ಮಂಗಳೂರು: ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯದ ಬಗ್ಗೆ ಜನಜಾಗೃತಿ ಹೆಚ್ಚಾಗುತ್ತಿದೆ. ಕಿಡ್ನಿಗೆ ಹಾನಿಯಾಗಿ ಕಷ್ಟಪಡುವ ಬದಲು , ಕಿಡ್ನಿಯ ಆರೋಗ್ಯಕ್ಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹೇಗೆ ಎಂದು ಯೋಚಿಸುವುದು ತುಂಬಾ ಒಳ್ಳೆಯದು. ಮದ್ಯಪಾನ ಮಾಡುವವರಿಗೆ ಮಾತ್ರ ಕಿಡ್ನಿ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ಯಾವುದೇ ದುರಾಭ್ಯಾಸ ಇಲ್ಲದಿದ್ದರೂ, ಕಿಡ್ನಿಯ ಆರೋಗ್ಯದ ಬಗ್ಗೆ ಗಮನ ಕೊಡದಿದ್ದರೆ ಅದರ ಆರೋಗ್ಯ ಕುಂದಬಹುದು, ಆದ್ದರಿಂದ ಎಚ್ಚರ!
ನಿಮಗೇ ತಿಳಿದರುವಂತೆ ನಾವು ತಿನ್ನುವ ಆಹಾರ ಮತ್ತು ನಮ್ಮ ಅಭ್ಯಾಸಕ್ಕೂ , ನಮ್ಮ ದೇಹದ ಅಂಗಗಳ ಆರೋಗ್ಯಕ್ಕೂ ಒಂದಕ್ಕೊಂದು ನೇರ ಸಂಬಂಧವಿದೆ. ಕಿಡ್ನಿ ಆರೋಗ್ಯದ ಬಗ್ಗೆ ನೋಡುವುದಾದರೆ ಅದನ್ನು ಶುದ್ಧ ಮಾಡುವ ಆಹಾರವನ್ನು ತಿನ್ನಬೇಕು. ಕಿಡ್ನಿಯಲ್ಲಿ ಕಲ್ಮಶ ಸಂಗ್ರಹವಾಗುತ್ತಾ ಹೋದಂತೆ ಕಿಡ್ನಿಯಲ್ಲಿ ಕಲ್ಲು ಮುಂತಾದ ಸಮಸ್ಯೆ ಕಂಡು ಬರುವುದು. ನಿಮ್ಮ ಕಿಡ್ನಿಯ ಆರೋಗ್ಯ ನೀವು ಬಯಸುವುದಾದರೆ ಈ ಕೆಳಗಿನ ಟಿಪ್ಸ್ ಪಾಲಿಸುವುದು ಒಳ್ಳೆಯದು:
ನೀರು:
ಹೆಚ್ಚಿನವರಿಗೆ ನೀರು ಕಮ್ಮಿ ಕುಡಿಯುವ ಅಭ್ಯಾಸವಿರುತ್ತದೆ. ಎರಡು ಗ್ಲಾಸ್ ಗಿಂತ ಕಡಿಮೆ ನೀರು ಕುಡಿಯುವವರೂ ಇರುತ್ತಾರೆ. ಬಾಯಾರಿಕೆ ಆಗುವುದಿಲ್ಲ, ಮತ್ತೆ ಹೆಚ್ಚು ನೀರು ಕುಡಿಯುವುದು ಹೇಗೆ ಅನ್ನುವುದೇ ಅವರ ಸಮಸ್ಯೆಯಾಗಿರುತ್ತದೆ. ಬಾಯಾರಿಕೆಯಾದಾಗ ನೀರು ಕುಡಿಯುತ್ತೇವೆ ಅಂದರೆ ಹೆಚ್ಚು ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಕಪ್ಪು ಬೀನ್ಸ್:
ಬ್ಲ್ಯಾಕ್ ಬೀನ್ಸ್ ಕಿಡ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾರದಲ್ಲಿ ಎರಡು ಬಾರಿಯಾದರೂ ಬ್ಲ್ಯಾಕ್ ಬೀನ್ಸ್ ತಿನ್ನಬೇಕು. ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಬ್ಲ್ಯಾಕ್ ಬೀನ್ಸ್ ಹೆಚ್ಚಾಗಿ ತಿನ್ನುವುದು ಒಳ್ಳೆಯದು.
