ಕರ್ನಾಟಕ

ಸಿದ್ದರಾಮಯ್ಯ ಸೂಚನೆ ಮೇರೆಗೆ ಶಶಿಕಲಾಗೆ ಜೈಲಲ್ಲಿ ರಾಜಾತಿಥ್ಯ?

Pinterest LinkedIn Tumblr


ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಶಶಿಕಲಾ ನಟರಾಜನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗಿತ್ತು ಎಂದು ನಿವೃತ್ತ ಐಪಿಎಸ್‌ ಅಧಿಕಾರಿ, ಆಗಿನ ಕಾರಾಗೃಹಗಳ ಡಿಜಿಪಿಯಾಗಿದ್ದ ಎಚ್‌.ಎನ್‌ ಸತ್ಯನಾರಾಯಣರಾವ್‌ ಹೇಳಿಕೆ ನೀಡಿರುವುದು ಹೊಸ ಗೊಂದಲ ಹುಟ್ಟು ಹಾಕಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯನಾರಾಯಣ ರಾವ್‌ ಅವರು ‘ಪ್ರಕರಣ ಹೈಕೋರ್ಟ್‌ನಲ್ಲಿದ್ದು ಈ ಬಗ್ಗೆ ಹೆಚ್ಚೇನು ಹೇಳುವುದಿಲ್ಲ. ಎಲ್ಲಾ ಸಾಕ್ಷಾಧಾರ ಕೋರ್ಟ್‌ನಲ್ಲಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಯ ಮೇರೆಗೆ ಶಶಿಕಲಾಗೆ ಸವಲತ್ತು ನೀಡಲು ಸೂಚಿಸಿದ್ದೆ’ ಎಂದು ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸ್ಪಷ್ಟನೆ
ವಿಚಾರದ ಗಂಭೀರತೆಯನ್ನು ಅರಿತ ಸಿಎಂ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

‘ತಮಿಳುನಾಡಿನ ಒಂದು ನಿಯೋಗ ಬಂದು ನನ್ನನ್ನು ಭೇಟಿ ಮಾಡಿ ಜೈಲಿನಲ್ಲಿ ಶಶಿಕಲಾಗೆ ಚಾಪೆ, ದಿಂಬನ್ನೂ ನೀಡಲಾಗಿಲ್ಲ ಎಂದಿತ್ತು. ಆ ಬಳಿಕ ನಾನು ಸತ್ಯನಾರಾಯಣ ರಾವ್‌ ಅವರಿಗೆ ಜೈಲಿನ ನಿಯಮಾವಳಿ ಪ್ರಕಾರ ಸವಲತ್ತು ನೀಡಿ ಎಂದಿದ್ದೆ ಅಷ್ಟೇ, ವಿಶೇಷ ಸವಲತ್ತು ನೀಡಲು ಸೂಚನೆ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

-ಉದಯವಾಣಿ

Comments are closed.