ಕರ್ನಾಟಕ

ಅತಿವೃಷ್ಟಿಯಿಂದ ತತ್ತರಿಸಿರುವ ಕೊಡಗಿನಲ್ಲಿ ರಕ್ಷಣಾ ಕಾರ್ಯಾಚರಣೆ; ಹರಿದುಬರುತ್ತಿದೆ ನೆರವಿನ ಮಹಾಪೂರ; ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಜನತೆ

Pinterest LinkedIn Tumblr

ಮಡಿಕೇರಿ: ಗುಡ್ಡ ಕುಸಿತ ಹಾಗೂ ಅತಿವೃಷ್ಟಿಯಿಂದ ತತ್ತರಿಸಿರುವ ಕೊಡಗಿನಲ್ಲಿ ಪ್ರಾಣಾಪಾಯದಲ್ಲಿ ಸಿಲುಕಿದವರ ರಕ್ಷಣಾಕಾರ್ಯ ಮುಂದುವರಿದಿದ್ದು, ಸಾವಿರಾರು ಮಂದಿ ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದಾರೆ. ಇದೇ ವೇಳೆ ರಾಜ್ಯಾದ್ಯಂತ ಜನತೆ ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ್ದು, ನಾನಾ ವಸ್ತುಗಳು, ಹಣದ ರೂಪದಲ್ಲಿ ನೆರವು ಹರಿದು ಬರತೊಡಗಿದೆ.

ಭೂಕುಸಿತಕ್ಕೆ ಸಿಲುಕಿ ಶನಿವಾರ ಇನ್ನೂ ಇಬ್ಬರು ದುರ್ಮರಣಕ್ಕೀಡಾಗಿದ್ದು, ಕಳೆದ ಮೂರು ದಿನಗಳಲ್ಲಿ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ಇನ್ನೂ ಹಲವರು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಮುಕ್ಕೋಡ್ಲು ವಿಭಾಗದಲ್ಲಿ ಸುಮಾರು 250 ಮಂದಿಯನ್ನು ಶನಿವಾರ ಯೋಧರು ಜೀವದ ಹಂಗು ತೊರೆದು ರಕ್ಷಿಸಿ ಕರೆತಂದಿದ್ದಾರೆ. ಇನ್ನೂ ಸುಮಾರು 200 ಮಂದಿ ಬೆಟ್ಟಗುಡ್ಡಗಳಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಕರೆತರುವ ಪ್ರಯತ್ನ ಸಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಶನಿವಾರ ಕೂಡ ಹೆಲಿಕಾಪ್ಟರ್‌ ಬಳಸಲು ಸಾಧ್ಯವಾಗದ ಕಾರಣ ಹಲವರ ಪ್ರಾಣ ಅಪಾಯದಲ್ಲಿದೆ. ಯೋಧರು, ಮಳೆ, ಪ್ರವಾಹದ ನಡುವೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮತ್ತೊಂದು ಬದಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ.

ಮಡಿಕೇರಿ ತಾಲೂಕಿನ ಜೋಡುಪಾಲ, ಸಂಪಾಜೆ, ಅರೆಕಲ್ಲು, ಕಾಟಕೇರಿ ಮುಂತಾದ ಕಡೆಗಳಲ್ಲಿ ಮತ್ತೆ ಭೂಕುಸಿತವಾಗಿದೆ. ಅಲ್ಲಿನ ಗುಡ್ಡ ಜರಿಯುತ್ತಿರುವ ಹಿನ್ನೆಲೆಯಲ್ಲಿ ಅರೆಕಲ್ಲಿನ ಬಹುತೇಕ ಮನೆಗಳಲ್ಲಿದ್ದವರನ್ನು ಸ್ವಯಂ ಸೇವಕರು ತೆರವು ಮಾಡಿದ್ದಾರೆ. ಅದೇ ರೀತಿ ಹಮ್ಮಿಯಾಲ, ಕಾಲೂರು, ಸೂರ್ಲಬ್ಬಿ, ಹೆಬ್ಬೆಟ್ಟಗೇರಿ, ಕಾಲೂರು, ದೇವಸ್ತೂರು ಗ್ರಾಮಗಳಲ್ಲಿ ಇರುವವರನ್ನು ಕರೆತಂದು ಪುನರ್‌ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಗಾಯಗೊಂಡ ಹಾಗೂ ನಿತ್ರಾಣ ಸ್ಥಿತಿಯಲ್ಲಿದ್ದ 60 ಮಂದಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.

