ಕರ್ನಾಟಕ

ಹುಲಿಗೆ ಆಹಾರವಾದ ಅಲಾಗುರಾಜ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ ಪರಿಹಾರ

Pinterest LinkedIn Tumblr


ಬನ್ನೇರುಘಟ್ಟ: ರಾಷ್ಟ್ರೀಯ ಉದ್ಯಾನವನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕ ಅಲಾಗುರಾಜ ಹುಲಿಗೆ ಆಹಾರ ನೀಡಲು ಹೋಗಿ ತಾವೇ ಹುಲಿ ಬಾಯಿಗೆ ಆಹಾರವಾಗಿ ನಾಲ್ಕು ತಿಂಗಳೇ ಕಳೆದರೂ ಅವರ ಕುಟುಂಬದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಬನ್ನೇರುಘಟ್ಟ ಪಂಚಾಯಿತಿಯ ಹಕ್ಕಿಪಿಕ್ಕಿ ಕಾಲೊನಿಯ ನಿವಾಸಿಯಾಗಿದ್ದ ಅಲಾಗುರಾಜ ರಾಷ್ಟ್ರೀಯ ಉದ್ಯಾನವನದಲ್ಲಿ ಕೆಲಸ ಮಾಡುತ್ತಿದ್ದರು. ಹುಲಿಗೆ ಆಹಾರ ನೀಡಲು ಹೋದಾಗ ಇದ್ದಕ್ಕಿದ್ದಂತೆ ಬೋನ್‌ ಓಪನ್‌ ಆಗಿ ಹುಲಿ ಇವರನ್ನು ಬಲಿ ಪಡೆದಿತ್ತು. ಈ ಸಂಬಂಧ ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಅಲಾಗುರಾಜ ಅವರ ಪಾರ್ಥಿವ ಶರೀರವನ್ನು ಉದ್ಯಾನವನದ ಗೇಟ್‌ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ್ದರು.

ಹೋರಾಟಕ್ಕೆ ಮಣಿದ ಅಧಿಕಾರಿಗಳಾದ ಕಾರ್ಯನಿರ್ವಾಹಕ ನಿರ್ದೇಶಕ ಗೋಕುಲ್‌, ಡಿಡಿ ಕುಶಾಲಪ್ಪ , ಅಧ್ಯಕ್ಷ ಮಲ್ಲಿಗೆ ವೀರೇಶ್‌ ಅವರು ಸೇರಿಕೊಂಡು ನಮ್ಮ ಇಲಾಖೆ ಅಧಿಕಾರಿಗಳಿಂದಲೇ ತಪ್ಪಾಗಿದೆ ಎಂದು ಆತನ ಪತ್ನಿ ಅಕ್ಕಮಹಾದೇವಮ್ಮ ಅವರಿಗೆ ಕೇಳಿಕೊಂಡು ”ನಿಮ್ಮ ಮಗನಿಗೆ ಕೆಲಸ ಕೊಡುತ್ತೆವೆ . ನಿಮ್ಮ ಮನೆಗೆ 10 ಲಕ್ಷ ಹಣ ಕೊಡುತ್ತೇವೆ,” ಭರವಸೆ ನೀಡಿದ್ದರು.

ಇದಾದ ಮೇಲೆ ಐದು ಲಕ್ಷ ರೂ ಪರಿಹಾರ ಲಭಿಸಿದೆ. ನಾಲ್ಕು ತಿಂಗಳು ಕಳೆದ ಮೇಲೆ ಇನ್ನೂ ಐದು ಲಕ್ಷಕ್ಕಾಗಿ ಅಲೆದಾಟ ಶುರುವಾಗಿದ್ದು, ಪ್ರಾಧಿಕಾರದಿಂದ ಬರಬೇಕು ಬಂದ ಮೇಲೆ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿ ಕಳುಹಿಸುತ್ತಿದ್ದಾರೆ. 4 ತಿಂಗಳಾದರೂ ಪ್ರಾಧಿಕಾರದವರು ಹಣ ಇನ್ನೂ ಕೊಟ್ಟಿಲ್ಲ. ಇದನ್ನು ಪ್ರಶ್ನಿಸಿ ಪ್ರತಿದಿನ ಅಲಾಗುರಾಜ ಅವರ ಪತ್ನಿ ಅಕ್ಕಮಹಾದೇವಮ್ಮ ಹಾಗೂ ಮಗ ದೇವರಾಜ್‌ ಅಧಿಕಾರಿಗಳ ಮುಂದೆ ಪ್ರತಿದಿನವೂ ಪರೇಡ್‌ ನಡೆಸುತ್ತಿದ್ದಾರೆ.

