ಕರ್ನಾಟಕ

ಅಪಘಾತಕ್ಕೀಡಾಗಿ ವ್ಯಕ್ತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ …ರಕ್ಷಿಸದೆ ವಿಡಿಯೋ ಮಾಡಿದ ಜನ !

Pinterest LinkedIn Tumblr

ಬೆಂಗಳೂರು: ಮತ್ತೊಂದು ಅಮಾನವೀಯ ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ. ಅಪಘಾತಕ್ಕೀಡಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ರಕ್ಷಣೆಗೆ ಧಾವಿಸಿದ ಸಾರ್ವಜನಿಕರು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಮಾಡುಕೊಳ್ಳುತ್ತಿದ್ದ ಘಟನೆ ನಗರದ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.

ರಾಜರಾಜೇಶ್ವರಿ ನಗರದ ಪಂಚಶೀಲಾ ಲೇಔಟ್ ನಿವಾಸಿ ಮದನ್ ಲಾಲ್ (34) ಅಪಘಾತಕ್ಕೀಡಾದ ವ್ಯಕ್ತಿಯಾಗಿದ್ದಾರೆ.

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೇ ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಬ್ಯಾಟರಾಯನಪುರ ಪೇದೆ ಸೋಮಸುಂದರ್ ಅವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಮದನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ಮದನ್ ಲಾಲ್ ಅವರು ನಿನ್ನೆ ಬೆಳಿಗ್ಗೆ 9.30 ಸುಮಾರಿಗೆ ನಾಯಂಡಹಳ್ಳಿ ಜಂಕ್ಷನ್ ನಿಂದ ನಾಗರಬಾವಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಅದೇ ಸಮಯಕ್ಕೆ ಆ ಮಾರ್ಗದಲ್ಲಿ ಬಂದ ಟಿಪ್ಪರ್ ಲಾರಿ ಹಿಂದಿನಿಂದ ಮದನ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಕೆಳಗೆ ಬಿದ್ದ ಮದನ್ ಅವರ ಮೇಲೆ ಲಾರಿ ಚಕ್ರಗಳು ಹರಿದಿವೆ. ಬಳಿಕ ಟಿಪ್ಪರ್ ಲಾರಿ, ಮುಂದೆ ಹೋಗುತ್ತಿದ್ದ ಕಾರಿಗೆ ಅಪ್ಪಳಸಿದೆ. ಆದರೆ, ಘಟನೆ ನಡೆದ ಕೂಡಲೇ ರಕ್ಷಣೆಗೆ ಧಾವಿಸದ ಸಾರ್ವಜನಿಕರು, ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಗಾಯಾಳು ಸಂಕಷ್ಟಮಯ ಪರಿಸ್ಥಿತಿಯ ದೃಶ್ಯವನ್ನು ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಳ್ಳಲು ಆರಂಭಿಸಿದ್ದಾರೆ.

ಬಳಿಕ ಸ್ಥಳಕ್ಕಾಗಮಿಸಿದ ಪೇದೆ ಸೋಮಸುಂದರ್ ಅವರು, ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ತಕ್ಷಣವೇ ಮದನ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮದನ್ ಅವರ ಕುಟುಂಬದವನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಸಾರ್ವಜನಿಕರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದರು. ಹೀಗಾಗಿ ಆ್ಯಂಬುಲೆನ್ಸ್ ಗಾಗಿ ಕಾಯುತ್ತಿದ್ದರು. ಆದರೆ, ಮದನ್ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದ ರಕ್ತ ಹರಿದು ಹೋಗುತ್ತಿತ್ತು. ಅಪಘಾತಕ್ಕೀಡಾದ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಕೊಡಿಸುವುದು ಅತ್ಯಂತ ಪ್ರಮುಖವಾಗಿದ್ದು, ಹೀಗಾಗಿ ನಮ್ಮ ಸಿಬ್ಬಂದಿ ಗೂಡ್ಸ್ ಆಟೋದಲ್ಲಿ ಗಾಯಾಳುವನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಇದೀಗ ಲಾರಿ ಚಾಲಕ ಪಾಲಾಕ್ಷ ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದೆ. ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತಕ್ಕೀಡಾಗಿ ಸಂಕಷ್ಟದಲ್ಲಿದ್ದ ಗಾಯಾಳುವಿಗೆ ಸಹಾಯ ಹಸ್ತ ಚಾಚಿ ಕರ್ತವ್ಯ ನಿಷ್ಠೆ ಮೆರೆದ ಪೇದೆ ಸೋಮಸುಂದರ್ ಅವರಿಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ.

Comments are closed.