ಕರ್ನಾಟಕ

ರಾಜ್ಯದ ಕಪ್ಪು ಕುಳಗಳಿಂದ 1000 ಕೋಟಿ ರೂ. ಸಂಪತ್ತು

Pinterest LinkedIn Tumblr

noteಬೆಂಗಳೂರು: ಕೇಂದ್ರ ಸರ್ಕಾರ 500, 1000 ರೂ. ಮುಖಬೆಲೆ ನೋಟುಗಳನ್ನು ರದ್ದು ಮಾಡಿದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಪ್ಪುಕುಳಗಳ ಭರ್ಜರಿ ಬೇಟೆಯಾಡಿದ್ದಾರೆ. ನ.9ರಿಂದ ಈವರೆಗೆ 1000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಕ್ರಮ ಮತ್ತು ಲೆಕ್ಕ ತೋರಿಸದ ಆಸ್ತಿಗಳನ್ನು 36 ಪ್ರಕರಣಗಳಿಂದ ಪತ್ತೆಯಾಗಿದ್ದು, ಕಪ್ಪುಕುಳಗಳು ಬೆಚ್ಚಿ ಬಿದಿದ್ದಾರೆ.

ಕರ್ನಾಟಕ ಮತ್ತು ಗೋವಾ ಡೈರೆಕ್ಟೊರೇಟ್ ಅಧಿಕಾರಿಗಳು 29.86 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಬಚ್ಚಿಟ್ಟಿದ್ದ 41.6 ಕೆಜಿ ಚಿನ್ನದ ಗಟ್ಟಿ ಹಾಗೂ 14 ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಸಿಕೊಂಡ ನೋಟುಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳೇ 20.22 ಕೋಟಿ ರೂ. ಇವೆ ಎನ್ನುತ್ತಾರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು.

ಜಯಚಂದ್ರ ಕಸ್ಟಡಿ ಇಂದು ಅಂತ್ಯ: ಅಕ್ರಮ ಆಸ್ತಿ ಸಂಪಾದನೆ ಮತ್ತು ನೋಟುಗಳ ಬದಲಾವಣೆ ಪ್ರಕರಣದಲ್ಲಿ ಐಟಿ ಬಲೆಗೆ ಬಿದ್ದಿರುವ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಂಡಿ ಎಸ್.ಸಿ. ಜಯಚಂದ್ರ ಸದ್ಯ ಜಾರಿ ನಿರ್ದೇಶನಾಲಯ ವಶದಲ್ಲಿ ಇದ್ದಾರೆ. ಗುರುವಾರಕ್ಕೆ (ಡಿ.15) 14 ದಿನಗಳ ಪೊಲೀಸ್ ಕಸ್ಟಡಿ ಮುಗಿಯಲಿದ್ದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಜಯಚಂದ್ರರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಮತ್ತು ರಾಜ್ಯ ಎಸಿಬಿ ಕಾತುರದಿಂದ ಕಾಯುತ್ತಿವೆ. ಈಗಾಗಲೇ ಎಸಿಬಿ ಜಯಚಂದ್ರ ಮತ್ತು ಚಿಕ್ಕರಾಯಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಜಯಚಂದ್ರರನ್ನು ವಶಕ್ಕೆ ನೀಡುವಂತೆ ಕೋರಿ ಎರಡೂ ವಿಚಾರಣಾ ಸಂಸ್ಥೆಗಳು ನ್ಯಾಯಾಲಯಕ್ಕೆ ಅರ್ಜಿ ಹಾಕಲಿವೆ ಎಂದು ತಿಳಿದು ಬಂದಿದೆ. ಇವರನ್ನು ಹೊರತು ಪಡಿಸಿ ಜಯಚಂದ್ರ ಸಂಬಂಧಿ ಪ್ರಶಾಂತ್ ಸೇರಿ 7 ಜನ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ವೀರೇಂದ್ರನ ತೀವ್ರ ವಿಚಾರಣೆ: ಚಿತ್ರದುರ್ಗದ ಚಳ್ಳಕೆರೆಯ ಕ್ಯಾಸಿನೋ ಉದ್ಯಮಿ ವೀರೇಂದ್ರನನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಚ್ಚಲು ಮನೆಯಲ್ಲಿ ರಹಸ್ಯ ಲಾಕರ್ ಹೊಂದಿದ್ದು ಅದರಲ್ಲಿ 5.7 ಕೋಟಿ ರೂ. ನಗದು ಮತ್ತು 28 ಕೆಜಿ ಚಿನ್ನವನ್ನು ಬಚ್ಚಿಟ್ಟಿದ್ದ ವೀರೇಂದ್ರ ಅಕ್ರಮವಾಗಿ ಹಣ ಸಂಪಾದನೆ ಮಾಡಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉದ್ಯಮಿ ವೀರೇಂದ್ರರ ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರಕ್ಕೆ ವೀರೇಂದ್ರ ಕಸ್ಟಡಿ ಅಂತ್ಯವಾಗಲಿದ್ದು ನಂತರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ವಿಮಾನ ನಿಲ್ದಾಣಗಳಲ್ಲಿ 70 ಕೋಟಿ ರೂ. ಮೌಲ್ಯದ ಅಕ್ರಮ ಹಣ ವಶ

