ಕರ್ನಾಟಕ

ಆರ್‌ಎಸ್‌ಎಸ್‌ನಿಂದ ಕೇಂದ್ರ ಸರ್ಕಾರದ ನೀತಿ ನಿರೂಪಣೆ: ರಾಹುಲ್​ ಆರೋಪ

Pinterest LinkedIn Tumblr


ಕಲಬುರ್ಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಕೇಂದ್ರ ಸರ್ಕಾರದ ನೀತಿ ನಿರೂಪಕನಂತೆ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಪ್ರತಿ ಇಲಾಖೆಗೆ ಆರ್‌ಎಸ್‌ಎಸ್‌ ಮಾರ್ಗದರ್ಶಕರಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರು.

ಜನಾಶೀರ್ವಾದ ಯಾತ್ರೆಯ ನಾಲ್ಕನೇ ದಿನವಾದ ಮಂಗಳವಾರ ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ನವೋದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣತರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

ಸಭಿಕರೊಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಸರ್ಕಾರ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳ ತಜ್ಞರ ಸಲಹೆ ಪಡೆಯುತ್ತಿಲ್ಲ. ಆರ್‌ಎಸ್‌ಎಸ್‌ ಹೇಳಿದಂತೆ ನಡೆಯುತ್ತಿದೆ ಎಂದರು.

ನೋಟು ರದ್ದತಿ ಆರ್‌ಬಿಐ, ಅರುಣ್‌ ಜೇಟ್ಲಿ ಅಥವಾ ಹಣಕಾಸು ಇಲಾಖೆ ಅಧಿಕಾರಿಗಳು ನೀಡಿದ ಸಲಹೆಯಲ್ಲ. ಆರ್‌ಎಸ್‌ಎಸ್‌ ವ್ಯಕ್ತಿಯೊಬ್ಬರು ನೀಡಿದ್ದ ಸಲಹೆಯನ್ನು ಮೋದಿ ಅವರು ಅನುಷ್ಠಾನಗೊಳಿಸಿದರು. ಕಪ್ಪುಹಣ ಬಿಳಿಯಾಗಿಸಲು ಪ್ರಧಾನಿ ಕೈಗೊಂಡು ಆರ್ಥಿಕ ಸುಧಾರಣೆ ಎಂದು ವ್ಯಂಗ್ಯವಾಡಿದರು.

ಜಿಎಸ್‌ಟಿಯನ್ನು ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಎಂದು ಮತ್ತೆ ಜರಿದ ಅವರು, ಜಿಎಸ್‌ಟಿ ನಿಯಮಗಳು ಸರಳವಾಗಿಲ್ಲ. ವ್ಯಾಪಾರಿಗಳಿಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸರಳಗೊಳಿಸಲಾಗುವುದು ಎಂದರು.

ಭಾರತದ ವಿದೇಶಾಂಗ ನೀತಿಯೂ ಸರಿಯಿಲ್ಲ. ರಷ್ಯಾ ಸೇರಿ ಭಾರತದ ಹಳೆಯ ಮಿತ್ರರಾಷ್ಟ್ರಗಳು ನಮ್ಮಿಂದ ದೂರವಾಗಿವೆ. ಏಷ್ಯಾದಲ್ಲಿ ಭಾರತ ಏಕಾಂಗಿಯಾಗಿದೆ ಎಂದು ಆತಂಕ ಹೊರಹಾಕಿದರು.

ಮದುವೆ ಪ್ರಶ್ನೆಗೆ ಧನ್ಯವಾದ ಎಂದ ರಾಹುಲ್!
ಸಂವಾದದಲ್ಲಿ ನಿಮ್ಮ ಮದುವೆ ಯಾವಾಗ? ಎಂಬ ಮಾತು ಕೇಳಿಬಂದು. ಪ್ರತಿಕ್ರಿಯಿಸಿದ ರಾಹುಲ್‌, ಈ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದ. ವೇದಿಕೆ ಮೇಲಿರುವ ಮುಖಂಡರೂ ಇದೇ ಪ್ರಶ್ನೆ ಕೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರತ್ತ ನೋಡಿ ನಸುನಕ್ಕರು.

ರಾಹುಲ್ ಗಾಂಧಿ ಪರ ಎಚ್‌.ಡಿ.ಕುಮಾರಸ್ವಾಮಿ ಬ್ಯಾಟಿಂಗ್‌!
ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪೇನು? ‘ಕೆಲವು ದೇವರಿಗೆ ಮಾಂಸವೇ ಪ್ರಿಯವಾಗಿದೆ. ದೇಹವೇ ಮಾಂಸದ ಮುದ್ದೆಯಾಗಿದ್ದು, ಮನಸ್ಸೇ ಶುದ್ಧ ಇಲ್ಲ ಅಂದ್ರೆ, ದೇವಸ್ಥಾನಕ್ಕೆ ಹೋಗಿ ಏನು ಪ್ರಯೋಜನ. ಈ ವಿಚಾರಕ್ಕೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್‌ಡಿಕೆ ಹೇಳಿದರು.

ದಿ.ಖಮರುಲ್ ಇಸ್ಲಾಂ, ಧರಂಸಿಂಗ್​ ಮನೆಗೆ ಭೇಟಿ
ಧರಂಸಿಂಗ್ ಹಾಗೂ ಖಮರುಲ್ ಇಸ್ಲಾಂ ನಿವಾಸಕ್ಕೆ ಭೇಟಿ ರಾಹುಲ್​ ಭೇಟಿ ನೀಡಿದರು. ಖಮರುಲ್ ಇಸ್ಲಾಂ ಪತ್ನಿ ಖನಿಜ್ ಫಾತೀಮಾ, ಪುತ್ರ ಸೇರಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಸದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ ಇದ್ದರು.

ಮಹಿಳೆಯರನ್ನು ನೋಡಲು ಬಯಸುತ್ತೇನೆ
ರಾಜಕೀಯದಲ್ಲಿ ಹೆಚ್ಚು ಹೆಚ್ಚು ಮಹಿಳೆಯರನ್ನು ನೋಡಲು ಬಯಸುತ್ತೇನೆ ಮಹಿಳಾ ಮುಖ್ಯಮಂತ್ರಿಗಳು, ಸಚಿವರು ಜಾಸ್ತಿ ಆಗುವಂತೆ ಮಾಡಬೇಕು. ಅದನ್ನು ನೋಡಬೇಕು ಎನ್ನುವುದು ನನ್ನ ಆಸೆ ಎಂದು ಮನದ ಮಾತು ಬಿಚ್ಚಿಟ್ಟರು.

ಅನುಭಾವ ಮಂಟಪಕ್ಕೆ ಭೇಟಿ
ಅನುಭಾವ ಮಂಟಪಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಬಸವಣ್ಣನವರ ವಚನ ಹೇಳಿದರು. ಬಸವಣ್ಣನ ಕ್ರಾಂತಿ ಬಗ್ಗೆ ಮಾಹಿತಿ ಪಡೆದರು. ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೆವರು ಮಾಹಿತಿ ನೀಡಿದರು.

ಈ ಬಾರಿ ಬಜೆಟ್‌ನಲ್ಲಿ ನೂತನ ಅನುಭವ ಮಂಟಪಕ್ಕೆ 650 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Comments are closed.