ಕರ್ನಾಟಕ

2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ರಾಹುಲ್‌ ಗಾಂಧಿಗೆ ಪ್ರಥಮ ಕೊಡುಗೆ ನೀಡಲಿದೆ: ಸಿದ್ದರಾಮಯ್ಯ

Pinterest LinkedIn Tumblr

ಯಾದಗಿರಿ: ‘ಗುಜರಾತ್‌ನಲ್ಲಿ ಬಿಜೆಪಿ ಗೆದ್ದಿರಬಹುದು ಆದರೆ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿಗೆ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಪ್ರಥಮ ಕೊಡುಗೆ ನೀಡಲಿದೆ’ ಎಂದು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಹಾಗೂ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಗುಜರಾತ್‌ನವರು. ಹಿಂದುತ್ವದ ಪ್ರಭಾವ ಬೀರಿ, ಹಣದ ಹೊಳೆ ಹರಿಸಿ ಗೆಲುವು ಪಡೆದಿದ್ದಾರೆ. ಆದರೆ, ಕಳೆದ ಬಾರಿಗಿಂತ ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಇದು ರಾಹುಲ್‌ ಗಾಂಧಿಯನ್ನು ಅಲ್ಲಿನ ಜನರು ನಿಧಾನವಾಗಿ ಬೆಂಬಲಿಸುತ್ತಿರುವುದರ ಸೂಚಕವಾಗಿದೆ’ ಎಂದು ವಿಶ್ಲೇಷಿಸಿದರು.

‘ಗುಜರಾತ್‌ನಲ್ಲಿ ಬಿಜೆಪಿ ಆಡಳಿತದ ಬಗ್ಗೆ ವಿರೋಧಿ ಅಲೆ ಇದೆ. ಈ ಮಧ್ಯೆಯೂ ಬಿಜೆಪಿ ಬಹುಮತ ಪಡೆದಿರುವುದು ವಿದ್ಯುನ್ಮಾನ ಮತಯಂತ್ರಗಳಲ್ಲಿನ ಲೋಪಕ್ಕೆ ಪುಷ್ಟಿ ನೀಡಿದೆ. ಮತಗಳ ಲೆಕ್ಕಾಚಾರ ನೋಡಿದರೆ ನಾವು ಸಮಬಲದ ಹೋರಾಟ ನಡೆಸಿದ್ದೇವೆ’ ಎಂದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದೆ’ ಎಂದು ಆರೋಪಿಸಿದರು.

‘ಗುಜರಾತ್‌ನಲ್ಲಿ ಶಂಕರ್ ವಘೇಲಾ ಅವರು ಕಾಂಗ್ರೆಸ್‌ ಪಕ್ಷ ತ್ಯಜಿಸಿದ್ದರಿಂದ ಯಾವುದೇ ಪರಿಣಾಮ ಬೀರಿಲ್ಲ. ಜತೆಗೆ, ಒಂದು ರಾಜ್ಯದ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಪರಿಣಾಮ ಉಂಟು ಮಾಡುವುದಿಲ್ಲ’ ಎಂದರು.

Comments are closed.