ಮೂತ್ರವಿಸರ್ಜನೆ:
ಮೂತ್ರ ವಿಸರ್ಜನೆಗೆ 2-3 ಗಂಟೆಗಳಗೊಮ್ಮೆ ಹೋಗಿ. ಮೂತ್ರ ಬಂದರೆ ತಡೆ ಹಿಡಿಯುವ ಪ್ರಯತ್ನ ಮಾಡಬೇಡಿ. ಮೂತ್ರವನ್ನು ತಡೆ ಹಿಡಿಯುವುದರಿಂದ ಕಿಡ್ನಿ ಸ್ಟೋನ್ಸ್ ಬರಬಹುದು.
ಆಂಟಿ ಆಕ್ಸಿಡೆಂಟ್ಸ್ ಇರುವ ಆಹಾರಗಳು:
ಆಂಟಿ ಆಕ್ಸಿಡೆಂಟ್ಸ್ ಅಧಿಕವಿರುವ ಹಣ್ಣು-ತರಕಾರಿಗಳನ್ನು ತಿನ್ನಿ. ಸಿಟ್ರಸ್ ಮತ್ತು ಬೆರ್ರಿ ಹಣ್ಣುಗಳಲ್ಲಿ ಈ ಅಂಶ ಅಧಿಕವಿರುತ್ತದೆ.
ಕೊತ್ತಂಬರಿ ಸೊಪ್ಪು:
ಕೊತ್ತಂಬರಿ ಸೊಪ್ಪು ಕಣ್ಣಿಗೆ ಮತ್ತು ಕಿಡ್ನಿಗೆ ತುಂಬಾ ಒಳ್ಳೆಯದು. ಇದು ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಿಡ್ನಿಯನ್ನು ಶುದ್ಧ ಮಾಡುತ್ತದೆ.
ಉಪ್ಪು:
ಕಿಡ್ನಿ ಸಮಸ್ಯೆ ಇರುವವರು ಕಲ್ಲುಪ್ಪು ತಿನ್ನುವುದು ಒಳ್ಳೆಯದು.
ಖಾರದ ಆಹಾರಗಳಿಂದ ದೂರವಿರಿ:
ಅತೀಯಾದ ಖಾರದ ಆಹಾರಗಳು ಆರೋಗ್ಯಕರವಲ್ಲ. ಖಾರವನ್ನು ಮಿತಿಯಲ್ಲಿ ತಿನ್ನಿ. ಖಾರ ಕಮ್ಮಿ ತಿನ್ನುವುದು ಲಿವರ್ ಗೂ ಒಳ್ಳೆಯದು.
ಸೊಪ್ಪು:
ಸೊಪ್ಪನ್ನು ತಿನ್ನಿ. ಇದರಲ್ಲಿ ವಿಟಮಿನ್ ಕೆ ಮತ್ತು ಕಬ್ಬಿಣದಂಶ, ನಾರಿನಂಶ ಅಧಿಕವಿದ್ದು ಕಿಡ್ನಿಯ ಆರೋಗ್ಯವನ್ನು ಕಾಪಾಡುತ್ತದೆ.
ರೆಡ್ ಕ್ಯಾಬೇಜ್ :
ಕಿಡ್ನಿ ಸಮಸ್ಯೆ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಮಧುಮೇಹ ಇರುವವರಂತೂ ತುಂಬಾ ಎಚ್ಚರವಹಿಸಬೇಕು. ರೆಡ್ ಕ್ಯಾಬೇಜ್ ಕಿಡ್ನಿ ಡ್ಯಾಮೇಜ್ ತಡೆಯುವಲ್ಲಿ ಸಹಕಾರಿಯಾಗಿದೆ.
ಕಾಫಿಯನ್ನು ಮಿತಿಯಲ್ಲಿ ಕುಡಿಯಿರಿ:
ಕಾಫಿ ಕುಡಿದರೆ ಲವಲವಿಕೆ ತುಂಬುವುದು, ಆದರೆ ಮಿತಿ ಮೀರಿ ಕುಡಿಯಬೇಡಿ, ಆರೋಗ್ಯಕ್ಕೆ ಒಳ್ಳೆಯದು.
