ಕರ್ನಾಟಕ

ಯುವಕನನ್ನು ಥಳಿಸಿದ್ದ ಆರೋಪ: ಡಿಸಿಪಿ ವಿರುದ್ಧ ಕ್ರಿಮಿನಲ್ ಪ್ರಕರಣ

Pinterest LinkedIn Tumblr

Guy-Beaten-Up
ಬೆಂಗಳೂರು: ಯುವಕನೊಬ್ಬನನ್ನು ಅಕ್ರಮ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಆರೋಪದಡಿ ಡಿಸಿಪಿ ಡಿ.ದೇವರಾಜ್, ನಿವೃತ್ತ ಎಸಿಪಿ ಸಿದ್ದಪ್ಪ, ಇನ್‌ಸ್ಪೆಕ್ಟರ್ ಪುನಿತ್‌ಕುಮಾರ್‌, ಎಸ್‌ಐ ದೀಪಕ್ ಹಾಗೂ ಕಾನ್‌ಸ್ಟೆಬಲ್ ಮಲ್ಲೇಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ 3ನೇ ಎಸಿಎಂಎಂ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

2013ರ ಫೆಬ್ರುವರಿಯಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಡಿಸಿಪಿ ಆಗಿದ್ದ ದೇವರಾಜ್, ನಾಲ್ವರು ಸಿಬ್ಬಂದಿ ಜತೆ ಸೇರಿ ನ್ಯೂ ಬಿಇಎಲ್‌ ರಸ್ತೆ ನಿವಾಸಿ ಓವೈಸಿ ಸಬೀರ್ ಹುಸೇನ್‌ (26) ಎಂಬುವರನ್ನು ವಶಕ್ಕೆ ಪಡೆದಿದ್ದರು.

ಬಳಿಕ, ಅವರನ್ನು ಅಕ್ರಮ ಬಂಧನದಲ್ಲಿರಿಸಿ ದೈಹಿಕ ಹಿಂಸೆ ನೀಡಿದ ಆರೋಪ ಡಿಸಿಪಿ ಹಾಗೂ ಸಿಬ್ಬಂದಿ ವಿರುದ್ಧ ಕೇಳಿ ಬಂದಿತ್ತು. ಹುಸೇನ್ ಕುಟುಂಬ ಸದಸ್ಯರು ಪೊಲೀಸರ ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಮೂರು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

ಮಂಗಳವಾರ ಹುಸೇನ್ ಹಾಗೂ ಕೆಲ ಸಾಕ್ಷಿದಾರರ ವಿಚಾರಣೆ ನಡೆಸಿದ ನ್ಯಾಯಾಧೀಶರು, ಐದೂ ಮಂದಿ ಪೊಲೀಸರ ವಿರುದ್ಧ ಅಪರಾಧ ಸಂಚು (ಐಪಿಸಿ 120 ಬಿ), ಹಲ್ಲೆ (ಐಪಿಸಿ 323), ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು (ಐಪಿಸಿ 330), ಅಕ್ರಮ ಬಂಧನ (ಐಪಿಸಿ 348) ಹಾಗೂ ಬೆದರಿಕೆ (506ಬಿ) ಆರೋಪಗಳಡಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ಹೊರಡಿಸಿದರು.

ದಾಖಲೆ ಕದ್ದಿದ್ದರು: ‘ಹುಸೇನ್ ಅವರ ಅಣ್ಣ ಮೊಯಿನ್ ಫಾರೂಕ್ ಅವರು ಶಾಸಕರಾಗಿದ್ದ ವೈ.ಸಂಪಂಗಿ ವಿರುದ್ಧ ಭ್ರಷ್ಟಾಚಾರ ಆರೋಪದಡಿ ದೂರು ದಾಖಲಿಸಿದ್ದರು. ಆ ಪ್ರಕರಣದಲ್ಲಿ ಸಂಪಂಗಿ ಜೈಲು ಸೇರಬೇಕಾಯಿತು. ಇನ್ನೂ ಕೆಲ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಅಕ್ರಮಗಳ ಬಗ್ಗೆಯೂ ತಮ್ಮ ಬಳಿ ದಾಖಲೆಗಳು ಇರುವುದಾಗಿ ಫಾರೂಕ್ ಹೇಳಿಕೊಂಡಿದ್ದರು’ ಎಂದು ಹುಸೇನ್ ಪರ ವಕೀಲ ಎಂ.ಆರ್.ಬಾಲಕೃಷ್ಣ ‘ಪ್ರಜಾವಾಣಿ’ಗೆ ಹೇಳಿದರು.

