ಕರ್ನಾಟಕ

ಎಲೆಕ್ಟ್ರಿಕ್‌ ವಾಹನಗಳ ರಿಚಾರ್ಜ್‌ ಕೇಂದ್ರ ಆರಂಭ

Pinterest LinkedIn Tumblr


ಬೆಂಗಳೂರು: ವಿದ್ಯುತ್‌ ಚಾಲಿತ ವಾಹನಗಳಿಗಾಗಿ ಕೆ.ಆರ್‌.ವೃತ್ತ ಸಮೀಪದ ಬೆಸ್ಕಾಂ ಕಚೇರಿಯಲ್ಲಿ ಅಳವಡಿಸಿರುವ ನೂತನ ರಿಚಾರ್ಜ್‌ ಕೇಂದ್ರಕ್ಕೆ ಸೋಮವಾರ ಚಾಲನೆ ದೊರೆಯಿತು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಎರಡು ಚಾರ್ಜ್‌ ಯಂತ್ರಗಳಿರುವ ರಿಚಾರ್ಜ್‌ ಕೇಂದ್ರವನ್ನು ಉದ್ಘಾಟಿಸಿದರು. 24 ಗಂಟೆ ತೆರೆದಿರುವ ಈ ಕೇಂದ್ರದಲ್ಲಿ ಸಾರ್ವಜನಿಕರು ತಮ್ಮ ಎಲೆಕ್ಟ್ರಿಕ್‌ ವಾಹನಗಳನ್ನು ಕಡಿಮೆ ದರದಲ್ಲಿ ರಿಚಾರ್ಜ್‌ ಮಾಡಬಹುದು. ಸೆಮಾ ಕನೆಕ್ಟ್ ಹಾಗೂ ಆರ್‌ಆರ್‌ಟಿ ಎಲೆಕ್ಟ್ರೊ ಪವರ್‌ ಕಂಪನಿಗಳು ಎರಡು ಕಡೆ ಅಳವಡಿಸಿರುವ ಯಂತ್ರಗಳು 15 ಕಿಲೊ ವ್ಯಾಟ್‌ ಸಾಮರ್ಥ್ಯ‌ ಹೊಂದಿವೆ. ಎಲೆಕ್ಟ್ರಿಕ್‌ ಕಾರನ್ನು ಸತತ 1.20 ಗಂಟೆ ಚಾರ್ಜ್‌ ಮಾಡಿದರೆ ಸುಮಾರು 125 ಕಿ.ಮೀ. ದೂರ ಕ್ರಮಿಸಬಹುದು. ಇದೇ ರೀತಿ ದಿನಕ್ಕೆ 20 ಕಾರುಗಳನ್ನು ಚಾರ್ಜ್‌ ಮಾಡಬಹುದು. ಎಲೆಕ್ಟ್ರಿಕ್‌ ವಾಹನ ಉಳ್ಳವರು ಮನೆಯಲ್ಲಿ ಚಾರ್ಜ್‌ ಮಾಡಿದರೆ ಪ್ರತಿ ಯುನಿಟ್‌ಗೆ 6 ರಿಂದ 7 ರೂ. ಪಾವತಿಸಬೇಕು. ಈ ಕೇಂದ್ರದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಚಾರ್ಜ್‌ ಮಾಡಿದರೆ 4.85 ರೂ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಚಾರ್ಜ್‌ ಮಾಡಿದರೆ 3.85 ರೂ. ಪಾವತಿಸಬೇಕು. ಒಂದು ಯಂತ್ರ ಅಳವಡಿಸಲು 5 ಲಕ್ಷ ರೂ. ಖರ್ಚಾಗಿದೆ.

ನಗರದಲ್ಲಿ ಇದೇ ಬಗೆಯ ಕೇಂದ್ರಗಳನ್ನು ಬೆಸ್ಕಾಂನ 10 ಕಚೇರಿಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಯಲಹಂಕದ ಡಿ.ಬಿ.ರಸ್ತೆ, ಜಾಲಹಳ್ಳಿ ಸಮೀಪದ ಗೆಳೆಯರ ಬಳಗ ಲೇಔಟ್‌, ಬನಶಂಕರಿ 2 ನೇ ಹಂತದ 22 ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್‌ 1 ನೇ ಹಂತ, ಜೆ.ಪಿ.ನಗರ 1 ನೇ ಹಂತ, ಪಾಂಡುರಂಗ ನಗರ, ವೈಟ್‌ಫೀಲ್ಡ್‌ನ ಇಮ್ಮಡಹಳ್ಳಿ, ಎಚ್‌ಎಎಲ್‌ 2 ನೇ ಹಂತದ 2 ನೇ ಕ್ರಾಸ್‌ ರಸ್ತೆ, ಪಿಳ್ಳಣ್ಣ ಗಾರ್ಡನ್‌ ರಸ್ತೆ, ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ಎರಡು ಕೇಂದ್ರಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಬಿಎಂಆರ್‌ಸಿಎಲ್‌ ಹಾಗೂ ಬಿಬಿಎಂಪಿಯ ಆಸ್ತಿಗಳಲ್ಲಿ ಸುಮಾರು 300 ಸ್ಥಳಗಳಲ್ಲಿ ಕೇಂದ್ರ ಆರಂಭಿಸಲು ಚರ್ಚೆಯಾಗಿದೆ. ಸದ್ಯಕ್ಕೆ 65 ಸ್ಥಳಗಳಲ್ಲಿ ಕಾರ್ಯಸಾಧ್ಯತಾ ಅಧ್ಯಯನ ನಡೆದಿದೆ.

