ಕರ್ನಾಟಕ

ರಾಜಸ್ಥಾನದ ಪೋಕ್ರಾನ್’ನಲ್ಲಿ ಬಾಂಬ್ ಸ್ಫೋಟ: ದಾವಣೆಗೆರೆ ಯೋಧ ಹುತಾತ್ಮ

Pinterest LinkedIn Tumblr

ಹರಿಹರ: ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯ ಪೋಖ್ರಾನ್‌ನಲ್ಲಿ ಸೋಮವಾರ ಸೇನಾ ತರಬೇತಿ ವೇಳೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಇಲ್ಲಿನ ಕಾಳಿದಾಸ ನಗರದ ಯೋಧ ಜಾವಿದ್‌ ಅಬ್ದುಲ್ ಖಾದರ್‌ಸಾಬ್‌ (31) ಬಲಿಯಾಗಿದ್ದಾರೆ.

ಅವರು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ)ನಲ್ಲಿ ನಾಯಕ್ ಹುದ್ದೆಯಲ್ಲಿದ್ದರು. ನಗರದ ವ್ಯಾಪಾರಿ ಅಬ್ದುಲ್ ಖಾದರ್‌ಸಾಬ್‌ ಹಾಗೂ ಫಾತಿಮಾಬಿ ದಂಪತಿಯ ಐದು ಮಕ್ಕಳ ಪೈಕಿ ಜಾವಿದ್‌ ಎರಡನೆಯವರು. ಅವರಿಗೆ ಪತ್ನಿ ಸರ್ತಾಜ್‌ ಬಾನು, ಪುತ್ರಿಯರಾದ ಅಮೀನಾ ಕೈಸರ್‌ (3) ಹಾಗೂ ಒಂದೂವರೆ ವರ್ಷದ ಜವೇರಾ ಆಯತ್‌ ಇದ್ದಾರೆ.

‘ನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಜಾವಿದ್‌ ಮೊಬೈಲ್‌ ಮೂಲಕ ಮನೆಯವರೊಂದಿಗೆ ಮಾತನಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ತಾಯಿಯೊಂದಿಗೆ ಮಾತನಾಡಿದ್ದರು. ಮಧ್ಯಾಹ್ನ 3.30ಕ್ಕೆ ಸರ್ತಾಜ್‌ ಬಾನು ಅವರಿಗೆ ಕರೆ ಮಾಡಿ, ತರಬೇತಿ ನೀಡಲು ಪೋಖ್ರಾನ್‌ಗೆ ತೆರಳುತ್ತಿರುವುದಾಗಿ ಮಾಹಿತಿ ನೀಡಿದ್ದರು. ಸೋಮವಾರ ರಾತ್ರಿ ಕರೆಯ ನಿರೀಕ್ಷೆಯಲ್ಲಿದ್ದ ತಾಯಿಗೆ ಮಗನ ಸಾವಿನ ಸುದ್ದಿ ಬಂತು’ ಎಂದು ಕುಟುಂಬದವರು ಮಾಹಿತಿ ನೀಡಿದರು.

ಜಾವಿದ್‌ ಮನೆಯಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ. ಅಬ್ದುಲ್‌ ಖಾದರ್‌ ಸಾಬ್‌ ಮನಸ್ಸಿನಲ್ಲಿ ನೋವು ತುಂಬಿಕೊಂಡಿದ್ದರೂ, ಮನೆಯ ಮುಂದೆ ಶಾಮಿಯಾನ ಹಾಕಿಸುವುದರಲ್ಲಿ ತೊಡಗಿಕೊಂಡಿದ್ದರು. ‘ಮಗನ ಸಾವು ನೋವು ನೀಡುತ್ತಿದ್ದರೂ, ದೇಶಕ್ಕಾಗಿ ಹುತಾತ್ಮನಾಗಿದ್ದಾನೆ ಎಂಬುದು ಹೆಮ್ಮೆಯ ಸಂಗತಿ’ ಎಂದು ಹೇಳುವಾಗ ಅಬ್ದುಲ್‌ ಖಾದರ್‌ ಸಾಬ್‌ ಅವರ ಕಣ್ಣಾಲಿಗಳು ತುಂಬಿಬಂದವು.

ಜಾವಿದ್‌ ಪಾರ್ಥಿವ ಶರೀರವನ್ನು ಬುಧವಾರ ಬೆಳಿಗ್ಗೆ 11ಕ್ಕೆ ಜೋಧಪುರದಿಂದ ಬೆಂಗಳೂರಿಗೆ ವಿಮಾನದ ಮೂಲಕ ತರಲಾಗುತ್ತದೆ. ಬೆಂಗಳೂರಿನಿಂದ ವಾಹನದ ಮೂಲಕ ತಡರಾತ್ರಿ 1 ಗಂಟೆಗೆ ನಗರಕ್ಕೆ ತರಲಾಗುವುದು. ನಗರದ ಈದ್ಗಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ನಗರದ ಎಂ.ಆರ್‌.ಬಿ. ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದಿದ್ದ ಜಾವಿದ್‌, ಎಸ್‌ಜೆವಿಪಿ ಪಿಯು ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ 2005ರಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದರು. ಅದೇ ವರ್ಷ ಸೇನೆಗೆ ಸೇರಿದ್ದ ಅವರು, ದೂರಶಿಕ್ಷಣದ ಮೂಲಕ ಬಿ.ಕಾಂ. ಪದವಿಯನ್ನೂ ಪಡೆದಿದ್ದರು.

* ಜಾವಿದ್‌ಗೆ ಚಿಕ್ಕಂದಿನಿಂದಲೇ ಸೇನೆಗೆ ಸೇರಬೇಕೆಂಬ ಹಂಬಲವಿತ್ತು. ಪಿಯುಸಿ ಓದುತ್ತಿದ್ದಾಗ ಯಾರಿಗೂ ಮಾಹಿತಿ ನೀಡದೆ ಸೇನೆಗೆ ಅರ್ಜಿ ಹಾಕಿ, ಕೆಲಸಕ್ಕೆ ಸೇರಿದ್ದ.

– ಮಹಮದ್ ಅಲಿ, ಪಿಯುಸಿ ಸ್ನೇಹಿತ, ಹರಿಹರ

Comments are closed.