ಬೆಂಗಳೂರು: ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ವಿರುದ್ಧ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಸಂಖ್ಯಾಶಾಸ್ತ್ರ ಕಲಿಸುವುದಾಗಿ ಹಣ ಪಡೆದಿದ್ದ ಆರ್ಯವರ್ಧನ್ ತರಗತಿ ನಡೆಸದೆ ಹಣವೂ ನೀಡದೆ ವಂಚಿಸಿದ್ದಾರೆ ಎಂದು ನೊಂದ ಮಹಿಳೆ ರಾಜರಾಜೇಶ್ವರಿನಗರ ಪೊ ಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಶನಿವಾರದಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರು ಪುದುಚೇರಿಯಲ್ಲಿ ಆರ್ಯವರ್ಧನ್‍ರನ್ನ ಬಂಧಿಸಿದ್ದರು. ಆಗಸ್ಟ್ 21ರಂದು ನಡೆದಿದ್ದ ಅತ್ಯಾಚಾರ ಯತ್ನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಂಖ್ಯಾಶಾಸ್ತ್ರ ತರಬೇತಿ ನೀಡುವ ನೆಪದಲ್ಲಿ ಆತ್ಯಾಚಾರಕ್ಕೆ ಯತ್ನಿಸಿದ್ರು ಅಂತ ಆಂಧ್ರದ ಕರ್ನೂಲು ಮೂಲದ ಮಹಿಳೆ ಡಿಸೆಂಬರ್ 12ರಂದು ಆರ್ಯವರ್ಧನ್ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ಸಂಬಂಧ ಶನಿವಾರದಂದೇ ಆರ್ಯವರ್ಧನ್ ಕೋರ್ಟ್‍ನಿಂದ ಜಾಮೀನು ಪಡೆದಿದ್ದರು.
ಇಂದು ಆರ್ಯವರ್ಧನ್ ಹೈದ್ರಾಬಾದ್ ಮೂಲದ ಮಹಿಳೆ ನೀಡಿದ್ದ ದೂರಿನನ್ವಯ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾದರು. ವಿಚಾರಣೆಗೆ ಬಂದ ವೇಳೆ ಆರ್ಯವರ್ಧನ್ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಬೆಂಬಲಿಗರಿಂದ ಪ್ರತಿಭಟನೆಯೂ ನಡೆಯಿತು. ಪ್ರತಿಭಟನೆಯ ಮಾಡುತ್ತಿದ್ದ ಗುಂಪನ್ನ ಪೊಲೀಸರು ಚದುರಿಸಿದ್ರು.