ಕರ್ನಾಟಕ

ದೇವಸ್ಥಾನಕ್ಕೆ ಹೋಗುವುದು ನನಗೆ ಇಷ್ಟ, ದೇವರ ದರ್ಶನ ಮುಂದುವರೆಯಲಿದೆ: ರಾಹುಲ್

Pinterest LinkedIn Tumblr

ಜೇವರ್ಗಿ: ದೇವಸ್ಥಾನಕ್ಕೆ ಹೋಗುವುದು ನನಗೆ ಇಷ್ಟ. ಹೀಗಾಗಿ ನಾನು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ ಮತ್ತು ಅದು ಮುಂದುವರೆಯಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿಯ ‘ಮೃದು ಹಿಂದೂತ್ವ’ ಟೀಕೆಗೆ ಸೋಮವಾರ ತಿರುಗೇಟು ನೀಡಿದ್ದಾರೆ.

ಕಳೆದ ಶನಿವಾರ ಹೊಸಪೇಟೆಯಿಂದ ಆರಂಭವಾದ ಕಾಂಗ್ರೆಸ್ ಜನಾರ್ಶೀವಾದ ಯಾತ್ರೆ ಇಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಲುಪಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ದೇವಸ್ಥಾನಕ್ಕೆ ಹೋಗುವುದು ನನಗೆ ಇಷ್ಟ. ದಾರಿಯ ಮಧ್ಯೆ ಸಿಗುವ ದೇವಸ್ಥಾನ ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ. ಇದರಿಂದ ನನಗೆ ಸಂತೋಷವಾಗುತ್ತದೆ ಮತ್ತು ಇದು ಮುಂದುವರೆಯಲಿದೆ ಎಂದಿದ್ದಾರೆ.

ರಾಹುಲ್ ಗಾಂಧಿಯ ದೇವಸ್ಥಾನ ಭೇಟಿಯ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ರಾಹುಲ್ ಗಾಂಧಿ ದೇವಾಲಯ ಭೇಟಿ ರಾಜಕೀಯ ಗಿಮಿಕ್ ಆಗಿದ್ದು, ಅದು ಗುಜರಾತ್ ಚುನಾವಣೆಯಿಂದ ಆರಂಭವಾಗಿದೆ. ಅಲ್ಲದೆ ಇತರೆ ಬಿಜೆಪಿ ನಾಯಕರು ರಾಹುಲ್ ದೇವಸ್ಥಾನ ಭೇಟಿ ‘ಮೃದು ಹಿಂದೂತ್ವ’ ಎಂದು ಟೀಕಿಸಿದ್ದರು.

ನಾಲ್ಕು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು, ಹುಲಿಗೆಮ್ಮ ದೇವಸ್ಥಾನ, ಗವಿ ಸಿದ್ದೇಶ್ವರ ಮಠ ಹಾಗೂ ರಾಯಚೂರಿನಲ್ಲಿ ದರ್ಗಾಗೆ ಭೇಟಿ ನೀಡಿದ್ದರು.

Comments are closed.