ಕುಶಾಲನಗರದ ಬಹುತೇಕ ಬಡಾವಣೆಗಳು ಇನ್ನೂ ನೀರಿನಲ್ಲಿ ಮುಳುಗಿವೆ. ಅದರಲ್ಲಿ ಸಿಲುಕಿಕೊಂಡವರನ್ನು ಶನಿವಾರ ಕೂಡ ಬೋಟ್‌ನ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಮನೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನೀರು ಪಾಲಾಗಿವೆ.

ಮೈಸೂರು, ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಂದ ಹಿರಿಯ ಅಧಿಕಾರಿಗಳು ಕೊಡಗಿನತ್ತ ಧಾವಿಸಿ ಬಂದಿದ್ದು, ಪರಿಹಾರ ಕಾರ್ಯದ ನೇತೃತ್ವ ವಹಿಸಿದ್ದಾರೆ. ಮೈಸೂರಿನ ಕೆ.ಆರ್‌. ಆಸ್ಪತ್ರೆ, ಜೆಎಸ್‌ಎಸ್‌ ಆಸ್ಪತ್ರೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ವೈದ್ಯರ ತಂಡ ಆಗಮಿಸಿ ಜನರ ಶುಶ್ರೂಷೆಯಲ್ಲಿ ತೊಡಗಿದ್ದಾರೆ. ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚುವರಿ ಔಷಧಿಯನ್ನು ಪೂರೈಸಲಾಗಿದೆ.

ಹಿರಿಯ ಪೊಲೀಸ್‌ ಆಧಿಕಾರಿಗಳು, ಕಂದಾಯ ಇಲಾಖೆ, ಅಗ್ನಿ ಶಾಮಕದ ದಳ, ವಿಪತ್ತು ನಿರ್ವಹಣಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಕೂಡ ತಂಡೋಪತಂಡವಾಗಿ ಜಿಲ್ಲೆಗೆ ಬಂದು ಕಾರ್ಯೋನ್ಮುಖರಾಗಿದ್ದಾರೆ. ಸಂಪಾಜೆ, ಜೋಡುಪಾಲದಲ್ಲಿನ ಜನರ ರಕ್ಷಣೆಯ ಹೊಣೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಹಿಸಿಕೊಂಡಿದ್ದಾರೆ. ಆ ವಿಭಾಗದ ಜನರನ್ನು ಸುಳ್ಯದ ಕೆವಿಜಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಸಲಾಗಿದೆ. ಸುಳ್ಯದಲ್ಲಿ ಹಲವು ಮಂದಿಗೆ ಆಶ್ರಯ ನೀಡಲಾಗಿದೆ.

3500 ಮಂದಿ ಆಶ್ರಯ: ಜಿಲ್ಲೆಯಲ್ಲಿ ಒಟ್ಟು 34 ಪುನರ್‌ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ ಸುಮಾರು 3500 ಮಂದಿ ಆಶ್ರಯ ಪಡೆದಿದ್ದಾರೆ. ಇದರ ದುಪ್ಪಟ್ಟು ಮಂದಿ ಬಂಧುಗಳ ಮನೆಯಲ್ಲಿದ್ದಾರೆ. ಸುಮಾರು 5000 ಕ್ಕೂ ಹೆಚ್ಚು ಮಂದಿ ಮನೆಮಠ, ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಉಟ್ಟ ಉಡುಗೆಯಲ್ಲಿ ಈ ಮಂದಿ ಗ್ರಾಮ ತೊರೆದಿದ್ದಾರೆ.

ಹರಿದು ಬಂದ ನೆರವು: ಕೊಡಗು ಮಾತ್ರವಲ್ಲದೆ ರಾಜ್ಯದ ವಿವಿಧೆಡೆಗಳಿಂದ ನೆರವಿನ ಮಹಾಪೂರ ಕೊಡಗಿನತ್ತ ಹರಿದು ಬಂದಿದೆ. ಪುನರ್‌ವಸತಿ ಕೇಂದ್ರದಲ್ಲಿರುವವರಿಗೆ ಸಿದ್ಧ ಆಹಾರ, ಕಂಬಳಿ, ಬಟ್ಟೆ, ಹಾಸಿಗೆ, ಹಾಲನ್ನು ವಿತರಿಸಲಾಗಿದೆ. ಈ ಕೇಂದ್ರಗಳಲ್ಲಿ ಶೌಚಾಲಯಕ್ಕೆ ಪರದಾಡುವಂತಾಗಿದೆ. ಇದೀಗ ಮೈಸೂರಿನಿಂದ 50 ಹಾಗೂ ಬೆಂಗಳೂರಿನಿಂದ 100 ತಾತ್ಕಾಲಿಕ ಶೌಚಾಲಯಗಳನ್ನು ತರಿಸಲಾಗಿದೆ.

Comments are closed.