ಪ್ರಕರಣ ಯಾವ ಸ್ವರೂಪಕ್ಕಾದರೂ ತಿರುಗಬಹುದು. ಸರ್ಕಾರದ ಪತನಕ್ಕೂ ಇಡಿ ಪ್ರಕರಣ ಕಾರಣವಾಗಬಹುದು. ಸರ್ಕಾರ ಬೀಳುವಷ್ಟರಲ್ಲಿ ಯಾರ್ಯಾರ ಬಂಧನ ಆಗುತ್ತೋ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್‌ ಬಂಧನವಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ವಿಧಾನಪರಿಷತ್‌ ಚುನಾವಣೆಯಲ್ಲಿ ಮೂರು ಸ್ಥಾನ ಗೆಲ್ಲೋದು ಕಷ್ಟ. ಆದರೆ ಚುನಾವಣೆಯಲ್ಲಿ ಏನಾಗುತ್ತದೆ ಅನ್ನೋದನ್ನು ಕಾದು ನೋಡೋಣ ಎಂದೂ ಹೇಳಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈಗೆ ಅಧಿಕಾರ
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಆಪರೇಷನ್‌ ಕಮಲ ನಾವು ಮಾಡುತ್ತಿಲ್ಲ, ಒಂದು ವೇಳೆ ಸರ್ಕಾರ ಬಿದ್ದರೆ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ರಚನೆ ಮಾಡಲು ಯಡಿಯೂರಪ್ಪ ಅವರಿಗೆ ಶಾಸಕಾಂಗ ಪಕ್ಷ ಅಧಿಕಾರ ನೀಡಿದೆ ಎಂದು ಹೇಳಿದರು.
ರಾಜ್ಯದ ಮೈತ್ರಿ ಸರ್ಕಾರದ ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರ ಬೀಳಿಸಲು ಈ ಹಂತದಲ್ಲಿ ನಾವು ಪ್ರಯತ್ನಿಸಲ್ಲ. ಈಗಿನ ಪರಿಸ್ಥಿತಿ ನೋಡಿದರೆ ಸರ್ಕಾರ ತಾನಾಗೇ ಬೀಳುವಂತಿದೆ. ಒಂದೊಮ್ಮೆ ಸರ್ಕಾರ ಬಿದ್ದರೆ ಹೊಸದಾಗಿ ಸರ್ಕಾರ ರಚನೆಗೆ ಯಡಿಯೂರಪ್ಪ ಅವರಿಗೆ ಸಂಪೂರ್ಣ ಬೆಂಬಲ ನೀಡಲಾಗಿದೆ ಎಂದು ಹೇಳಿದರು.

ಚುನಾವಣೆ ತಯಾರಿ ಬಗ್ಗೆ ಚರ್ಚೆ
ಇಂದಿನ ಸಭೆಯಲ್ಲಿ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚಿಸಲಾಗಿದೆ. “ಅಜೇಯ ಭಾರತ್‌ ಅಟಲ್‌ ಬಿಜೆಪಿ’ ಎಂಬ ಘೋಷವಾಕ್ಯದೊಂದಿಗೆ ನಾವು ಚುನಾವಣೆ ಎದುರಿಸುತ್ತೇವೆ. ಅಟಲ್‌ ಜೀ ಅವರ ಕವಿತೆಗಳ ಕವಿಗೋಷ್ಠಿ ಆಯೋಜಿಸಲಾಗುವುದು. ಅವರ ಕವಿತೆಗಳ ಆಡಿಯೋ ಎಲ್ಲ ಕಡೆ ತಲುಪಿಸುವ ಕಾರ್ಯಕ್ರಮ ಮಾಡಲಾಗುವುದು. ಸ್ವತ್ಛ ಭಾರತ ಅಭಿಯಾನ ಸಹ ತೀವ್ರಗೊಳಿಸಲಾಗುವುದು. ಗಾಂಧೀಜಿಯವರ ದಂಡ ಯಾತ್ರೆಯಂತೆ ಅ. 2 ರಿಂದ ಡಿಸೆಂಬರ್‌ 30 ರವರೆಗೆ ಪಾದಯಾತ್ರೆ ನಡೆಸಲಾಗುವುದು. ಪ್ರತಿ ಲೋಕಸಭೆ ಕ್ಷೇತ್ರದಲ್ಲಿ ನಿತ್ಯ 10 ಕಿ.ಮೀ. ಕಾಲು ನಡಿಗೆ ನಡೆಸಲಾಗುವುದು ಎಂದು ಅರವಿಂದ ಲಿಂಬಾವಳಿ ಹೇಳಿದರು.

ಇಂದಿನ ಸಭೆಯಲ್ಲಿ ಹಲವು ಶಾಸಕರು ಗೈರು ಹಾಜರಾಗಿದ್ದರು. ರಾಜ್ಯಾಧ್ಯಕ್ಷರ ಅನುಮತಿ ಪಡೆದೇ ಗೈರಾಗಿದ್ದರು. ಬಾಲಚಂದ್ರ ಜಾರಕಿಹೊಳಿ ಸಹ ಅನುಮತಿ ಪಡೆದಿದ್ದರು. ಆದರೆ, 104 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ.
– ಅರವಿಂದ ಲಿಂಬಾವಳಿ

Comments are closed.