ಬೆಂಗಳೂರು: ಇತ್ತೀಚೆಗಷ್ಟೇ ಕೋಣನಕುಂಟೆ ವ್ಯಾಪ್ತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಎಟಿಎಂ ಯಂತ್ರ ಕದೊಯ್ದು ಲಕ್ಷಾಂತರ ರೂ. ದೋಚಿದ್ದ ಸಹೋದರರು ಸೇರಿ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಶಿವಕುಮಾರ್ (23) ಈತನ ತಮ್ಮ ಶ್ರೀಧರ (21), ಕೀರ್ತಿಕುಮಾರ್ (22), ರಾಕೇಶ್ (22) ಬಂಧಿತರು.
ಆರೋಪಿಗಳಿಂದ 6.25 ಲಕ್ಷ ರೂ. ನಗದು, ಎಟಿಎಂ ಯಂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟ್ಟರ್, ಒಂದು ಕಾರು, ಎರಡು ದ್ವಿಚಕ್ರವಾಹನ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಂಕ್ ರಾಬರಿಗೆ ಸಂಬಂಧಿಸಿದ ಇಂಗ್ಲಿಷ್ ಸಿನಿಮಾಗಳನ್ನು ವೀಕ್ಷಿಸುತ್ತಿದ್ದ ಆರೋಪಿಗಳು, ಅದನ್ನೇ ಪ್ರೇರಣೆಯಾಗಿಸಿಕೊಂಡು ಕೃತ್ಯ ಎಸಗಿದ್ದರು ಎಂದು ದಕ್ಷಿಣ ವಿಭಾಗ ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.
ನ.1ರಂದು ವಿನಾಯಕ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ, ರಾತ್ರಿ 2 ಗಂಟೆ ಸುಮಾರಿಗೆ ವಾಪಸ್ ಬರುತ್ತಿದ್ದ ನಾಲ್ವರು ಆರೋಪಿಗಳು, ಭದ್ರತಾ ಸಿಬ್ಬಂದಿ ಇಲ್ಲದ ಗೊಟ್ಟೆಗೆರೆಯ ಎಸ್ಬಿಐ ಎಟಿಎಂ ಕೇಂದ್ರಕ್ಕೆ ನುಗ್ಗಿ, ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿ ಎಟಿಎಂ ಯಂತ್ರವನ್ನೇ ಕದ್ದೊಯ್ದು, ಅದರಲ್ಲಿದ್ದ 7.85 ಲಕ್ಷರೂ ದೋಚಿದ್ದರು.
ಈ ಘಟನೆಗೂ 15 ದಿನ ಮೊದಲು ಆರೋಪಿಗಳು ಬನಶಂಕರಿಯಲ್ಲಿ ಐಸಿಐಸಿಐ ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿಯ ಬೆದರಿಸಿ ದರೋಡೆಗೆ ವಿಫಲ ಯತ್ನ ನಡೆಸಿದ್ದರು. ಈ ಸಂಬಂಧ ಕೋಣನಕುಂಟೆ ಠಾಣೆ ಇನ್ಸ್ಪೆಕ್ಟರ್ ಧರ್ಮೆಂದ್ರ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸಾಲ ತೀರಿಸಲು ದರೋಡೆ: ಆರೋಪಿಗಳು ಒಂದೇ ಊರಿನವರಾಗಿದ್ದು, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಈ ಪೈಕಿ ರಾಕೇಶ್ ಅಡುಗೆ ಭಟ್ಟನಾಗಿದ್ದು, ಉಳಿದವರು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದರು. ಈ ನಡುವೆ ಲಕ್ಷಾಂತರ ರೂ. ಸಾಲ ಮಾಡಿದ್ದ ಆರೋಪಿಗಳು, ಈ ಹಣವನ್ನ ಮನೆ ನಿರ್ಮಾಣ, ಕಾರು, ಬೈಕ್ಗಳ ಖರೀದಿಗೆ ಹಾಕಿದ್ದರು. ಕಡೆಗೆ ಸಾಲ ತೀರಿಸಲು ಕಳ್ಳ ದಾರಿ ಹಿಡಿದಿದ್ದರು.
ಆರಂಭದಲ್ಲಿ ಮನೆ ಕಳವಿಗೆ ಸಂಚು ರೂಪಿಸಿದ್ದ ಆರೋಪಿಗಳು, ಹಾಗೆ ಮಾಡಿದರೆ ಆ ಮನೆಯವರು ಕಷ್ಟಪಡಬೇಕಾಗುತ್ತದೆ ಎಂದು ಮರುಗಿದ್ದರು. ನಂತರ ಎಟಿಎಂಗಳಲ್ಲಿ ಸರ್ಕಾರದ ದುಡ್ಡಿರುತ್ತದೆ. ಒಂದೊಂದು ಎಟಿಎಂ ಕದ್ದಗ ಸಿಗುವ ಲಕ್ಷಾಂತರ ರೂಪಾಯಿಯಲ್ಲಿ ಎಲ್ಲ ಸಾಲ ತೀರಿಸಬಹುದು ಎಂದು ಎಟಿಎಂ ದರೋಡೆಗೆ ಇಳಿದಿದ್ದರು. ಈ ವಿಚಾರವನ್ನು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.
