ಕರ್ನಾಟಕ

ಜಮೀರ್ ಅಹಮದ್ ಜೆಡಿಎಸ್ ನಿಂದ ದೂರವಾದ ಬಳಿಕ ಇಬ್ರಾಹಿಂ ಜೆಡಿಎಸ್ ಕಡೆಗೆ

Pinterest LinkedIn Tumblr

Ibrahim CM
ಸಿ.ಎಂ. ಇಬ್ರಾಹಿಂ ರಾಜಕೀಯ ಗಾಂಭೀರ್ಯತೆಗಿಂತ ಹೆಚ್ಚಾಗಿ ತಮ್ಮ ಮಾತಿನ ಲಹರಿಯಿಂದಲೇ ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಹೊತ್ತಿನಲ್ಲೇ ಕಾಂಗ್ರೆಸ್ ಹೊಸ್ತಿಲು ತುಳಿದಿದ್ದ ಇಬ್ರಾಹಿಂ ಬಳಿಕ ಸಿದ್ದರಾಮಯ್ಯ ಆಪ್ತವಲಯದಲ್ಲಿ ಮುಂಚೂಣಿಯಲ್ಲಿ ಮಿಂಚಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಸಿಎಂ ಜೊತೆಗಿನ ಸಂಬಂಧ ಕೊಂಚ ಹಳಸಿದ್ದು, ದೇವೇಗೌಡರ ಜೊತೆಗಿನ ಸಂಬಂಧ ಉತ್ತಮಗೊಂಡಿದೆ.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ , ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಮತ್ತೆ ತವರುಮನೆಗೆ ಮರಳುವ ಸಾಧ್ಯತೆಗಳು ನಿಶ್ಚಿತವಾಗಿವೆ. ಬಹುತೇಕ ಜನವರಿ 15ರ ಬಳಿಕ ಇಬ್ರಾಹಿಂ ಜೆಡಿಎಸ್ ಪಾಳಯ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಸಿ.ಎಂ. ಇಬ್ರಾಹಿಂ ರಾಜಕೀಯ ಗಾಂಭೀರ್ಯತೆಗಿಂತ ಹೆಚ್ಚಾಗಿ ತಮ್ಮ ಮಾತಿನ ಲಹರಿಯಿಂದಲೇ ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಹೊತ್ತಿನಲ್ಲೇ ಕಾಂಗ್ರೆಸ್ ಹೊಸ್ತಿಲು ತುಳಿದಿದ್ದ ಇಬ್ರಾಹಿಂ ಬಳಿಕ ಸಿದ್ದರಾಮಯ್ಯ ಆಪ್ತವಲಯದಲ್ಲಿ ಮುಂಚೂಣಿಯಲ್ಲಿ ಮಿಂಚಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಸಿಎಂ ಜೊತೆಗಿನ ಸಂಬಂಧ ಕೊಂಚ ಹಳಸಿದ್ದು, ದೇವೇಗೌಡರ ಜೊತೆಗಿನ ಸಂಬಂಧ ಉತ್ತಮಗೊಂಡಿದೆ. ಹೀಗಾಗಿ ಹಿಂದೆ ಜೆಡಿಎಸ್ ನಲ್ಲೇ ಇದ್ದ ಇಬ್ರಾಹಿಂ ಮರಳಿ ಮಾತೃಪಕ್ಷಕ್ಕೆ ಬರಲು ಎಲ್ಲಾ ವೇದಿಕೆ ಸಜ್ಜುಗೊಂಡಿದೆ ಎನ್ನಲಾಗಿದೆ. ಈಗಿನ ಲೆಕ್ಕಾಚಾರಗಳ ಪ್ರಕಾರ ಜನವರಿ 15ರ ಬಳಿಕ ಇಬ್ರಾಹಿಂ ಅಧಿಕೃತವಾಗಿ ಜೆಡಿಎಸ್ಗೆ ಮರಳಲಿದ್ದಾರೆ.
ಸಿದ್ದರಾಮಯ್ಯ ಜೊತೆ ಇಲ್ಲ ಮೊದಲಿನಷ್ಟು ಆಪ್ತತೆ
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಪಕ್ಷದಿಂದ ದೂರವಾದ ಬಳಿಕ ಇಬ್ರಾಹಿಂ ಜೆಡಿಎಸ್ ಗೆ , ದೇವೇಗೌಡರಿಗೆ ಬಹಳ ಹತ್ತಿರವಾಗಿದ್ದರು. ಇತ್ತೀಚೆಗೆ ದೇವೇಗೌಡರು ವಿಧಾನಸೌಧದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದಾಗಲೂ ಮೊದಲು ಓಡೋಡಿ ಬಂದಿದ್ದ ಇಬ್ರಾಹಿಂ, ಬಳಿಕ ಗೌಡರ ಮನೆಗೂ ತೆರಳಿ ಆರೋಗ್ಯ ವಿಚಾರಿಸಿದ್ದರು. ಅಲ್ಲಿಗೆ ಮತ್ತೆ ಇಬ್ರಾಹಿಂ ಜೆಡಿಎಸ್ ನತ್ತ ವಾಲುತ್ತಿರುವುದರ ಸೂಚನೆ ಸಿಕ್ಕಿತ್ತು. ಇದೀಗ ಜಮೀರ್ ಅಹಮದ್ ಸ್ಥಾನ ತುಂಬಲು ಇಬ್ರಾಹಿಂ ಸೂಕ್ತ ಎನ್ನುವುದನ್ನು ಮನಗಂಡಿರುವ ದೇವೇಗೌಡರು, ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕತೆ ಹೊಂದಿದ್ದು, ಇಬ್ರಾಹಿಂ ಕೂಡಾ ಪಕ್ಷಕ್ಕೆ ಮರಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಅಲ್ಲದೇ ಇಬ್ರಾಹಿಂ ಜೊತೆಯಲ್ಲೇ ಇನ್ನಷ್ಟು ಜನ ಜೆಡಿಎಸ್ ಸೇರಲಿದ್ದು, ಸುಮಾರು 20 ಜನರ ಪಟ್ಟಿ ಸಿದ್ದವಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಸಮಯದಲ್ಲಿ ಸರ್ಕಾರದ ಭಾಗವಾಗುವ ಪ್ರಯತ್ನ ನಡೆಸಿದ್ದರೂ ಯಶ ಕಾಣದ ಇಬ್ರಾಹಿಂ ಕೊನೆಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಿಸಲ್ಪಟ್ಟಿದ್ದರು. ಆದರೆ ಸಿದ್ದರಾಮಯ್ಯ ತಮಗೆ ಸೂಕ್ತ ಮಣೆ ಹಾಕುತ್ತಿಲ್ಲ ಎಂಬ ಮುನಿಸು ಇದ್ದರೂ ಬಹಿರಂಗವಾಗಿ ತೋರಿಸಿಕೊಳ್ಳದೇ ಸಿಎಂ ಆಪ್ತವಲಯದಿಂದ ನಿಧಾನವಾಗಿ ದೂರಾವಾಗುತ್ತಾ ಹೋದ ಇಬ್ರಾಹಿಂ ಅದೇ ವೇಗದಲ್ಲಿ ದೇವೇಗೌಡರಿಗೆ ಹತ್ತಿರವಾಗತೊಡಗಿದ್ದರು. ಆ ಮೂಲಕ ಮರಳಿ ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಿದ್ದಗೊಳ್ಳತೊಡಗಿತು. ಇತ್ತ ಸಿಎಂ ಕೂಡಾ ಇಬ್ರಾಹಿಂರನ್ನು ಪರಿಗಣಿಸದೇ ಇದ್ದಿದ್ದು ಜೆಡಿಎಸ್ ನತ್ತ ಮನಸ್ಸು ಮಾಡಲು ಇನ್ನಷ್ಟು ಪುಷ್ಠಿ ನೀಡಿದಂತಾಯ್ತು.
ಜೆಡಿಎಸ್ ಸೇರುವ ಬಗ್ಗೆ ಇಬ್ರಾಹಿಂ ಇಂಗಿತ
ಕಾಂಗ್ರೆಸ್’ನಲ್ಲಿ ಅಧಿಕಾರ ಇದ್ದರೂ ಪಕ್ಷದಿಂದ ಮಾನಸಿಕವಾಗಿ ದೂರವಾಗಿರುವ ಇಬ್ರಾಹಿಂ, ಜೆಡಿಎಸ್ ಸೇರ್ಪಡೆ ಬಗ್ಗೆ ತಾವಾಗಿಯೇ ದೇವೇಗೌಡರ ಬಳಿ ಇಂಗಿತ ವ್ಯಕ್ತಪಡಿಸಿದ್ದರು. ಸಾಕಷ್ಟು ಬಾರಿ ಈ ಬಗ್ಗೆ ಮಾತುಕತೆ ನಡೆದಿದ್ದು, ಈಗ ಅಧಿಕೃತ ಸೇರ್ಪಡೆ ಅಷ್ಟೇ ಬಾಕಿ ಉಳಿದಿದೆ. ಇನ್ನು ಇಬ್ರಾಹಿಂರನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬ ಮಾಹಿತಿಯೂ ಇದ್ದು, ಆದರೆ ಸದ್ಯ ಅದು ಖಚಿತಪಟ್ಟಿಲ್ಲ. ಆದ್ರೆ ಪಕ್ಷಕ್ಕೆ ಸಡ್ಡು ಹೊಡೆದಿರುವ ಜಮೀರ್ ಅಹಮದ್ಗೆ ಪರ್ಯಾಯವಾಗಿ ಸಿ.ಎಂ. ಇಬ್ರಾಹಿಂರನ್ನು ಪಕ್ಷದ ಅಲ್ಪಸಂಖ್ಯಾತ ಮುಖವಾಣಿಯನ್ನಾಗಿಸಿಕೊಳ್ಳಲು ಜೆಡಿಎಸ್ ನಲ್ಲಿ ಗಂಭೀರ ಚಿಂತನೆ ನಡೆದಿರುವುದಂತೂ ನಿಜ.

Comments are closed.