‘ಆ ದಾಖಲೆಗಳನ್ನು ಕದಿಯುವ ಸಲುವಾಗಿಯೇ 2013ರ ಫೆ.27ರಂದು ಫಾರೂಕ್ ಇಲ್ಲದ ಸಮಯದಲ್ಲಿ ಅವರ ಮನೆ ಮೇಲೆ ದಾಳಿ ನಡೆಸಿದ್ದ ದೇವರಾಜ್ ನೇತೃತ್ವದ ತಂಡ, ಹುಸೇನ್‌ ಅವರನ್ನು ವಶಕ್ಕೆ ತೆಗೆದುಕೊಂಡು ಕೆಲ ದಾಖಲೆಗಳನ್ನು ತೆಗೆದುಕೊಂಡು ಹೋಗಿತ್ತು. ಬಳಿಕ ಅಕ್ರಮ ಬಂಧನದಲ್ಲಿರಿಸಿ ಹುಸೇನ್‌ಗೆ ಚಿತ್ರಹಿಂಸೆ ನೀಡಿತ್ತು.’

‘ಆಗ ಹುಸೇನ್‌ ವಿರುದ್ಧ ಕಳ್ಳತನದ ಸುಳ್ಳು ಆರೋಪ ಹೊರಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಪೊಲೀಸರ ಹಲ್ಲೆಯಿಂದ ಬಳಲಿದ್ದ ಹುಸೇನ್‌ ಸ್ಥಿತಿಯನ್ನು ಕಂಡ ನ್ಯಾಯಾಧೀಶರು, ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದರು. ಈ ವೇಳೆ ದೇಹದ ವಿವಿಧೆಡೆ ಗಂಭೀರವಾದ ಗಾಯಗಳಾಗಿರುವುದನ್ನು ವೈದ್ಯರು ಗುರುತಿಸಿದ್ದರು.’

‘ಪೊಲೀಸರ ವರ್ತನೆ ವಿರುದ್ಧ ಹುಸೇನ್ ಕುಟುಂಬ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟರು. ಪ್ರಕರಣ ಪರಿಶೀಲಿಸಿದ ಆಯೋಗ, 2015ರ ಅಕ್ಟೋಬರ್‌ನಲ್ಲಿ ಈ ಐದು ಮಂದಿಗೆ ₹ 25 ಸಾವಿರ ದಂಡ ವಿಧಿಸಿತ್ತು’ ಎಂದು ವಿವರಿಸಿದರು.

ಹುಸೇನ್, ವೈದ್ಯರ ಹೇಳಿಕೆ: ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಹುಸೇನ್, ‘ಪೊಲೀಸರು ಆ ದಿನ ಮನೆಬಾಗಿಲು ಮುರಿದು ಒಳ ನುಗ್ಗಿದ್ದರು. ನಂತರ ನನ್ನನ್ನು ಅಕ್ರಮ ಬಂಧನದಲ್ಲಿರಿಸಿ ಥಳಿಸಿದ್ದರು’ ಎಂದು ಹೇಳಿಕೆ ಕೊಟ್ಟರು. ಹಿಂದೆ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಸಹ, ‘ಹುಸೇನ್‌ ದೇಹದ ಮೇಲೆ ಹಲ್ಲೆಯಿಂದಾದ ಗಾಯದ ಗುರುತುಗಳಿದ್ದವು’ ಎಂದರು.

Comments are closed.