ಮುಂಬೈ: ನೋಟು ನಿಷೇಧದ ನಂತರ, ಕಪ್ಪು ಹಣ ಸಾಗಣೆ ಮೇಲೆ ನಿಗಾ ಇರಿಸಿದ್ದ ಕೇಂದ್ರ ಕೈಗಾರಿಕಾ ಭದ್ರತಾ ತಂಡದ(ಸಿಐಎಸ್ಎಫ್), ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ 70 ಕೋಟಿ ರೂ. ನಗದು, 170 ಕೆಜಿ ಚಿನ್ನವನ್ನು ಜಪ್ತಿ ಮಾಡಿದೆ. ಸಿಐಎಸ್ಎಫ್ನ ಡೈರೆಕ್ಟರ್ ಜನರಲ್ ಓ.ಪಿ.ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, 70 ಕೋಟಿ ರೂ. ಮೌಲ್ಯದ ನಗದಿನಲ್ಲಿ ಹಳೆಯ ಹಾಗೂ ಹೊಸ ನೋಟುಗಳಿದ್ದವು. ಹೊಸ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು ಎಂದಿದ್ದಾರೆ.

3.25 ಕೋಟಿ ರೂ. ವಶ: ನವದೆಹಲಿಯ ಕರೋಲ್ಭಾಗ್ನ ಹೋಟೆಲ್ ಒಂದರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ ವೇಳೆ ಐದು ಜನರ ತಂಡದ ಬಳಿಯಿದ್ದ 3.25 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆಯಾಗಿವೆ. ಮುಂಬೈ ಮೂಲದ ಹವಾಲಾ ತಂಡಕ್ಕೆ ಸೇರಿದ ಈ ನೋಟುಗಳು ಸೂಟ್ಕೇಸ್ ಹಾಗೂ ಮರದ ಬಾಕ್ಸ್ಗಳಲ್ಲಿ ತುಂಬಿಸಿಡಲಾಗಿತ್ತು. ಈ ನೋಟುಗಳು ವಿಮಾನನಿಲ್ದಾಣದ ತಪಾಸಣೆಯಲ್ಲಿ ಪತ್ತೆಯಾಗದಂತೆ, ಎಕ್ಸ್ರೇ ಮೂಲಕ ಹಾದು ಹೋಗುವ ಟೇಪ್ ಹಾಗೂ ವೈರ್ಗಳನ್ನು ಬಳಸಿ ಪ್ಯಾಕಿಂಗ್ ತಜ್ಞರಿಂದ ಪ್ಯಾಕ್ ಮಾಡಿಸಲಾಗಿತ್ತು ಎಂದು ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ. ಆರೋಪಿಗಳನ್ನು ಅನ್ಸಾರಿ ಅಬೂಜರ್, ಫಜಲ್ ಖಾನ್, ಅನ್ಸಾರಿ ಅಫ್ಪಾನ್, ಲಾಡು ರಾಮ್ ಹಾಗೂ ಮಹಾವೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರ ಸಂಪರ್ಕ ಜಾಲ ಪತ್ತೆಗೆ ಮೊಬೈಲ್ಗಳನ್ನು ಪರಿಶೀಲಿಸಲಾಗುತ್ತಿದೆ.

