ಕರ್ನಾಟಕ

ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಹೇಳಿದ್ದೇನು..?

Pinterest LinkedIn Tumblr

ಕಾರವಾರ/ಕುಮಟಾ: ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ನೀಡಿದ್ದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು ಎಂದು ಕುಮಟಾ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.

ವೈಯಕ್ತಿಕ ಹಿತಾಸಕ್ತಿಗಾಗಿ ಧರ್ಮದ ಆಧಾರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಕೋಮು ಭಾವನೆಗಳನ್ನು ಕೆರಳಿಸುವ ಷಡ್ಯಂತ್ರವನ್ನು ಮಾಡಲಾಗುತ್ತಿದೆ.

ರಾಜಕೀಯ ಪಕ್ಷದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿದ್ದ ಎಲ್ಲ ಆರೋಪಗಳನ್ನು ಸಂಗ್ರಹಿಸಿ ತನಿಖಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಕಳುಹಿಸಿದ್ದರು. ಆ ಪ್ರಶ್ನೆಗಳಿಗೆ ಇಂದು ಉತ್ತರ ಲಭಿಸಿದ್ದು, ಸತ್ಯಾಂಶ ಏನೆಂಬುದು ಇಲ್ಲಿ ಸ್ಪಷ್ಟವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕಾ ಪ್ರಕಟಣೆಯಲ್ಲಿರುವ ಆರೋಪಗಳು ಸುಳ್ಳು ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವರದಿಯಿಂದ ಸಾಬೀತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಹಾಗೂ ಪತ್ರಿಕಾ ಪ್ರಕಟಣೆ ವೈಯಕ್ತಿಕ ಹಿತಾಸಕ್ತಿಗಾಗಿ ಅಮಾಯಕ ಮನಸ್ಸುಗಳನ್ನು ಕೋಮು ದ್ವೇಷದ ಮೂಲಕ ವಿಭಜಿಸುವ ತಂತ್ರವಾಗಿದೆ.

ಕುಮಟಾದಲ್ಲಿ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಮತ್ತು ಹೊನ್ನಾವರದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿಂಬಾಳ್ಕರ್ ಹೇಳಿದ್ದಾರೆ.

Comments are closed.