ಕರ್ನಾಟಕ

ಬಂಬೂ ಬಜಾರ್‌ ಕೆಳಗೇ ಸುರಂಗ!

Pinterest LinkedIn Tumblr


ಬೆಂಗಳೂರು: ಸಾಕಷ್ಟು ವಿರೋಧಗಳ ನಡುವೆಯೇ ಬಂಬೂ ಬಜಾರ್‌ ಮೂಲಕ ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಪರಿಣಾಮ ಇದರ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಶಿವಾಜಿನಗರದಿಂದ ಬಂಬೂ ಬಜಾರ್‌ ಮೂಲಕ ಪಾಟರಿ ಟೌನ್‌ಗೆ ಮೆಟ್ರೋ ಸಂಪರ್ಕ ಕಲ್ಪಿಸುವುದು ಸೂಕ್ತವಾಗಿದ್ದು, ಈ ಕುರಿತ ಪರಿಷ್ಕೃತ ನಕ್ಷೆಗೆ ಅನುಮೋದನೆ ನೀಡುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಲದೆ, ಈ ಬಗ್ಗೆ ಮನದಟ್ಟು ಮಾಡಿಕೊಟ್ಟಿತ್ತು. ನಿಗಮದ ಈ ಪ್ರಸ್ತಾವನೆಗೆ ಸರ್ಕಾರ ಎರಡು ದಿನಗಳ ಹಿಂದಷ್ಟೇ ಅನುಮೋದನೆ ನೀಡಿದೆ. ಈ ಮೂಲಕ ವಿರೋಧದ ನಡುವೆಯೂ ಕಂಟೋನ್ಮೆಂಟ್‌ ನಿಲ್ದಾಣವನ್ನು ನಕ್ಷೆಯಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉದ್ದೇಶಿತ ಮಾರ್ಗದ ಮೂಲ ನಕ್ಷೆ ಮತ್ತು ಪರಿಷ್ಕೃತ ನಕ್ಷೆಗೆ ಎರಡೂ ಮಾರ್ಗಗಳ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿತ್ತು. ಕಂಟೋನ್ಮೆಂಟ್‌ ಮೂಲಕ ಹಾದುಹೋಗುವುದು ಬೇಡ. ಸ್ವತಃ ಅಧಿಕಾರಿಗಳ ಪ್ರಕಾರ ತಾಂತ್ರಿಕವಾಗಿ, ಆರ್ಥಿಕವಾಗಿ ಮತ್ತು ಸುರಕ್ಷತೆ ದೃಷ್ಟಿಯಿಂದ ಸೂಕ್ತವಲ್ಲ ಎಂದು ಹೇಳಿರುವುದರಿಂದ ಪರಿಷ್ಕೃತ ನಕ್ಷೆಯನ್ನೇ ಪರಿಗಣಿಸಬೇಕು ಎಂದು ಮಾಂಗಲ್ಯ ಅಪಾರ್ಟ್‌ಮೆಂಟ್‌ ಮತ್ತು ಬೆನ್ಸನ್‌ ಟೌನ್‌ ಸುತ್ತಲಿನ ನಿವಾಸಿಗಳು ಆಗ್ರಹಿಸಿದ್ದರು.

ಮತ್ತೂಂದೆಡೆ, “ನಕ್ಷೆ ಬದಲಾವಣೆಯಿಂದ 2 ನಿಮಿಷ ಉಳಿತಾಯ ಆಗುತ್ತದೆ ಎಂದು ಬಿಎಂಆರ್‌ಸಿ ವಾದಿಸುತ್ತಿದೆ. ಆದರೆ, ನಿಲ್ದಾಣ ಸ್ಥಳಾಂತರದಿಂದ ಪ್ರಯಾಣಿಕರ 15 ನಿಮಿಷ ವ್ಯಯವಾಗಲಿದೆ. ಅಷ್ಟಕ್ಕೂ 2009ರಲ್ಲೇ ದೆಹಲಿಯಲ್ಲಿ 30 ಮೀ. ಆಳದಲ್ಲಿ ಸುರಂಗ ನಿರ್ಮಿಸಲಾಗಿದೆ. ಹಾಗಾಗಿ, ನಿಗಮದ ವಾದದಲ್ಲಿ ಹುರುಳಿಲ್ಲ. ಮೂಲನಕ್ಷೆಯನ್ನೇ ಪರಿಗಣಿಸಬೇಕು’ ಎಂದು ಸಂಸದರು,

