ಕರ್ನಾಟಕ

ಚಲಾಯಿಸುತ್ತಿದ್ದ ಬೈಕ್‌ನಲ್ಲೇ ಕುಳಿತು ಯುವತಿಗೆ ಕಾಲಿನಿಂದ ಒದ್ದ

Pinterest LinkedIn Tumblr


ಬೆಂಗಳೂರು: ಕರಿಯಣ್ಣನಪಾಳ್ಯದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರಿಗೆ ಸ್ಕೂಟರ್‌ನಲ್ಲಿ ವೇಗವಾಗಿ ಬಂದ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬಾತ ಕಾಲಿನಿಂದ ಒದ್ದು ಪುಂಡಾಟ ಮೆರೆದಿರುವ ಘಟನೆ ಬಾಣಸವಾಡಿಯ ಕರಿಯಣ್ಣನಪಾಳ್ಯದಲ್ಲಿ ನಡೆದಿದೆ.

ದುಷ್ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ಪಾಡಿಗೆ ತಾನು ಹೋಗುತ್ತಿದ್ದ ಯುವತಿಗೆ ಕಾಲಿನಿಂದ ಒದ್ದಿರುವ ಪುಂಡರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

bike rider
ಚಲಾಯಿಸುತ್ತಿದ್ದ ಬೈಕ್‌ನಲ್ಲೇ ಕುಳಿತು ಯುವತಿಗೆ ಕಾಲಿನಿಂದ ಒದ್ದ

ಏ.22ರಂದು ಸಂಜೆ 6.30ರ ಸುಮಾರಿಗೆ ಯುವತಿಯರಿಬ್ಬರು ಕರಿಯಣ್ಣನಪಾಳ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಇಬ್ಬರು ಯುವಕರಿದ್ದ ಸ್ಕೂಟರ್‌ ವೇಗವಾಗಿ ಬಂದಿದೆ. ಸ್ಕೂಟರ್‌ ಬರುತ್ತಿದ್ದ ವೇಗ ಗಮನಿಸಿ ಯುವತಿಯರು ರಸ್ತೆಯಿಂದ ಪ್ರತ್ಯೇಕವಾಗಿ ಬದಿಗೆ ಸರಿದರು. ಆದರೆ, ಯುವತಿಯರನ್ನು ನೋಡುತ್ತಿದ್ದಂತೆ ಸ್ಕೂಟರ್‌ನಲ್ಲಿದ್ದ ಯುವಕರ ಪೈಕಿ ಹಿಂಬದಿಯಲ್ಲಿ ಕುಳಿತಿದ್ದ ಒರ್ವ, ಯುವತಿಯ ಮೇಲೆ ದೌರ್ಜನ್ಯ ಎಸಗುವ ಉದ್ದೇಶದಿಂದ ಎರಡೂ ಕಾಲುಗಳನ್ನು ಹೊರಕ್ಕೆ ಚಾಚುತ್ತಾನೆ. ಯುವತಿ ಸಂಪೂರ್ಣವಾಗಿ ರಸ್ತೆಯ ಪಕ್ಕಕ್ಕೆ ಹೋದರೂ ಆಕೆಯ ಹತ್ತಿರಕ್ಕೆ ಸ್ಕೂಟರ್‌ ಹೋಗುತ್ತದೆ. ಆಗ ಹಿಂಬದಿ ಸವಾರ ತನ್ನ ಬಲಗಾಲನಿಂದ ಯುವತಿಗೆ ಎದಗೆ ಒದ್ದಿದ್ದಾನೆ. ಪರಿಣಾಮ ಯುವತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಗಾಯಗಳಾಗಿವೆ.

ಘಟನೆ ನಡೆದ ವೇಳೆ ರಸ್ತೆಯಲ್ಲಿ ಸಾಕಷ್ಟು ಜನರು ಓಡಾಡುತ್ತಿದ್ದರು. ಆದರೂ, ದುಷ್ಟ ಯುವಕರು ಅಟ್ಟಹಾಸ ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

”ಘಟನೆಯ ವಿಡಿಯೋ ಗಮನಕ್ಕೆ ಬಂದಿದೆ. ಆದರೆ, ಯಾರೊಬ್ಬರೂ ದೂರು ನೀಡಿಲ್ಲ. ಹೀಗಾಗಿ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಡಿಯೋ ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ,”ಎಂದು ಬಾಣಸವಾಡಿ ಠಾಣೆ ಪೊಲೀಸ್‌ ಅಧಿಕಾರಿ ತಿಳಿಸಿದರು.

Comments are closed.