ಕರ್ನಾಟಕ

ಇಂದಿನಿಂದ ಮುಕ್ತ ಮಾರುಕಟ್ಟೆಗೆ ಬಿಳಿ ಸೀಮೆಎಣ್ಣೆ

Pinterest LinkedIn Tumblr


ಬೆಂಗಳೂರು, ಜ. ೩೦- ರಾಜ್ಯದಲ್ಲಿ ಬಿಳಿ ಸೀಮೆಎಣ್ಣೆಯನ್ನು ಮುಕ್ತ ಮಾರುಕಟ್ಟೆಗೆ ಪೂರೈಸುವ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ರಿಯಾಯ್ತಿ ದರದಲ್ಲಿ ಹೆಸರುಕಾಳು ವಿತರಣೆ ಮಾಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಚಾಲನೆ ನೀಡಲಿದ್ದಾರೆ.
ವಿಧಾನಸೌಧದ ಬ್ಯಾಕ್ವೆಟ್ ಹಾಲ್‌ನಲ್ಲಿ ನಾಳೆ ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಬಿಳಿ ಸೀಮೆಎಣ್ಣೆ ಪ್ರತಿ ಲೀಟರ್‌ಗೆ 17 ರೂ.ನಂತೆ ಮುಕ್ತ ಮಾರುಕಟ್ಟೆಯಲ್ಲಿ ದೊರೆಯಲಿದೆ. ಅದೇ ರೀತಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಹೆಸರುಕಾಳನ್ನು ಕೆ.ಜಿ.ಗೆ 30 ರೂ.ನಂತೆ ವಿತರಿಸಲಾಗುವುದು ಎಂದರು.
ಪೌಷ್ಠಿಕಾಂಶ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಒಂದು ತಿಂಗಳಿಗೆ 1 ಕೆ.ಜಿ. ಹೆಸರುಕಾಳು, ಮತ್ತೊಂದು ತಿಂಗಳು 1 ಕೆ.ಜಿ. ತೊಗರಿಬೇಳೆ ನೀಡಲು ಉದ್ದೇಶಿಸಲಾಗಿದೆ ಎಂದರು.
ಈಗಾಗಲೇ ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ, ಉಪ್ಪು, ಎಣ್ಣೆಯನ್ನು ನೀಡಲಾಗುತ್ತಿದೆ. ಇದರ ಜತೆಗೆ ಹೆಸರುಕಾಳು ಮತ್ತು ತೊಗರಿಬೇಳೆಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಬಿಪಿಎಲ್ ಕಾರ್ಡ್‌ದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ದಿನಸಿ ಪಡೆಯಲು ಕೂಪನ್‌ ವಿತರಿಸಲಾಗುತ್ತದೆ ಎಂದರು.
ಎಪಿಎಲ್ ಕಾರ್ಡ್‌‌ಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಅಂಚೆ ಮೂಲಕ ಕಾರ್ಡ್‌ನ್ನು ಮನೆಗಳಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದನ್ನು ಸಕಾಲ ವ್ಯಾಪ್ತಿಗೂ ತರಲಾಗಿದ್ದು, ಕಾಲ ಮಿತಿಯಲ್ಲಿ ಕಾರ್ಡ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಹರಿಯಾಣ ತಂಡ ಆಗಮನ
ರಾಜ್ಯದಲ್ಲಿನ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳ ವಿತರಣಾ ವ್ಯವಸ್ಥೆ ಅಧ್ಯಯನ ಮಾಡಲು ಹರಿಯಾಣದಿಂದ ಶಾಸಕರು, ಅಧಿಕಾರಿಗಳ ತಂಡ ಆಗಮಿಸಿದ್ದು, ಇಲ್ಲಿನ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ಮಾಡುತ್ತಿದೆ ಎಂದರು.

Comments are closed.