ರೈಲ್ವೆ ಹೋರಾಟಗಾರರ ವೇದಿಕೆ ಕಾರ್ಯಕರ್ತರು, ಕಂಟೋನ್ಮೆಂಟ್‌ ನಿವಾಸಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದರು. ಇದೆಲ್ಲದರ ನಡುವೆ ಸ್ವತಃ ಬಂಬೂ ಬಜಾರ್‌ ಸುತ್ತಲಿನ ನಿವಾಸಿಗಳು ಕೂಡ ಪರಿಷ್ಕೃತ ನಕ್ಷೆ ಪರಿಗಣಿಸುವಂತೆ ನಿಗಮಕ್ಕೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತಿಮವಾಗಿ ಸರ್ಕಾರವು ಕಂಟೋನ್ಮೆಂಟ್‌ ಮಾರ್ಗ ಕೈಬಿಟ್ಟು, ಬಂಬೂಬಜಾರ್‌ ಮೂಲಕ ಮಾರ್ಗ ನಿರ್ಮಾಣಕ್ಕೆ ಅಸ್ತು ಎಂದಿದೆ.

ಶಿವಾಜಿನಗರದಿಂದ ಬಂಬೂ ಬಜಾರ್‌ ಮೂಲಕ ಹಾದುಹೋಗಲು ಸರ್ಕಾರದಿಂದ ಅನುಮೋದನೆ ದೊರಕಿದೆ. ಈ ಮೂಲಕ ಇದ್ದ ಅಡ್ಡಿ-ಆತಂಕಗಳು ನಿವಾರಣೆಯಾದಂತಾಗಿದೆ. ಈ ಮಾರ್ಗದ ಟೆಂಡರ್‌ ಕೂಡ ಕರೆಯಲಾಗಿದೆ. ಮುಂದಿನ ಹೆಜ್ಜೆ ಟೆಂಡರ್‌ ತೆರೆಯಲಾಗುವುದು. ನಂತರ ಅರ್ಹರಿಗೆ ಮಾರ್ಗ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗುವುದು.

ಯಾವುದೇ ವಿರೋಧಗಳಿದ್ದರೂ ಸರ್ಕಾರದ ಹಂತದಲ್ಲಿ ಚರ್ಚಿಸಿ, ಬಗೆಹರಿಸಿಕೊಳ್ಳಲಾಗುವುದು ಎಂದು ಬಿಎಂಆರ್‌ಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ಕಂಟೋನ್ಮೆಂಟ್‌ ಮೂಲಕ ಹಾದುಹೋಗಬೇಕು ಎಂಬ ವಾದದ ಹಿಂದೆ ಯಾವುದೇ ಹಿತಾಸಕ್ತಿಗಳಿಲ್ಲ. ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ ಎಂಬುದಷ್ಟೇ ನಮ್ಮ ಉದ್ದೇಶ.

ಆದರೆ, ಬಿಎಂಆರ್‌ಸಿಯು ಸುಲಭ ಮಾರ್ಗವನ್ನು ಕಂಡುಕೊಳ್ಳುತ್ತಿದೆ ಹೊರತು, ಪ್ರಯಾಣಿಕರ ಅನುಕೂಲ ಅಧಿಕಾರಿಗಳಿಗೆ ಲೆಕ್ಕಕ್ಕಿಲ್ಲ. ಅದೇನೇ ಇರಲಿ, ಈ ಸಂಬಂಧ ಈಗಾಗಲೇ ಸಹಿ ಸಂಗ್ರಹ, ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ನಡೆಸಲಾಗಿದೆ. ಮುಂದಿನ ಹಂತಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಈ ಸಂಬಂಧ ವೇದಿಕೆ ಅಡಿ ಚರ್ಚಿಸಿ, ಹೋರಾಟದ ರೂಪುರೇಷೆ ತಯಾರಿಸಲಾಗುವುದು ಎಂದು ಪ್ರಜಾ ರಾಗ್‌ ಸಂಸ್ಥೆಯ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.

