ಕರ್ನಾಟಕ

ಬಿಜೆಪಿಯ ಹಲವು ಶಾಸಕರು ತಮ್ಮ ಜೊತೆ ಕಾಂಗ್ರೆಸ್ ಸೇರಲು ಸಂಪರ್ಕದಲ್ಲಿದ್ದಾರೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

ಮೈಸೂರು: ಬಿಜೆಪಿಯ ಹಲವು ಶಾಸಕರು ತಮ್ಮ ಜೊತೆ ಕಾಂಗ್ರೆಸ್ ಸೇರಲು ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯ ಶಾಸಕರು ಮತ್ತು ಅವರ ಕ್ಷೇತ್ರಗಳನ್ನು ಹೆಸರಿಸಲು ನಿರಾಕರಿಸಿದ ಮುಖ್ಯಮಂತ್ರಿ, ಈ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ತಮ್ಮ ಕ್ಷೇತ್ರದ ಜನರು ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್ ಸೇರಲು ಒಲವು ತೋರುತ್ತಿದ್ದಾರೆ ಎಂದರು.

ನಿನ್ನೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಉಮೇಶ್ ಕತ್ತಿ ನನಗೆ ಉತ್ತಮ ಸ್ನೇಹಿತ. ಹಲವು ವರ್ಷಗಳಿಂದ ನಾವು ಒಬ್ಬರಿಗೊಬ್ಬರು ಬಲ್ಲೆವು. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ಅವರು ಬಯಕೆ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕರ ಗೆಲುವಿನ ಸಾಮರ್ಥ್ಯವನ್ನು ನೋಡಿಕೊಂಡು ಅವರು ಕಾಂಗ್ರೆಸ್ ಬರುವುದಾದರೆ ಸೇರಿಸಿಕೊಳ್ಳಲು ಸಿದ್ಧ ಎಂದರು.

ಗುಜರಾತ್ ರಾಜ್ಯದ ಜನತೆ ಬದಲಾವಣೆಗೆ ಈಗಾಗಲೇ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಅಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ನಾನು ಗುಜರಾತ್ ನಲ್ಲಿ ಪ್ರಚಾರ ಮಾಡಲು ಹೋಗದಿರುವುದರಿಂದ ಫಲಿತಾಂಶ ಹೀಗೆಯೇ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸ್ಫರ್ಧೆ ಎದುರಿಸಲಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಜನರ ಮನೋಧರ್ಮವನ್ನು ಮೊದಲೇ ನಿಶ್ಚಯಿಸಲು ಸಾಧ್ಯವಿಲ್ಲ. ಅವರು ಅಷ್ಟು ವಿಶ್ವಾಸದಲ್ಲಿ ಹೇಳುತ್ತಿದ್ದರೆ ಸದಾನಂದ ಗೌಡ ಅವರೇ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಹೇಳಿದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳು, ಜಾರಿಗೆ ತಂದ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಲು ಇದೇ 13ರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಇನ್ನೂ ಯುವ ವಯಸ್ಸಿನವರು. ರಾಜಕೀಯದಲ್ಲಿ ಅವರು ಇನ್ನೂ ಬೆಳೆಯಬೇಕಾಗಿದೆ. ಅವರು ಮಾತನಾಡುವ ಶೈಲಿ ಮತ್ತು ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು.ಪತ್ರಕರ್ತ ರವಿ ಬೆಳೆಗೆರೆಯವರ ಬಂಧನದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಆ ಬಗ್ಗೆ ಹೆಚ್ಚಿನ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಉತ್ತರಿಸಿದರು.

Comments are closed.