ಕರಾವಳಿ

ಮೈಸೂರು ಸಮೀಪ ಭೀಕರ ರಸ್ತೆ ಅಪಘಾತ : ಮಂಗಳೂರು ಮೂಲದ ಒಂದೇ ಕುಟುಂಬದ ಮೂವರ ದುರ್ಮರಣ

Pinterest LinkedIn Tumblr

ಮೈಸೂರು, ನವೆಂಬರ್.14 : ಮಂಗಳವಾರ (ಇಂದು) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ.ಕ. ಜಿಲ್ಲೆಯ ಉಳ್ಳಾಲ ಮೂಲದ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಸಮೀಪದ ಹುಣಸೂರು ರಸ್ತೆಯ ಕೆಲಗಟ್ಟೆ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಮೃತರನ್ನು ಮೂಲತಃ ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ತೊಕ್ಕೊಟ್ಟು ನಿವಾಸಿಗಳಾದ ಹಮೀದ್(45), ಅವರ ಪುತ್ರ ಶೇಕ್ ಹಕೀಬ್(11) ಹಾಗೂ ಸಹೋದರ ಮುಹಮ್ಮದ್ ಇಕ್ಬಾಲ್(43) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇತರ 12 ಮಂದಿಗೆ ಗಾಯಗಳಾಗಿವೆ.

ಮಿನಿ ಬಸ್ಸ್ ಲಾರಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಈ ಅವಘಡ ನಡೆದಿದ್ದು, ಟೆಂಪೋ ದಲ್ಲಿದ್ದ 15 ಮಂದಿ ಪೈಕಿ ಮೂವರು ಸಾವನ್ನಪ್ಪಿದ್ದು 12 ಮಂದಿ ಗಾಯಗೊಂಡಿದ್ದಾರೆ. ಹಮೀದ್‌ ಅವರು ಸ್ಟಿಕ್ಕರ್‌ ಕಟ್ಟಿಂಗ್‌ ಅಂಗಡಿ ನಡೆಸುತ್ತಿದ್ದರೆ, ಇಕ್ಬಾಲ್‌ ವಿದೇಶದಲ್ಲಿದ್ದು ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದರು. ಹಕೀಬ್‌ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ತೊಕ್ಕೊಟ್ಟಿನ ಫ್ಲಾಟ್ವೊಂದರಲ್ಲಿ ವಾಸವಾಗಿದ್ದ ಹಮೀದ್ ಕುಟುಂಬ ಮೂಲತಃ ಉಳ್ಳಾಲ ಅಳೇಕಲ ನಿವಾಸಿಗಳು ಎಂದು ತಿಳಿದುಬಂದಿದ್ದು, ಕುಟುಂಬ ಸದಸ್ಯರೆಲ್ಲಾ ಜೊತೆಯಾಗಿ ಊಟಿ ಪ್ರವಾಸಕ್ಕೆಂದು ತೊಕ್ಕೊಟ್ಟುವಿನಿಂದ ಸೋಮವಾರ ಸಂಜೆ ಹೊರಟಿದ್ದರು ಎನ್ನಲಾಗಿದೆ.

ಹಮೀದ್ ಅವರು ತನ್ನ ಕುಟುಂಬದ ಸದಸ್ಯರು ಸೇರಿದಂತೆ 17 ಮಂದಿಯೊಂದಿಗೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಿನಿ ಬಸ್ಸಿನಲ್ಲಿ ಊಟಿಗೆ ಪ್ರವಾಸ ಹೊರಟಿದ್ದರು. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಮಿನಿ ಬಸ್ ಹುಣಸೂರು- ಮೈಸೂರು ನಡುವಿನ ಕೇಳಗಟ್ಟೆ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕು ಸಾಗಾಟದ ಲಾರಿಗೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಮಿನಿ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮೈಸೂರಿನ ಕೆ.ಆರ್.ಎಚ್. ಶವಾಗಾರದಲ್ಲಿರಿ ಸಲಾಗಿದೆ. ಹುಣಸೂರು ಠಾಣೆಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.