ಬೆಂಗಳೂರು: ಕಳ್ಳತನ ಮಾಡಲು ಕೊಟ್ಟಿಗೆಪಾಳ್ಯದ ಆಕ್ಸಿಸ್ ಬ್ಯಾಂಕ್ ಎಟಿಎಂ ಘಟಕಕ್ಕೆ ನುಗ್ಗಿದ್ದ ಹರೀಶ್ (35) ಎಂಬಾತ ಕಾಮಾಕ್ಷಿಪಾಳ್ಯ ಠಾಣೆಯ ಗಸ್ತು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಉತ್ತರಾಂಚಲದ ಹರೀಶ್, 15 ವರ್ಷಗಳಿಂದ ಕೊಟ್ಟಿಗೆಪಾಳ್ಯದಲ್ಲಿ ನೆಲೆಸಿದ್ದಾನೆ. ಸುಂಕದಕಟ್ಟೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುವ ಆತನಿಗೆ, ಈ ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿ ಇಲ್ಲ ಎಂಬ ವಿಚಾರ ಗೊತ್ತಿತ್ತು. ಹೀಗಾಗಿ, ಎಟಿಎಂ ಯಂತ್ರವನ್ನು ಬಿಚ್ಚಿ ಹಣ ದೋಚಲು ಹಲವು ದಿನಗಳಿಂದ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ನಸುಕಿನಲ್ಲಿ (3 ಗಂಟೆ ಸುಮಾರಿಗೆ) ಘಟಕದೊಳಗೆ ಹೋಗಿದ್ದ ಆರೋಪಿ, ಸ್ಕ್ರೂಡ್ರೈವರ್ನಿಂದ ಯಂತ್ರವನ್ನು ಬಿಚ್ಚಿದ್ದ. ಅದೇ ಸಮಯದಲ್ಲಿ ಕೊಟ್ಟಿಗೆಪಾಳ್ಯಕ್ಕೆ ಗಸ್ತು ಬಂದ ಎಎಸ್ಐ ರಾಜಣ್ಣ ಹಾಗೂ ಕಾನ್ಸ್ಟೆಬಲ್ ಬೆಳ್ಳಿಯಪ್ಪ, ಘಟಕದೊಳಗೆ ವ್ಯಕ್ತಿಯೊಬ್ಬ ಇರುವುದನ್ನು ಕಂಡು ವಾಹನ ನಿಲ್ಲಿಸಿದ್ದಾರೆ.
ಹೊಯ್ಸಳ ವಾಹನ ನೋಡುತ್ತಿದ್ದಂತೆಯೇ ಹೊರಗೆ ಬಂದ ಹರೀಶ್, ಕಟ್ಟಡದ ಮೊದಲ ಮಹಡಿಗೆ ಓಡಿದ್ದಾನೆ. ಆಗ ಸಿಬ್ಬಂದಿ ಬೆನ್ನಟ್ಟಿ ಆತನನ್ನು ಹಿಡಿದುಕೊಂಡಿದ್ದಾರೆ.
‘ಸ್ನೇಹಿತರ ಬಳಿ ಸಾಲ ಮಾಡಿದ್ದೆ. ಸಕಾಲಕ್ಕೆ ಹಣ ಮರಳಿಸದ ಕಾರಣಕ್ಕೆ ಅವರು ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದರು. ಹೀಗಾಗಿ, ಹಣ ದೋಚಲು ಸಂಚು ರೂಪಿಸಿದ್ದೆ. ಮೊದಲೆಲ್ಲ ಹಣ ಡ್ರಾ ಮಾಡಲು ಇದೇ ಎಟಿಎಂ ಘಟಕಕ್ಕೆ ಬರುತ್ತಿದ್ದ ನಾನು, ಸೆಕ್ಯುರಿಟಿ ಗಾರ್ಡ್ ಇರುವುದನ್ನು ಒಮ್ಮೆಯೂ ನೋಡಿರಲಿಲ್ಲ. ಹೀಗಾಗಿ, ಕಳ್ಳತನಕ್ಕೆ ಇದೇ ಘಟಕ ಸೂಕ್ತವೆಂದು ಸಂಚು ರೂಪಿಸಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
‘ಯಂತ್ರದ ಮಾನಿಟರ್ ಬಿಚ್ಚಿದ್ದ ಆರೋಪಿಗೆ, ನಗದು ಪೆಟ್ಟಿಗೆ (ಕ್ಯಾಷ್ ಬಾಕ್ಸ್) ತೆಗೆಯಲು ಸಾಧ್ಯವಾಗಿರಲಿಲ್ಲ. ಸಿಬ್ಬಂದಿ ಹೋಗುವುದು 15 ನಿಮಿಷ ತಡವಾಗಿದ್ದರೂ, ಆ ಪೆಟ್ಟಿಗೆಯನ್ನು ಒಡೆದು ಹಣದೊಂದಿಗೆ ಪರಾರಿಯಾಗುತ್ತಿದ್ದ. ಎಟಿಎಂಗೆ ಭದ್ರತೆ ಒದಗಿಸದ ಕಾರಣಕ್ಕೆ ಆಕ್ಸಿಸ್ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧವೂ ಕ್ರಮ ಜರುಗಿಸಲಾಗುವುದು. ವಿಚಾರಣೆಗೆ ಬರುವಂತೆ ಈಗಾಗಲೇ ನೋಟಿಸ್ ಕಳುಹಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.