ದರೋಡೆಗೆಂದೇ ಇಂಗಿಷ್ ಸಿನಿಮಾ ನೋಡುತ್ತಿದ್ದರು!: ಸಾಮಾನ್ಯವಾಗಿ ಇಂಗ್ಲಿಷ್ ಸಿನಿಮಾಗಳಲ್ಲಿ ಬ್ಯಾಂಕ್ ದರೋಡೆ, ಕಳವು ಮಾಡುವುದನ್ನು ವಿಭಿನ್ನವಾಗಿ ತೋರಿಸುತ್ತಾರೆ. ಇಂಥ ದೃಶ್ಯಗನ್ನೇ ನೋಡಿ ಪ್ರೇರಣೆಗೊಂಡಿದ್ದ ಆರೋಪಿಗಳು, ಸಿನಿಮಾ ಮಾದರಿಯಲ್ಲೇ ಎಟಿಎಂ ದೋಚಲು ಸಂಚು ರೂಪಿಸುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ದರೋಡೆ ನಡೆಸಲೆಂದೇ ಕೆಲ ತಿಂಗಳುಗಳಿಂದ ಅನೇಕ ಇಂಗ್ಲಿಷ್ ಸಿನಿಮಾಗಳನ್ನು ಆರೋಪಿಗಳು ವೀಕ್ಷಿಸುತ್ತಿದ್ದರು. ಆರೋಪಿ ಶಿವಕುಮಾರ್ ಇಂತಹ ವಿಭಿನ್ನ ಕಥಾವಸ್ತು ಇರುವ ಇಂಗ್ಲಿಷ್ ಸಿನಿಮಾಗಳ ಸಿಡಿಗಳನ್ನು ಖರೀದಿಸುತ್ತಿದ್ದ. ಜತೆಗೆ ಯುಟ್ಯೂಬ್ನಲ್ಲೂ ಇಂಥ ಸಿನಿಮಾಗಳನ್ನು ನೋಡಿ ಆರೋಪಿಗಳು ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಳಿವು ನೀಡಿದ ದಿಢೀರ್ ಐಶಾರಾಮಿ ಜೀವನ: ಆರೋಪಿಗಳ ಪೈಕಿ ರಾಕೇಶ್ ಕೋಣನಕುಂಟೆ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಹೋಟೆಲ್ವೊಂದರಲ್ಲಿ ಅಡುಗೆ ಭಟ್ಟನಾಗಿದ್ದ. ದರೋಡೆ ಮಾಡಿದ ಬಳಿಕ ಈತನ ಜೀವನ ಶೈಲಿಯೇ ಬದಲಾಗಿತ್ತು.
ದುಬಾರಿ ಬಟ್ಟೆಗಳು, ಬೈಕ್ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ. ಇತ್ತ ಕೆಲಸಕ್ಕೂ ಹೋಗದೆ ಮೋಜು-ಮಸ್ತಿ ಮಾಡಿಕೊಂಡಿದ್ದ. ಏಕಾಏಕಿ ಈತನ ಬದಲಾವಣೆ ಕಂಡ ಪೊಲೀಸ್ ಬಾತ್ಮೀದಾರರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ರಾಕೇಶ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ನಂತರ ಆತ ನೀಡಿದ ಮಾಹಿತಿ ಮೇರೆಗೆ ಇತರ ಆರೋಪಿಗಳನ್ನು ಬಂಧಿಸಲಾಗಿದೆ.
ಉಪಕರಣ ಖರೀದಿಗೆ 10 ಸಾವಿರ ಹೂಡಿಕೆ: ಆರೋಪಿಗಳು ಎಟಿಎಂ ಕೇಂದ್ರಗಳನ್ನು ದರೋಡೆ ಮಾಡಲೆಂದೆ ಆಧುನಿಕ ಉಪಕರಣಗಳನ್ನು ಖರೀದಿಸಲು 10 ಸಾವಿರ ಹೂಡಿಕೆ ಮಾಡಿದ್ದರು. ಗ್ಯಾಸ್ ಕಟರ್, ಎಟಿಎಂ ಯಂತ್ರ ಒಡೆಯಲು ಹಾರೆ ಮತ್ತಿತರ ಉಪಕರಣ ಖರೀದಿಸಿದ್ದರು. ಇವುಗಳನ್ನು ಬಳಸಿಯೇ ಎಟಿಎಂ ಕೇಂದ್ರಗಳಿಗೆ ನುಗ್ಗಿ ಅನಾಯಸವಾಗಿ ಯಂತ್ರಗಳನ್ನು ಕೊದ್ದೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
-ಉದಯವಾಣಿ