ನಕ್ಷೆ ಪರಿಷ್ಕರಣೆಗೆ ಬಲವಾದ ಕಾರಣಗಳನ್ನೇ ಬಿಎಂಆರ್‌ಸಿ ನೀಡುತ್ತಿಲ್ಲ. ಈ ಹಿಂದೆ ನೀಡಿದ ಕಾರಣಗಳು ಮಾರ್ಗ ಬದಲಾವಣೆಗೆ ಸೂಕ್ತವಾಗಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಮತ್ತು ನಿಗಮಕ್ಕೆ ಸುದೀರ್ಘ‌ ಪತ್ರ ಬರೆದಿದ್ದೇನೆ. ಇದುವರೆಗೆ ಅದಕ್ಕೆ ಪ್ರತಿಕ್ರಿಯೆಯೂ ಬಂದಿಲ್ಲ. ಇಷ್ಟರ ನಡುವೆ ನಕ್ಷೆಗೆ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ಹೋರಾಟದ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸಂಸದ ಪಿ.ಸಿ. ಮೋಹನ್‌ ತಿಳಿಸಿದರು.

ಮೂಲನಕ್ಷೆ: ಶಿವಾಜಿನಗರ-ಕಂಟೋನ್ಮೆಂಟ್‌ ರೈಲು ನಿಲ್ದಾಣ-ಪಾಟರಿ ಟೌನ್‌

ಅನುಕೂಲ ಏನು?
-ಪಕ್ಕದಲ್ಲೇ ರೈಲು ನಿಲ್ದಾಣ ಬರುವುದರಿಂದ ಪ್ರಯಾಣಿಕರಿಗೆ ಅನುಕೂಲ
-ಮೂಲ ನಕ್ಷೆಯಲ್ಲಾದರೆ ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿರುವ ಏಕೈಕ ಆಟದ ಮೈದಾನ ಉಳಿಸಬಹುದು
-ಪರಿಷ್ಕೃತ ಮಾರ್ಗಕ್ಕೆ ಹೋಲಿಸಿದರೆ ಈ ಮಾರ್ಗದಲ್ಲಿ ಪ್ರಯಾಣಿಕರ 15 ನಿಮಿಷ ಉಳಿತಾಯ

ಪರಿಷ್ಕೃತ ನಕ್ಷೆ: ಶಿವಾಜಿನಗರ-ನ್ಯೂ ಬಂಬೂ ಬಜಾರ್‌- ಪಾಟರಿ ಟೌನ್‌

ಬದಲಾವಣೆಗೆ ಕಾರಣ?
-1,500 ಮೀ.ಗಿಂತ ಹೆಚ್ಚು ಉದ್ದ ಇರುವುದರಿಂದ ಮಾರ್ಗಮಧ್ಯೆ ಶಾಫ್ಟ್ ಅಗತ್ಯ
-ಶಾಫ್ಟ್ಗಾಗಿ ಭೂಸ್ವಾಧೀನ ಅಗತ್ಯವಿದ್ದು, ಇದಕ್ಕೆ ಬೆನ್ಸನ್‌ ಟೌನ್‌ ನಿವಾಸಿಗಳ ವಿರೋಧವಿದೆ
-40 ಮೀ. ಆಳದಲ್ಲಿ ಒಟ್ಟಿಗೆ 6 ಸಾವಿರ ಪ್ರಯಾಣಿಕರನ್ನು ಕರೆದೊಯ್ಯವುದು ಸುರಕ್ಷಿತವಲ್ಲ

* ವಿಜಯಕುಮಾರ್‌ ಚಂದರಗಿ

-ಉದಯವಾಣಿ

Comments are closed.