ಕಿಡ್ನಿ ಆರೋಗ್ಯ ಹೆಚ್ಚಿಸುವ ವ್ಯಾಯಾಮಗಳು:
ವ್ಯಾಯಾಮ ನಿಮ್ಮ ದೇಹದ ಎಲ್ಲಾ ಅಂಗಗಳಿಗೂ ಅವಶ್ಯಕ. ಆದ್ದರಿಂದ ಪ್ರತೀದಿನ ವ್ಯಾಯಾಮಕ್ಕಾಗಿ ಸಮಯ ಮೀಸಲಿಟ್ಟರೆ ಆಸ್ಪತ್ರೆಗೆ ಹೋಗುವ ಸಮಯವನ್ನು ಉಳಿಸಬಹುದು.
ಆಲೀವ್ ಎಣ್ಣೆ;
ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು ಕೊಬ್ಬಿನಂಶವಿರುವ ಎಣ್ಣೆ ಬಳಸುವ ಬದಲು ಆಲೀವ್ ಎಣ್ಣೆ ಯನ್ನು ಅಡುಗೆಗೆ ಬಳಸುವುದು ಒಳ್ಳೆಯದು.
ಎಳ್ಳು ಕೂಡ ತುಂಬಾ ಒಳ್ಳೆಯದು:
ಎಳ್ಳು ಜ್ಯೂಸ್ ಕುಡಿಯುವುದು, ಎಳ್ಳು ತಿನ್ನುವುದು ಮಾಡುವುದು ಒಳ್ಳೆಯದು. ಇದು ಕಿಡ್ನಿ ಸರಿಯಾಗಿ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
ಬಾಳೆ ಹೂ:
ಬಾಳೆಹೂ ಅಥವಾ ಬಾಳೆದಿಂಡಿನ ಪಲ್ಯ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ.
ದಾಳಿಂಬೆ:
ದಾಳಿಂಬೆ ಜ್ಯೂಸ್ ಕಿಡ್ನಿ ಸ್ಟೋನ್ ಬರದಂತೆ ತಡೆಯುತ್ತದೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ಹೆಚ್ಚಿನ ಉಪಯೋಗ ಪಡೆಯಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಮೂಲಂಗಿ ಸೊಪ್ಪು/ಕೊತ್ತಂಬರಿ ಸೊಪ್ಪು:
ಒಂದು ಹಿಡಿ ಮೂಲಂಗಿ ಸೊಪ್ಪು ಅಥವ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ ಅದನ್ನು ಕುದಿಯುವ ನೀರಲ್ಲಿ ಹಾಕಿ 10 ನಿಮಿಷ ಬೇಯಿಸಿಬೇಕು. ನಂತರ ಸೋಸಿಕೊಂಡು ತಂಪಾದ ಸ್ಥಳ ಅಥವಾ ಪ್ರಿಜ್ ನಲ್ಲಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ದಿನವು ಒಂದು ಗ್ಲಾಸ್ ಈ ನೀರನ್ನು ಕುಡಿಯುತ್ತಿರಿ ಕಿಡ್ನಿ ಸ್ವಚ್ಛವಾಗುತ್ತದೆ.
ತಂಪು ಪಾನೀಯಾಗಳು:
ಸೋಡಾ ಮತ್ತು ತಂಪು ಪಾನೀಯದ ಅತಿಯಾದ ಸೇವನೆ ಕಿಡ್ನಿಗೆ ಮಾರಕ. ಗಾಢವಾದ ಸೋಡಾದಲ್ಲಿನ ಆಸಿಡ್ ಮತ್ತು ಮಿನರಲ್ ಗಳು ಕಿಡ್ನಿಗೆ ತೊಂದರೆ ನೀಡುತ್ತದೆ. ಪಾನೀಯದಲ್ಲಿರುವ ಫಾಸ್ಫಾರಿಕ್ ಆಸಿಡ್, ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಹೀರಿಕೊಂಡು, ಕಿಡ್ನಿಯಲ್ಲಿ ಕಲ್ಲುಗಳಾಗಿ ಮಾರ್ಪಾಡಾಗುತ್ತದೆ.
ಮದ್ಯಪಾನ:
ಮದ್ಯಪಾನದ ಚಟವಿರುವವರಿಗೆ ಕಿಡ್ನಿ ಬೇಗನೆ ಹಾಳಾಗುತ್ತದೆ. ಆದ್ದರಿಂದ ಆ ಚಟಕ್ಕೆ ಕಡಿವಾಣ ಹಾಕುವುದು ಒಳ್ಳೆಯದು.