ಕರ್ನಾಟಕ

ಭೂ ಪರಿವರ್ತನೆಗೆ ಏಕ ಗವಾಕ್ಷಿ ವ್ಯವಸ್ಥೆ

Pinterest LinkedIn Tumblr


ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ, ಲೇಔಟ್‌ ನಕ್ಷೆ ಮತ್ತು ಭೂ ಪರಿವರ್ತನೆಗೆ
ಏಕ ಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಿದ್ದು, ಶೀಘ್ರವೇ ಅನುಷ್ಠಾನಕ್ಕೆ ಬರಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.
ಕಟ್ಟಡ ನಕ್ಷೆ, ನಿವೇಶನ ನಕ್ಷೆಗಳಿಗೆ ನಾಗರಿಕರು 14 ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಈ ವೇಳೆ ಸಾಕಷ್ಟು ಸಮಯ ಹಾಳಾಗುವುದರ ಜತೆಗೆ ಹಲವು ಕಿರುಕುಳ, ಸಮಸ್ಯೆಗಳನ್ನೂ ಎದುರಿಸಬೇಕಾ ಗುತ್ತದೆ. ಆದರೆ, ಏಕ ಗವಾಕ್ಷಿ ವ್ಯವಸ್ಥೆ ಜಾರಿಯಾದರೆ ನಿರಾಕ್ಷೇಪಣಾ ಪತ್ರವನ್ನೂ ಇಲಾಖೆಯೇ ಪಡೆದುಕೊಳ್ಳುತ್ತದೆ. 30 ದಿನಗಳಲ್ಲಿ
ಅರ್ಜಿ ಇತ್ಯರ್ಥಗೊಳಿಸಲಾಗುತ್ತದೆ ಎಂದರು. ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯಲ್ಲೇ ಕುಳಿತು ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ಅರ್ಜಿಯು ಕಟ್ಟಡ ಬೈಲಾ ಮತ್ತು ವಲಯ ನಿಯಂತ್ರಣ ನಿಯಮಾವಳಿ ಪ್ರಕಾರ ಸರಿಯಾಗಿದೆ ಎಂದರೆ ಅದು ಸ್ವೀಕಾರವಾಗುತ್ತದೆ. 30 ದಿನಗಳಲ್ಲಿ ನಕ್ಷೆ ಕೈಸೇರುತ್ತದೆ. ಒಂದೊಮ್ಮೆ 30-40 ಚದರಡಿ ನಿವೇಶನದ ಕಟ್ಟಡ ನಿರ್ಮಾಣವಾದರೆ ಅರ್ಜಿ ಸ್ವೀಕಾರವಾದ ತಕ್ಷಣವೇ
ನಕ್ಷೆಗೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು.

ಅರ್ಜಿಯು ನಿಯಮಾವಳಿ ಪ್ರಕಾರ ಇಲ್ಲ ಎಂದಾದರೆ ಅದು ಸ್ವೀಕಾರವಾಗುವುದಿಲ್ಲ. ಅಂತಹ ವೇಳೆ ಸ್ಥಳ ಪರಿಶೀಲನೆ ನಡೆಸಿ ನಂತರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ನಾಗರಿಕರಿಗೆ ಅನುಕೂಲ ಮಾಡಿಕೊಡುವುದರ ಜತೆಗೆ ನಿರ್ಮಾಣ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಏಕ ಗವಾಕ್ಷಿ ವ್ಯವಸ್ಥೆ
ಜಾರಿಗೊಳಿಸಲಾಗುತ್ತಿದೆ ಎಂದರು. ಏಕ ಗವಾಕ್ಷಿ ವ್ಯವಸ್ಥೆಯಡಿ ಅರ್ಜಿ ಸ್ವೀಕಾರವಾದ ಬಳಿಕ ವಿವಿಧ ಸಂಸ್ಥೆಗಳಿಂದ ನಿರಾಪೇಕ್ಷಣಾ ಪತ್ರವನ್ನು ಆನ್‌ಲೈನ್‌ನಲ್ಲೇ ಕಳುಹಿಸಿಕೊಡಲಾಗುತ್ತದೆ. ಸಂಬಂಧಿಸಿದ ಸಂಸ್ಥೆಗಳು ಏಳು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಅದನ್ನೇ ನಿರಾಕ್ಷೇಪಣಾ ಪತ್ರ ಎಂದು ಪರಿಗಣಿಸಿ 30 ದಿನಗಳೊಳಗೆ ನಕ್ಷೆಗೆ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದರು. ಏಕಗವಾಕ್ಷಿಗೆ ಸಂಬಂಧಿಸಿದ ಸಾಫ್ಟ್ವೇರ್‌ಅನ್ನು ಐಡಿಎಸ್‌ಐ ಟೆಕ್ನಾಲಜೀಸ್‌ ಸಂಸ್ಥೆ ಸಿದ್ಧಪಡಿಸಿದ್ದು ಇದಕ್ಕಾಗಿ 7.46 ಕೋಟಿ ರೂ. ವೆಚ್ಚ ಮಾಡಲಾಗಿದೆ. ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲಾಗುವುದು. ಇದು ಜಾರಿಗೆ ಬಂದರೆ ಕಟ್ಟಡ ನಕ್ಷೆ, ನಿವೇಶನ ನಕ್ಷೆ, ಭೂ ಪರಿವರ್ತನೆಗೆ
ಸಂಬಂಧಿಸಿದ ಶೇ. 80ರಷ್ಟು ಸಮಸ್ಯೆಗಳು ಬಗೆಹರಿಯಲಿದೆ ಎಂದು ಹೇಳಿದರು.