”ಪ್ರತಿನಿತ್ಯ ಮನೆಯಿಂದ ಬನ್ನೇರುಘಟ್ಟ ಉದ್ಯಾನವನಕ್ಕೆ ಬಂದು ಹೋಗಿ ಮಾಡುತ್ತಿದ್ದರೂ ಅಧಿಕಾರಿಗಳು ಸಹಿ ಆಗಿಲ್ಲ. ಸರಕಾರ ಇನ್ನು ಆರ್ಡರ್‌ ಮಾಡಿಲ್ಲ ಎಂದು ಅಧಿಕಾರಿಗಳು ನಮಗೆ ಬೈದು ಕಳಿಹಿಸುತ್ತಿದ್ದಾರೆ. ಮಗನಿಗೆ ಕೆಲಸವೂ ಸಿಕ್ಕಿಲ್ಲ. ಪರಿಹಾರವೂ ಸಿಕ್ಕಿಲ್ಲ. ಪ್ರತಿದಿನ ಉದ್ಯಾನವನದ ಗೇಟ್‌ ಮುಂದೆ ಬಂದು ಕಾಯುವುದೇ ಆಗಿದೆ. ನಮಗೆ ಮಾತನಾಡಲು ಅವಕಾಶ ಮಾಡಿಕೊಡದೆ ಅಧಿಕಾರಿಗಳು ನಮ್ಮನ್ನು ಳಗೆ ಬಿಡದಂತೆ ಆರ್ಡರ್‌ ಮಾಡಿದ್ದಾರೆ. ಗಂಡನನ್ನು ಕಳೆದುಕೊಂಡ ಮೇಲೆ ಜೀವನ ನಡೆಸುವುದು ಕಷ್ಟವಾಗಿದೆ ಪರಿಹಾರ ಕೊಡಿಸಿ,” ಎಂದು ಅಕ್ಕಮಹಾದೇವಮ್ಮ ಕೇಳಿಕೊಳ್ಳುತ್ತಿದ್ದಾರೆ.

”ಮಗನಾದ ದೇವರಾಜ್‌ ತನ್ನ ತಂದೆಯ ಕೆಲಸ ತನಗೆ ಸಿಗುತ್ತದೆ ಎಂದು ಕಾದು ಕುಳಿತಿದ್ದಾನೆ. ಹುಲಿಯ ಬೋನ್‌ ಸರಿಯಾಗಿ ಇದ್ದಿದ್ರೆ ಈ ಅನಾಹುತ ಆಗುತ್ತಿರಲಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಮಗನಿಗೆ ಕೆಲಸ ಕೊಡಬೇಕು ಉಳಿದ 5ಲಕ್ಷ ರೂ. ಹಣ ಕೊಡಬೇಕು. ನಾವು ಕೇಳಿದರೆ ಒಂದು ವಾರ ಬಿಟ್ಟು ಬಾ ಎಂದು ಹೇಳಿ ಕಳಿಸುತ್ತಿದ್ದರೆ. 4 ತಿಂಗಳಿನಿಂದ ಸುತ್ತಿ ಸುತ್ತಿ ಸಾಕಾಗಿದೆ. ಮನೆಗೆ ದುಡಿದು ಬರುತ್ತಿದ್ದ ಗಂಡ ಇಲ್ಲದ ಮೇಲೆ ನಮಗೇನು ಆದಾಯ ಇಲ್ಲ. ಮಗನಿಗೆ ಕೆಲಸ ಕೊಟ್ಟರೆ ನಮ್ಮ ಮನೆ ನಡೆಯುತ್ತದೆ,” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉದ್ಯಾನವನದ ಡೆಪ್ಯೋಟಿ ನಿರ್ದೇಶಕ ಕುಶಾಲಪ್ಪ, ನಾವು ಕೊಡಬೇಕಿದ್ದ ಐದು ಲಕ್ಷ ರೂ.ಗಳನ್ನು ನೀಡಲಾಗಿದೆ. ಸರಕಾರ ಕೊಡಬೇಕಿರುವ ಐದು ಲಕ್ಷ ಹಣ ಇನ್ನೂ ಬಂದಿಲ್ಲ. ಅಲಗುರಾಜ ಕುಟುಂಬ ಪ್ರತಿನಿತ್ಯ ಇಲ್ಲಿಗೆ ಬಂದು ಹೋಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರು ತಿಂಗಳ ಹಿಂದೆ ಬಂದು ಹೋಗಿದ್ದರು ಎಂದು ತಿಳಿಸಿದ್ದಾರೆ.

ಬೆಂಬಲ: ಇನ್ನು ಅಧಿಕಾರಿಗಳು ಅಲಾಗುರಾಜ ಮಗನಿಗೆ ಕೆಲಸ ಕೊಡದೆ ಮತ್ತು ಬಾಕಿ ಇರುವ ಹಣ 5ಲಕ್ಷ ರೂಪಾಯಿ ಕೊಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರಜಾಪರಿವರ್ತನ ಪಕ್ಷ ಹೇಳುತ್ತಿದೆ. ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಅಧಿಕಾರಿಗಳು ಇನ್ನಾದರೂ ಆ ಬಡ ಕುಟುಂಬದ ನೋವು ತಿಳಿದುಕೊಡು ಸಹಾಯ ಮಾಡಬೇಕು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

Comments are closed.