ಕರ್ನಾಟಕ

ಫೆಬ್ರವರಿ 4ರಂದು ‘ಬೆಂಗಳೂರು ಬಂದ್’ ಇಲ್ಲ….ಮೋದಿ ನಗರಕ್ಕೆ ಬರುವ ದಿನ ಕರಾಳ ದಿನ ಆಚರಣೆ

Pinterest LinkedIn Tumblr

ಬೆಂಗಳೂರು: ಬೆಂಗಳೂರು ಬಂದ್ ಅಸಂವಿಧಾನಿಕ ಎಂದು ಹೈಕೋರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ನಾಳೆ ಕರೆ ನೀಡಿದ್ದ ಬೆಂಗಳೂರು ಬಂದ್ ಅನ್ನು ಹಿಂಪಡೆದಿದ್ದು, ಕೇವಲ ಕರಾಳ ದಿನ ಆಚರಿಸುವುದಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ವಿವಾದ ಇತ್ಯಾರ್ಥಪಡಿಸಬೇಕು ಎಂದು ಒತ್ತಾಯಿಸಿ ಫೆಬ್ರವರಿ 4ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ‘ಬೆಂಗಳೂರು ಬಂದ್’ಗೆ ನಿನ್ನೆ ಹೈಕೋರ್ಟ್ ತಡೆ ನೀಡಿದೆ.

ಹೈಕೋರ್ಟ್ ತೀರ್ಪಿನ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಹೈಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ಮಹದಾಯಿಗಾಗಿ ನಮ್ಮ ಹೋರಾಟ ಮುಂದುವರೆಯಲಿದ್ದು, ಮೋದಿ ರಾಜ್ಯಕ್ಕೆ ಬರುವ ದಿನವನ್ನು ಕರಾಳ ದಿನವಾಗಿ ಆಚರಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಫ್ರೀಡಂ ಪಾರ್ಕ್ ನಿಂದ ಪ್ರಧಾನಿ ಮೋದಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಲಿರುವ ಅರಮನೆ ಮೈದಾನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ಮಹದಾಯಿ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಪ್ರಧಾನಿಗಳ ಗಮನ ಸೆಳೆಯಲು ಫೆಬ್ರವರಿ 4 ರಂದು ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ಬಿಜೆಪಿ ಕನ್ನಡಪರ ಸಂಘಟನೆಗಳ ವಿರುದ್ಧ ಪಿತೂರಿ ನಡೆಸಿ, ಪ್ರತಿಭಟನೆಯನ್ನು ತಡೆದಿದೆ ಎಂದು ಆರೋಪಿಸಿದರು.

‘ಬೆಂಗಳೂರು ಬಂದ್’ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್ ಜಿ ರಮೇಶ್ ನೇತೃತ್ವದ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬಂದ್ ಮಾಡುವಂತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಲು ಕ್ರಮ ಕೈಗೊಳ್ಳಿ ಮತ್ತು ಜನಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

Comments are closed.