100 ಎಲೆಕ್ಟ್ರಿಕ್‌ ಕಾರು ಹೊರಗುತ್ತಿಗೆ

ಬೆಸ್ಕಾಂನಲ್ಲಿ ಬಳಕೆಯಾಗುತ್ತಿರುವ 1,500 ಕಾರುಗಳನ್ನು ಎಲೆಕ್ಟ್ರಿಕ್‌ ಕಾರುಗಳಿಗೆ ಬದಲಿಸಲು ತೀರ್ಮಾನಿಸಿದ್ದು, ಮೊದಲ ಹಂತದಲ್ಲಿ 5 ಕಾರುಗಳನ್ನು ಪಡೆಯಲಾಗಿದೆ. ಭಾಗೀರಥಿ ಕಂಪನಿಯು ಹೊರಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಕಾರು ಸೇವೆ ನೀಡಲಿದೆ. ಕೆಲವೇ ತಿಂಗಳಲ್ಲಿ 100 ಕಾರುಗಳನ್ನು ಎಲೆಕ್ಟ್ರಿಕ್‌ ಕಾರುಗಳಿಗೆ ಬದಲಿಸಲಾಗುತ್ತದೆ. ಡೀಸೆಲ್‌ ಕಾರು ಒಂದು ಕಿ.ಮೀ. ಕ್ರಮಿಸಲು 4 ರೂ. ಮೌಲ್ಯದ ಡೀಸೆಲ್‌ ಬಳಕೆಯಾಗುತ್ತದೆ. ಎಲೆಕ್ಟ್ರಿಕ್‌ ಕಾರಿನಲ್ಲಿ ಒಂದು ಕಿ.ಮೀ. ಕ್ರಮಿಸಲು ವಿದ್ಯುತ್‌ಗೆ 1 ರೂ. ಖರ್ಚಾಗುತ್ತದೆ. 125 ಕಿ.ಮೀ. ಚಲಿಸುವಷ್ಟು ಚಾರ್ಜ್‌ ಮಾಡಲು 75 ರೂ. ಖರ್ಚಾಗುತ್ತದೆ.

ಮಹಿಳಾ ಡ್ರೈವರ್‌

ಹೊರಗುತ್ತಿಗೆ ಆಧಾರದಲ್ಲಿ ಬೆಸ್ಕಾಂ ಪಡೆದ ಐದು ಕಾರುಗಳಿಗೆ ಮಹಿಳಾ ಡ್ರೈವರ್‌ ಇರಲಿದ್ದಾರೆ. ‘‘15 ವರ್ಷದಿಂದ ಕಾರು ಚಾಲಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಕೆಲ ಕಂಪನಿಗಳ ಟ್ಯಾಕ್ಸಿ, ಶಾಲೆಗಳ ಬಸ್‌ ಚಾಲಕಿಯಾಗಿ ಕಾರ್ಯನಿರ್ವಹಿಸಿದ್ದೆ. ಎಲೆಕ್ಟ್ರಿಕ್‌ ಕಾರು ಪೆಟ್ರೋಲ್‌ ಕಾರಿಗಿಂತ ಸುಲಭ ಚಾಲನೆಯ ಲಕ್ಷಣ ಹೊಂದಿದೆ. ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆವರೆಗೆ ಕೆಲಸ ಮಾಡಲಿದ್ದೇನೆ,’’ ಎಂದು ಹೆಬ್ಬಾಳ ನಿವಾಸಿ, 55 ವರ್ಷದ ಮಂಜುಳ ವಯ್ಯಾರ್‌ ತಿಳಿಸಿದರು. ಭಾಗೀರಥಿ ಕಂಪನಿಯಲ್ಲಿ 500 ಮಹಿಳಾ ಚಾಲಕಿಯರಿದ್ದು, ಬೆಸ್ಕಾಂಗೆ ಒದಗಿಸಲಿರುವ ಕಾರುಗಳನ್ನು ಚಲಾಯಿಸಲು 50 ಚಾಲಕರಿಗೆ ತರಬೇತಿ ನೀಡಲಾಗಿದೆ.

ಹೊಸದಾಗಿ ಆರಂಭಿಸಿದ ರಿಚಾರ್ಜ್‌ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ವಿದ್ಯುತ್‌ ಸಿಗಲಿದೆ. ರಿಯಾಯಿತಿ ಪ್ರಮಾಣ ಇನ್ನೂ ಹೆಚ್ಚಿಸುವಂತೆ ವಿದ್ಯುತ್‌ ಶಕ್ತಿ ದರ ನಿಯಂತ್ರಣ ಆಯೋಗಕ್ಕೆ ಕೋರಲಾಗಿದೆ.
-ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

ಬೆಸ್ಕಾಂನಲ್ಲಿರುವ ಎಲ್ಲ 1,500 ಪೆಟ್ರೋಲ್‌, ಡೀಸೆಲ್‌ ಕಾರುಗಳನ್ನು ಎಲೆಕ್ಟ್ರಿಕ್‌ ಕಾರುಗಳಿಗೆ ಬದಲಿಸಲು ಉದ್ದೇಶಿಸಲಾಗಿದೆ. ನಗರದಲ್ಲಿ ಸುಮಾರು 100 ರಿಚಾರ್ಜ್‌ ಕೇಂದ್ರ ಆರಂಭಿಸುವ ಚರ್ಚೆ ನಡೆದಿದೆ.
-ರಾಜೇಂದ್ರ ಚೋಳನ್‌, ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ

Comments are closed.