ಕರ್ನಾಟಕ

ದೇವಸ್ಥಾನಕ್ಕೆ 2 ಲಕ್ಷ ರೂ ದೇಣಿಗೆ ನೀಡಿದ ವೃದ್ಧ ಭಿಕ್ಷುಕಿ!

Pinterest LinkedIn Tumblr


ಮೈಸೂರು: ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದ 90 ವರ್ಷ ಪ್ರಾಯದ ವೃದ್ಧೆಯೊರ್ವರು ದೇವಸ್ಥಾನಕ್ಕೆ 2.30 ಲಕ್ಷ ರೂಪಾಯಿ ಕಾಣಿಕೆ ನೀಡಿ ಸುದ್ದಿಯಾಗಿದ್ದಾರೆ.

ಪಡುವಾರಹಳ್ಳಿಯಲ್ಲಿರುವ ಪ್ರಸನ್ನಾಂಜನೇಯ ಸ್ವಾಮಿ ದೇಗುಲದಲ್ಲಿ ಭಿಕ್ಷೆ ಬೇಡುತ್ತಿದ್ದ ಎಂ.ವಿ.ಸೀತಮ್ಮ ಎನ್ನುವವಯೋ ವೃದ್ಧೆ ತನ್ನಲ್ಲಿದ್ದ 2.30 ಲಕ್ಷ ರೂಪಾಯಿ ಹಣವನ್ನು ದೇವರ ವಿನಿಯೋಗಕ್ಕೆಂದು ದೇವಾಲಯದ ಆಡಳಿತ ಮಂಡಳಿಯವರಿಗೆ ದೇಣಿಗೆಯಾಗಿ ನೀಡಿದ್ದಾರೆ.

ಸೀತಾ ಅವರು ಬ್ಯಾಂಕ್‌ನಲ್ಲಿ ಖಾತೆಯನ್ನೂ ತೆರೆದಿದ್ದು ಪ್ರತಿ ವಾರ ಸಂಗ್ರಹವಾದ ಹಣವನ್ನು ಖಾತೆಗೆ ಹಾಕುತ್ತಿದ್ದರು. ಹೀಗೆ ಸಂಗ್ರಹವಾದ ಎಲ್ಲಾ ಹಣವನ್ನು ದೇವರಿಗೆ ಸಲ್ಲಿಸಿದ್ದಾರೆ.

ದೇವರು ನನಗೆ ಆಯುಷ್ಯ,ಆರೋಗ್ಯ ನೀಡಿದ್ದಾನೆ. ಹಾಗಾಗಿ ಅವನಿಗೆ ಹಣವನ್ನು ಅರ್ಪಿಸಿದ್ದೇನೆ. ಇದರಲ್ಲಿ ನನಗೆ ತೃಪ್ತಿ ಇದೆ ಎಂದಿದ್ದಾರೆ.

ಉದ್ಯೋಮಿಯೊಬ್ಬರು ನೀಡುವ ರೀತಿಯಲ್ಲಿ ಉದಾರ ದೇಣಿಗೆ ನೀಡಿದ ವೃದ್ಧೆಯನ್ನು ದೇವಾಲಯದ ಆಡಳಿತ ಮಂಡಳಿ ಶಾಲು ಹೊದೆಸಿ ಸನ್ಮಾನ ಮಾಡಿದೆ. ಬ್ಯಾನರ್‌ವೊಂದರಲ್ಲಿ ಸೀತಮ್ಮ ನೀಡಿದ ದೇಣಿಗೆಯ ಕುರಿತಾಗಿ ಪ್ರಕಟಣೆಯನ್ನೂ ಹಾಕಿದ್ದಾರೆ.

ಮದ್ರಾಸ್‌ ಮೂಲದವರಾದ ಸೀತಮ್ಮ ಅವರಿಗೆ ಸದ್ಯ ಯಾರೂ ಸಂಬಂಧಿಕರಿಲ್ಲ. 12 ಮಂದಿ ಒಡಹುಟ್ಟಿದವರಿದ್ದರೂ 1930 ರಲ್ಲೇ ಕುಟುಂಬದಿಂದ ದೂರಾಗಿದ್ದರು ಎಂದು ತಿಳಿದು ಬಂದಿದೆ.

ನಾಲ್ಕಾರು ಮನೆಗಳಲ್ಲಿ ಮನೆ ಕೆಲಸ ಮಾಡಿಕೊಂಡು ದುಡಿದು ತಿನ್ನುತ್ತಿದ್ದ ಸೀತಮ್ಮ ದೇಹದಲ್ಲಿ ಶಕ್ತಿ ಕುಂದಿದ ಬಳಿಕ ಅನಿವಾರ್ಯವಾಗಿ ಭಿಕ್ಷೆ ಬೇಡಲು ಇಳಿಯಬೇಕಾಯಿತು.

ಒಟ್ಟಿನಲ್ಲಿ ಕೋಟ್ಯಂತರ ಹಣವಿದ್ದರೂ ಕೊಡುವ ಮನಸ್ಸಿಲ್ಲದೆ ಇನ್ನಷ್ಟು ಕೂಡಿಡಲು ಮುಂದಾಗುವ ಜನಗಳಿಗೆ ಈ ಅಜ್ಜಿ ಮಾದರಿಯಾಗಿದ್ದಾರೆ.

-ಉದಯವಾಣಿ

Comments are closed.