ಕರ್ನಾಟಕ

ರೈತ ಸಂಘದ ಸರ್ವೋದಯ ಪಕ್ಷ `ಸ್ವರಾಜ್ ಇಂಡಿಯಾ ಪಕ್ಷದಲ್ಲಿ ವಿಲೀನ

Pinterest LinkedIn Tumblr

puttannaiah__
ರಾಯಚೂರು, ಜ. ೨- ರೈತರನ್ನು ರಾಜಕೀಯವಾಗಿ ಬಲಿಷ್ಟಗೊಳಿಸುವ ಹಿನ್ನೆಲೆಯಲ್ಲಿ ಸ್ವರಾಜ್ ಇಂಡಿಯಾ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠರು ಹಾಗೂ ಶಾಸಕರಾದ ಕೆ.ಎಸ್.ಪುಟ್ಟಣಯ್ಯ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರೈತರ ಸಮಸ್ಯೆಗಳ ನಿವಾರಣೆಗಾಗಿ ಮತ್ತು ಕೃಷಿ ಅಭ್ಯುದಯಕ್ಕಾಗಿ ರೈತ ಸಮೂಹದ ಕ್ರಾಂತಿ ನಡೆಸುವುದು ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಬಲವಾದ ಶಕ್ತಿಯಾಗಿ ಹೊರಹೊಮ್ಮಲು ರೈತರಿಗೆ ರಾಜಕೀಯ ಪಕ್ಷದ ಅಸ್ತಿತ್ವ ಅನಿವಾರ್ಯ. ಈ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ ಭೂಷಣ ಅವರ ನೇತೃತ್ವದಲ್ಲಿ ಸ್ವರಾಜ್ ಇಂಡಿಯಾ ಪಕ್ಷವನ್ನು ಅಸ್ತಿತ್ವಕ್ಕೆ ತರಲಾಗುತ್ತದೆ ಎಂದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸರ್ವೋದಯ ಪಕ್ಷವನ್ನು ಸ್ವರಾಜ್ ಇಂಡಿಯಾ ಪಕ್ಷದಲ್ಲಿ ವಿಲೀನಗೊಳಿಸಲಾಗುತ್ತದೆ. ಇದೇ ತಿಂಗಳ ದಿ.12 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ, ಪಕ್ಷವನ್ನು ಘೋಷಿಸಲಾಗುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ರೈತರು ಕೃಷಿ ಚಟುವಟಿಕೆ ಕೈಗೆತ್ತಿಕೊಳ್ಳಲು ರಾಷ್ಟ್ರೀಯ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲದ ಮೇಲಿನ 2 ತಿಂಗಳ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿರುವ ಹಿಂದೆ ರಾಜಕೀಯ ಹುನ್ನಾರ ಅಡಗಿದೆ ಎಂದು ದೂರಿದರು.
2 ತಿಂಗಳು ರೈತರ ಬಡ್ಡಿ ಮನ್ನಾ ಮಾಡಲು ಮುಂದಾಗಿರುವುದು ರೈತರ ತಿಥಿ ಮಾಡುವುದಕ್ಕೆ ಎಂದು ವ್ಯಂಗವಾಡಿದ ಅವರು, ರಾಜಕಾರಣೀಗಳು ರೈತರ ಸಾಲಮನ್ನಾ ಮಾಡುವುದರ ಹಿಂದೆ ಅವರ ವೈಫಲ್ಯ ಪುನಃ ಸಾಬೀತುಗೊಂಡಿದೆ. ಕೃಷಿ ನೀತಿಯಿಂದ ರೈತರು ತೀವ್ರ ಸಂಕಷ್ಟಕೊಳಗಾಗಿ ಸಾಲ ಮಾಡಿರುವುದನ್ನು ತೀರಿಸಲು ಸಾಧ್ಯವಾಗದೇ, ಆತ್ಮಹತ್ಯೆಗೆ ಶರಣಾಗುತ್ತಿರುವುದು ಖೇದಕರ ಸಂಗತಿ ಎಂದರು.
ಸರ್ಕಾರ ರೈತರ ಆತ್ಮಹತ್ಯೆ ತಡೆಗಟ್ಟಲು ಶೀಘ್ರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ದೇಶದಲ್ಲಿ 4 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿರುವುದು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಸ್ವಾಮಿನಾಥ ವರದಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮೀನಾಮೇಷ ವೆಣಿಸುತ್ತಿದೆ. ಸ್ವಾಮಿನಾಥ ವರದಿ ಜಾರಿಯಾದಲ್ಲಿ ರೈತರ ಹಿತಾಸಕ್ತಿ ಕಾಪಾಡಲು ಸಾಧ್ಯವಾಗುತ್ತದೆ ಎನ್ನುವುದನ್ನು ಪ್ರಧಾನ ಮಂತ್ರಿ ಮೋದಿ ಅರಿತುಕೊಳ್ಳಬೇಕಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಪೋರೇಟ್ ಕಂಪನಿಗಳು 5 ಲಕ್ಷ 14 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅತಿವೃಷ್ಟಿ- ಅನಾವೃಷ್ಟಿಯಿಂದ 25 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ರಾಜ್ಯದಲ್ಲಿ ಆವರಿಸಿರುವ ಭೀಕರ ಬರ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಸಮಯ ನಿಗದಿಪಡಿಸುವಲ್ಲಿ ರಾಜಕೀಯ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ವೇದಿಕೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಲಕ್ಷ್ಮಣಗೌಡ ಕಡ್ಗಂದೊಡ್ಡಿ, ಭೀಮೇಶ್ವರಾವ್, ಯಂಕಪ್ಪ, ವಿಶ್ವನಾಥ ರೆಡ್ಡಿ, ದೊಡ್ಡ ಬಸವನಗೌಡ, ವೆಂಕಟರಾವ್, ನರಸಪ್ಪ ಯಾದವ್, ನಾಗಿರೆಡ್ಡಿ ಇತರರು ಉಪಸ್ಥಿತರಿದ್ದರು.

Comments are closed.