ಅಂತರಾಷ್ಟ್ರೀಯ

ನಿಮ್ಮ ವಾಟ್ಸ್ಯಾಪ್‌ ಗ್ರೂಪ್‌ನ ಅಡ್ಮಿನ್‌ ಹೀಗಿದ್ದಾನಾ?

Pinterest LinkedIn Tumblr


ಜಗತ್ತಿನ ಕೆಲವು ಜವಾಬ್ದಾರಿಯುತ ಹುದ್ದೆಗಳಲ್ಲಿ ವಾಟ್ಸ್ಯಾಪ್‌ ಅಡ್ಮಿನ್‌ ಕೂಡ ಒಂದು ಎನ್ನುವ ತಮಾಷೆಯನ್ನು ಯಾವಾಗಲೂ ಕೇಳುತ್ತಲೇ ಇರುತ್ತೇವೆ. ಅಡ್ಮಿನ್‌ನನ್ನು ಕಾಲೆಳೆಯಲು, ಗ್ರೂಪ್‌ ರಚಿಸಿ ಕಿರಿಕಿರಿ ಕೊಡುತ್ತಿದ್ದಾನೆ ಎಂಬುದನ್ನು ಪರೋಕ್ಷವಾಗಿ ಹೇಳಿಕೊಳ್ಳಲು ಅವನ ಮೇಲೆ ನೂರಾರು ಜೋಕುಗಳನ್ನು ಸಿಡಿಸಿ, ಮನರಂಜನೆಯನ್ನೂ ಪಡೆಯುತ್ತೇವೆ. ಆದರೆ, ಅವೆಲ್ಲ ಬಿಡಿ… ಅಡ್ಮಿನ್‌ ಆಗಿ ಎಲ್ಲರನ್ನೂ ಗ್ರೂಪ್‌ನಲ್ಲಿ ಇಟ್ಟುಕೊಳ್ಳೋದು ಒಂದು ಕಲೆ ಎನ್ನುವುದು ನಿಮಗೆ ಗೊತ್ತೇ?

ಹೌದು, ವಾಟ್ಸ್ಯಾಪ್‌ ಗ್ರೂಪ್‌ ಅನ್ನು ಯಾರೂ ರಚಿಸಬಹುದು. ಆದರೆ, ಆ ಗ್ರೂಪ್‌ ಅನ್ನು ಯಶಸ್ವಿಗೊಳಿಸೋ ಗುಟ್ಟು ಕೆಲವರಿಗಷ್ಟೇ ಗೊತ್ತಿರುತ್ತೆ. ಆತ ಬಹಳ ನಾಜೂಕಾಗಿ ತಾನು ರಚಿಸಿದ ಗ್ರೂಪ್‌ನ ಉದ್ದೇಶಗಳನ್ನು ಸಾಕಾರಗೊಳಿಸುತ್ತಿರುತ್ತಾನೆ. ಅಷ್ಟಕ್ಕೂ ಯಶಸ್ವಿ ಅಡ್ಮಿನ್‌ಗೂ ಒಂದಿಷ್ಟು ಲಕ್ಷಣಗಳು ಇವೆಯಂತೆ. ಅವೇನು ಗೊತ್ತೇ?

– ಅಡ್ಮಿನ್‌ ಒಬ್ಬ ಕೂಡು ಕುಟುಂಬದ ಯಜಮಾನ ಇದ್ದಂತೆ. ಅವನಿಗೆ ಯಾರನ್ನೂ ಹರ್ಟ್‌ ಮಾಡುವ ಉದ್ದೇಶವಿರುವುದಿಲ್ಲ. ಹಾಗೇನಾದರೂ ಮನ ನೋಯಿಸಿದರೆ, ಆತ ಯಶಸ್ವಿ ಅಡ್ಮಿನ್‌ ಆಗಲು ಅರ್ಹನಲ್ಲ.

– ಯಶಸ್ವಿ ಅಡ್ಮಿನ್‌ ಯಾವತ್ತೂ ಗುಡ್‌ ಮಾರ್ನಿಂಗ್‌, ಗುಡ್‌ನೈಟ್‌ ಮೆಸೇಜುಗಳನ್ನು ಕಳಿಸುವುದಿಲ್ಲ. ಅಶ್ಲೀಲವಾಗಿ ಸಂದೇಶಗಳನ್ನು ರವಾನಿಸುವುದಿಲ್ಲ.

– ಯಾವ ಉದ್ದೇಶಕ್ಕಾಗಿ ವಾಟ್ಸ್ಯಾಪ್‌ ಗ್ರೂಪ್‌ ರಚನೆಯಾಗಿದೆ ಎಂಬುದರ ಅರಿವು ಆತನೊಳಗೆ ಸದಾ ಇರುತ್ತೆ. ಹಾಗಾಗಿ, ಆತ ಅದಕ್ಕೆ ಪೂರಕವಾದಂಥ ಸಂದೇಶಗಳನ್ನೇ ತನ್ನ ಗ್ರೂಪ್‌ನಲ್ಲಿ ಹಾಕುತ್ತಿರುತ್ತಾನೆ.

– ನಾಲ್ಕು ಜನ ಇದ್ದಲ್ಲಿ ಜಗಳ, ಮನಸ್ತಾಪ ಇದ್ದಿದ್ದೇ. ಆ ಸತ್ಯ ಅಡ್ಮಿನ್‌ಗೂ ಗೊತ್ತಿರಬೇಕು. ಅವರನ್ನು ಸಮಾಧಾನಪಡಿಸಿ, ನ್ಯಾಯಯುತವಾಗಿ ಬುದ್ಧಿಹೇಳುವ ಕೆಲಸವನ್ನು ಆತ ಮಾಡುತ್ತಾನೆ.

– ಗ್ರೂಪ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ, ಬೇರೆ ವಿಚಾರವನ್ನು ಪ್ರಸ್ತಾಪಿಸಿ, ಚರ್ಚೆಯ ಹಳಿ ತಪ್ಪಿಸುವ ಕೆಲಸವನ್ನು ಯಶಸ್ವಿ ಅಡ್ಮಿನ್‌ ಎಂದೂ ಮಾಡುವುದಿಲ್ಲ.

– ದಿನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಅಡ್ಮಿನ್‌, ಗ್ರೂಪ್‌ಗೆ ಸಂಬಂಧಿಸಿದ ವಿಚಾರಗಳನ್ನು ಪೋಸ್ಟ್‌ ಮಾಡುತ್ತಾನೆ.

– ಚರ್ಚೆಯ ವೇಳೆ ಯಾರಾದರೂ ಕೋಪಗೊಂಡು ಗ್ರೂಪ್‌ ತ್ಯಜಿಸಿದರೆ (ಲೆಫ್ಟ್ ಆದರೆ) ಅವರ ಬಗ್ಗೆ ಆತ ಹಗುರವಾಗಿ ಮಾತಾಡುವುದಿಲ್ಲ. ವೈಯಕ್ತಿಕವಾಗಿ ಅವರನ್ನು ಸಂಪರ್ಕಿಸಿ, ಪುನಃ ಗ್ರೂಪ್‌ಗೆ ಸೇರಿಸುವ ಕಲೆ ಆತನಿಗೆ ಗೊತ್ತಿರುತ್ತೆ.

– ಫೇಕ್‌ನ್ಯೂಸ್‌ಗಳನ್ನು ಪೋಷಿಸುವ ಕೆಲಸವನ್ನು ಆತ ಎಂದಿಗೂ ಮಾಡುವುದಿಲ್ಲ.

-ಉದಯವಾಣಿ

Comments are closed.