ಕರ್ನಾಟಕ

ಬಿಜೆಪಿಯಲ್ಲಿ ಭಾರಿ ಗೊಂದಲ :ಬಳ್ಳಾರಿ ರೋಡ್‌ ಶೋ ಕೈ ಬಿಟ್ಟ ಶಾ!

Pinterest LinkedIn Tumblr


ಬೆಂಗಳೂರು: ಅಭ್ಯರ್ಥಿಗಳ ಆಯ್ಕೆ, ಯಡಿಯೂರಪ್ಪ ಪುತ್ರ ವಿಜೆಯೇಂದ್ರ ಟಿಕೆಟ್‌ ಕೈ ತಪ್ಪಿದ ವಿಚಾರ ಸೇರಿದಂತೆ ಹಲವು ಗೊಂದಲಗಳಿಂದಾಗಿ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು , ದಿಢೀರ್‌ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ತಮ್ಮ ಪೂರ್ವ ನಿಯೋಜಿತ ಬಳ್ಳಾರಿ ಪ್ರವಾಸವನ್ನು ರದ್ದು ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿ ಅವರು ರೆಡ್ಡಿ ಅಕ್ರಮಗಳನ್ನು ಪ್ರಸ್ತಾವಿಸಿ ನಿರಂತರ ವಾಗ್‌ಧಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಅಂತರ ಕಾಯ್ದುಕೊಳ್ಳಲು ಶಾ ಪ್ರವಾಸ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

ಶಾ ಅವರು ಮಧ್ಯಾಹ್ನದವರೆಗೆ ಬೆಂಗಳೂರಿನ ಚಾಲುಕ್ಯ ಸರ್ಕಲ್‌ನಲ್ಲಿರುವ ನಿವಾಸದಲ್ಲೆ ಇರಲಿದ್ದು, ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಧ್ಯಾಹ್ನ ನಿಗದಿಯಾದ ಕೊಪ್ಪಳ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಅಮಿತ್‌ ಶಾ ಬೆಳಗ್ಗೆ 10 ಗಂಟೆಯಿಂದ ನಗರ ಕ್ಷೇತ್ರ ವ್ಯಾಪ್ತಿಯ ಕನಕದುರ್ಗಮ್ಮ ದೇವಸ್ಥಾನದಿಂದ ರೋಡ್‌ ಶೋ ನಡೆಸಬೇಕಿತ್ತು.

ಅನಂತ್‌ ಕುಮಾರ್‌, ಸಂತೋಷ್‌ಗೆ ತರಾಟೆ?

ಬಿಜೆಪಿಯಲ್ಲಿನ ಗೊಂದಲಗಳಿಗೆ ಸಂಬಂಧಿಸಿ ಕಳೆದ ರಾತ್ರಿ ನಡೆದ ಸಭೆಯಲ್ಲಿ ಶಾ ಅವರು ಕೇಂದ್ರ ಸಚಿವ ಅನಂತ್‌ಕುಮಾರ್‌ ಮತ್ತು ಸಂಘಟನಾ ಕಾರ್ಯದರ್ಶಿ ಸಂತೋಷ್‌ ವಿರುದ್ಧ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ರಾತ್ರಿ ನಡೆದ ಸಭೆಗೆ ಯಡಿಯೂರಪ್ಪ ಅವರು ಆಗಮಿಸದೆ ಅಸಮಾಧಾನವನ್ನು ಹೊರ ಹಾಕಿರುವುದಾಗಿ ವರದಿಯಾಗಿದೆ. ಶುಕ್ರವಾರ ಬೆಳಗ್ಗೆ ಶಾ ನಿವಾಸಕ್ಕೆ ದೌಡಾಯಿಸಿರುವ ಯಡಿಯೂರಪ್ಪ ಪ್ರಚಾರದ ಕುರಿತು ವಿವರಗಳನ್ನು ನೀಡುತ್ತಿದ್ದಾರೆ.

ಶಾ ಅವರೊಂದಿಗೆ ಪಿಯೂಷ್‌ ಗೋಯಲ್‌, ಮುರಳೀಧರ ರಾವ್‌ ಮತ್ತು ಪ್ರಕಾಶ್‌ ಜಾವ್‌ಡೇಕರ್‌ ಅವರು ಶಾ ಅವರೊಂದಿಗೆ ರಣ ತಂತ್ರ ನಡೆಸುತ್ತಿದ್ದಾರೆ.

-ಉದಯವಾಣಿ

Comments are closed.