ರೆರಾ ಕಾಯ್ದೆ: 924 ನಿರ್ಮಾಣಗಳು ಕಪ್ಪು ಪಟ್ಟಿಗೆ
ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆಯನ್ವಯ (ರೆರಾ) ನೋಂದಣಿ ಮಾಡಿಕೊಳ್ಳದೆ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿರುವ 924 ನಿರ್ಮಾಣಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಚಿವ ಯು.ಟಿ.ಖಾದರ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೆರಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ನೋಂದಣಿ ಮಾಡಿಕೊಳ್ಳದ ರಿಯಲ್‌ ಎಸ್ಟೇಟ್‌ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ. ರೆರಾ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳದ 1626 ನಿರ್ಮಾಣಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಈ ಪೈಕಿ 604 ಮಂದಿ ಸಮರ್ಪಕ ಉತ್ತರ ನೀಡಿದ್ದಾರೆ. ಆದರೆ, 924 ನಿರ್ಮಾಣಗಳ ಬಗ್ಗೆ ಸಂಬಂಧಿಸಿದ ಸಂಸ್ಥೆಗಳು ನೋಟಿಸ್‌ಗೆ ಉತ್ತರ ನೀಡದೆ ನಿರ್ಲಕ್ಷಿಸಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದರು.
ಪತ್ರಿಕೆಗಳು ಸೇರಿದಂತೆ ರಾಜ್ಯಾದ್ಯಂತ ಹಾಕಿರುವ ಜಾಹೀರಾತು ಆಧರಿಸಿ ಇದುವರೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಗಮನಕ್ಕೆ ಬಾರದೆ ಇನ್ನೂ ಸಾಕಷ್ಟು ನೋಂದಣಿಯಾಗದ ನಿರ್ಮಾಣ ಸಂಸ್ಥೆಗಳು ಇರಬಹುದು. ಈ ಬಗ್ಗೆ ದೂರುಗಳು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ರೆರಾ ಕಾಯ್ದೆ ಜಾರಿಗೆ ಬಂದ ಮೇಲೆ ನಿರ್ಮಾಣ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇದುವರೆಗೆ ರಾಜ್ಯದಲ್ಲಿ 2370 ನಿರ್ಮಾಣ ಯೋಜನೆಗಳ ನೋಂದಣಿಗೆ ಅರ್ಜಿಗಳು ಬಂದಿದ್ದು, 1942 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಅದೇ ರೀತಿ 1215 ಏಜೆಂಟ್‌ಗಳು ನೊಂದಣಿಗಾಗಿ ಅರ್ಜಿ ಸಲ್ಲಿಸಿದ್ದು, 1029 ಏಜೆಂಟರ ನೋಂದಣಿಯಾಗಿದೆ. ಕೆಲವು ಅರ್ಜಿಗಳು ಬಾಕಿ ಇವೆ. ನಿಗದಿತ ಸಮಯದಲ್ಲಿ ಫ್ಲಾಟ್‌ಗಳನ್ನು ನೀಡದಿರುವುದು, ನಿಯಮ ಉಲ್ಲಂಘನೆ ಸೇರಿದಂತೆ ರೆರಾ ಕಾಯ್ದೆಯಡಿ 1037 ದೂರುಗಳು ಬಂದಿದ್ದು, 221 ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು.ರೆರಾ ಕಾಯ್ದೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ನಗರ ಸ್ಥಳೀಯ ಸಂಸ್ಥೆಗಳು ನಿರ್ಮಾಣ ಸಂಸ್ಥೆಗಳಿಗೆ ನಕ್ಷೆ ಅನುಮೋದಿಸುವ ಪ್ರಕರಣಗಳ ಪಟ್ಟಿಯನ್ನು ರೆರಾಗೆ ಸಂಬಂಧಿಸಿದ ಸಂಸ್ಥೆಗೆ ನೇರವಾಗಿ
ಒದಗಿಸುವ ಕೆಲಸ ಮಾಡಲಾಗುವುದು. ಇದರ ಜತೆಗೆ ಭೂ ಮಾಲೀಕರು ಮತ್ತು ನಿರ್ಮಾಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗುವ ಕಟ್ಟಡಗಳಲ್ಲಿ ಲೋಪಗಳಾದರೆ ನಿರ್ಮಾಣ ಸಂಸ್ಥೆಗಳ ಜತೆಗೆ ಭೂ ಮಾಲೀಕರನ್ನೂ ಜವಾಬ್ದಾರಿಮಾಡಲಾಗುವುದು ಎಂದು ತಿಳಿಸಿದರು.

Comments are closed.