ಕರ್ನಾಟಕ

ಅನಾಮಧೇಯ ಕರೆಯಿಂದ ಜೀವ ಬೆದರಿಕೆ: ಕೂಡಲಸಂಗಮ ಶ್ರೀ

Pinterest LinkedIn Tumblr


ಗಂಗಾವತಿ: “ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಟದ ನೇತೃತ್ವ ವಹಿಸಿದ್ದಕ್ಕೆ ಕೆಲವು ಪಟ್ಟಭದ್ರ ಶಕ್ತಿಗಳು ತಮಗೆ
ಅನಾಮಧೇಯ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆ ಬೆದರುವ ವ್ಯಕ್ತಿ ನಾನಲ್ಲ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ’ ಎಂದು ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಜರುಗಿದ ಚನ್ನಮ್ಮ ಜಯಂತಿಯಲ್ಲಿ ಮಾತನಾಡಿ, ಸಾವಿರಾರು ವರ್ಷಗಳಿಂದ ಲಿಂಗಾಯತ ಸಮಾಜವನ್ನು ಶೋಷಣೆ ಮಾಡಿದ ಶಕ್ತಿಗಳು ಈಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಹತ್ತಿಕ್ಕುವ ಕುತಂತ್ರ ನಡೆಸುತ್ತಿವೆ. ಹುಬ್ಬಳ್ಳಿಯಲ್ಲಿ ಜರುಗಿದ ಪ್ರತ್ಯೇಕ ಲಿಂಗಾಯತ ಸಮಾವೇಶದಲ್ಲಿ ಬಾಯ್ತಪ್ಪಿನಿಂದ ಬಳಸಿದ ಕೆಲ ಶಬ್ದಗಳಿಂದಾಗಿ ತಾವೂ ಸೇರಿ ಹೋರಾಟ ಸಮಿತಿ
ಮುಖಂಡರಾದ ಬಸವರಾಜ ಹೊರಟ್ಟಿ, ವಿಜಯಾನಂದ ಕಾಶಪ್ಪನವರ್‌, ವಿನಯ್‌ ಕುಲಕರ್ಣಿ ಸೇರಿ ಹಲವರು ವಿಷಾದ ವ್ಯಕ್ತಪಡಿಸಿದ್ದರೂ ಇನ್ನೂ ಕೆಲವರು ಹೋರಾಟ ನಡೆಸುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿದಿದೆ ಎಂದರು.

ಪಂಚಮಸಾಲಿ ಶ್ರೀ ವಿರುದ್ಧ ದೂರು ದಾಖಲು
ಧಾರವಾಡ: ಲಿಂಗಾಯತ ರ್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮಿ ವಿರುದ್ಧ ಧಾರವಾಡ ಶಹರ ಠಾಣೆಗೆ ದೂರು ದಾಖಲಾಗಿದೆ. ನಗರದಲ್ಲಿ ಖಾನಾವಳಿ ಉದ್ಯೋಗ ಮಾಡುವ ಗುರುಸ್ವಾಮಿ ಹಿರೇಮಠ ದೂರಿತ್ತವರು. ನ.7ರಂದು ಸ್ವಯಂ ಠಾಣೆಗೆ ಹಾಜರಾದ ಗುರು ಸ್ವಾಮಿ, ಸ್ವಾಮೀಜಿಗಳು ಅವಹೇಳನಕಾರಿ ಹೇಳಿಕೆ ನೀಡಿ ಸಮಾಜ ಒಡೆಯುವ ಹುನ್ನಾರ ನಡೆಸಿರುವುದು ಕಂಡು ಬಂದಿದೆ. ಇದರ ಹಿಂದೆ ಕಾಣದ ಕೈಗಳು ಪ್ರಚೋದನೆ ನೀಡುತ್ತಿವೆ. ಇದರಿಂದ ರಾಜ್ಯದಲ್ಲಿ ಕೋಮು ಗಲಭೆಗೂ ಕಾರಣವಾಗಬಹುದು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

-ಉದಯವಾಣಿ

Comments are closed.