ಕರ್ನಾಟಕ

ಕೊಡಗು: ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಸ್ಥಳ ಗುರುತಿಸಿ: ಕುಮಾರಸ್ವಾಮಿ

Pinterest LinkedIn Tumblr


ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ತಕ್ಷಣವೇ ವಸತಿ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿ ಅವರು ಮಾತನಾಡಿದರು.

ಸಂತ್ರಸ್ತರಿಗೆ ನೆಲೆ ಕಲ್ಪಿಸುವುದರ ಜೊತೆಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
ಪ್ರತಿಯೊಬ್ಬ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರಬಾರದು, ಆ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಮುಕ್ಕೋಡ್ಲು ಗ್ರಾಮದಲ್ಲಿ ಭಾನುವಾರ 60 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎರಡು ಸ್ಥಳಗಳಲ್ಲಿ ಒಟ್ಟು 170 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದರು.

Comments are closed.