ಕರ್ನಾಟಕ

ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿ ಕುರಿತು ಸಿದ್ದರಾಮಯ್ಯ ನೀಡಿರುವ ಸ್ಪಷ್ಟನೆ ಏನು…?

Pinterest LinkedIn Tumblr

ಬೆಂಗಳೂರು: ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿ ಎಂಬ ಸಮೀಕ್ಷೆಯ ವರದಿ ಕುರಿತಂತೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅದು ನಮ್ಮ ಅವಿಭಕ್ತ ಕುಟುಂಬದ ಆಸ್ತಿ ಲೆಕ್ಕವಾಗಿದ್ದು, 6ಕೋಟಿ ಜನರೇ ನನ್ನ ಆಸ್ತಿ ಎಂದು ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೂ.13 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ನಾನು ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿ ಎಂದು ಸಮೀಕ್ಷೆಯೊಂದು ಹೇಳಿದೆ. ಅದು ನಮ್ಮ ಅವಿಭಕ್ತ ಕುಟುಂಬದ ಆಸ್ತಿಯ ಲೆಕ್ಕವಾಗಿದೆ. 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ, ತಮ್ಮಂದಿರ ಆಸ್ತಿಗಳ ವಿವರವನ್ನೂ ಆಯೋಗಕ್ಕೆ ಸಲ್ಲಿಸಿದ್ದೆ ಎಂದು ಹೇಳಿದ್ದಾರೆ.

ಅಣ್ಣನ ನಿಧನದ ಬಳಿಕ ನಾನೇ ಮನೆಯ ಯಜಮಾನನಾದೆ. ಈಗ ಕುಟುಂಬದ ಆಸ್ತಿಯನ್ನು ವಿಭಜಿಸಲಾಗಿದೆ. ನನ್ನ ನಿಜವಾದ ಆಸ್ತಿ ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಕಿಡಿಕಾರಿದ ಅವರು, ನಮ್ಮದು 10 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿರುವ ಮೋದಿಯವರು, ಮುಂದಿನ ಸಲ ನಗರಕ್ಕೆ ಬರುವಾಗ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇದೇ ವಿಚಾರವನ್ನು ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಅವರಿಗೂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ನಮ್ಮ ಸರ್ಕಾರದಲ್ಲಿ ಯಾವುದೇ ಕಮಿಷನ್ ವ್ಯವಹಾರವಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಹ ವ್ಯವಹಾರನಡೆದಿದೆ. ಅದು 100 ಪರ್ಸೆಂಟ್ ಕಮಿಷನ್ ಸರ್ಕಾರವಾಗಿತ್ತು ಎಂದು ತಿಳಿಸಿದ್ದಾರೆ.

Comments are closed.