ಚಂಡೀಗಢದಲ್ಲಿ 2.19 ಕೋಟಿ ರೂ. ನಗದು ಪತ್ತೆ: ಕಪ್ಪುಹಣ ಬಿಳಿ ಮಾಡುವ ಹವಾಲಾ ದಂಧೆಯ ಮೇಲೆ ಕಣ್ಣಿಟ್ಟಿರುವ ಜಾರಿ ನಿರ್ದೇಶನಾಲಯ, ಚಂಡೀಗಢದಲ್ಲಿ ಬಟ್ಟೆ ವರ್ತಕ ಇಂದರ್ಪಾಲ್ ಮಹಾಜನ್ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದು, 2.19 ಕೋಟಿ ರೂ. ಮೌಲ್ಯದ ನಗದು ವಶಪಡಿಸಿಕೊಂಡಿದೆ. ಅದರಲ್ಲಿ 69.35ಲಕ್ಷ ರೂ. ಮೌಲ್ಯದ ಹೊಸ ನೋಟು ಹಾಗೂ 1.50 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆಯಾಗಿವೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಪಣಜಿಯಲ್ಲಿ ಆರು ಜನರ ಬಂಧನ

ಪಣಜಿ: ಕಲಂಗುಟ್ನಲ್ಲಿ ದಾಖಲೆ ಇಲ್ಲದೆ 2000 ಮುಖಬೆಲೆಯ 24 ಲಕ್ಷ ರೂ.ಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಬುಧವಾರ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ ಎಂದು ಪಿಐ ಜೀವಬಾ ದಳವಿ ತಿಳಿಸಿದ್ದಾರೆ. ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ವರ್ಗಾಯಿಸಿ 2000 ರೂ. ನೋಟುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

70 ಲಕ್ಷ ರೂ. ವಶ: ಇನ್ನೊಂದು ಪ್ರಕರಣದಲ್ಲಿ, ಗೋವಾದಿಂದ ಬೆಳಗಾವಿಗೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 2000 ರೂ. ಮುಖಬೆಲೆಯ 70 ಲಕ್ಷ ರೂ.ಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.

ಮೈಸೂರಿನ ಮೂವರ ಸೆರೆ

ಅಜ್ಜಂಪುರ/ ಶಿವಮೊಗ್ಗ: ಮೈಸೂರಿನಿಂದ ಅಜ್ಜಂಪುರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 2 ಸಾವಿರ ರೂ. ಮುಖಬೆಲೆಯ 3.88 ಲಕ್ಷ ರೂ.ಗಳನ್ನು ಅಜ್ಜಂಪುರ ಪೊಲೀಸರು ಕಾರು ಸಹಿತ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೈಸೂರಿನ ಹಾರ್ಡ್ವೇರ್ ಮಾಲೀಕ ಸುಶೀಲ್ಕುಮಾರ್, ಕೆಲಸಗಾರ ಸುನಿಲ್ಕುಮಾರ್, ಕಾರು ಚಾಲಕ ಮಳವಳ್ಳಿ ತಾಲೂಕು ಕಾಗೇಪುರದ ರಾಜು ಬಂಧಿತರು. ಇವರನ್ನು ತರೀಕೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಣ ದೋಚಿದ್ದ 8 ಪೊಲೀಸರ ವಜಾ

ಬೆಂಗಳೂರು: ಹಳೇ ನೋಟು ಬದಲಿಸಿಕೊಡುವ ನೆಪದಲ್ಲಿ ದರೋಡೆ ನಡೆಸಿ ಜೈಲು ಸೇರಿರುವ ಸಬ್ ಇನ್ಸ್ಪೆಕ್ಟರ್ ಸೇರಿ 8 ಪೊಲೀಸರನ್ನು ವಜಾಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಖ್ ಆದೇಶ ಹೊರಡಿಸಿದ್ದಾರೆ.

ಕಲಾಸಿಪಾಳ್ಯ ಠಾಣೆ ಪಿಎಸ್ಐ ಎನ್.ಸಿ.ಮಲ್ಲಿಕಾರ್ಜುನ್, ಪೇದೆಗಳಾದ ಮಂಜುನಾಥ್ ಮೊಗ್ಗದ್, ಎಲ್.ಕೆ.ಗಿರೀಶ್, ಚಂದ್ರಶೇಖರ್, ಆನಂತರಾಜು, ಗಿರಿನಗರ ಠಾಣೆಯ ಮುಖ್ಯಪೇದೆ ಮಯೂರ ಮತ್ತು ಪೇದೆ ರಾಘವಕುಮಾರ್ ಹಾಗೂ ಸಿಸಿಬಿ ಪೇದೆ ಬಿ.ಶೇಷಾ ವಜಾಗೊಂಡವರು. ನವೆಂಬರ್ 22ರಂದು ಗಂಗಾಧರ್ ಎಂಬುವರನ್ನು ವಂಚಿಸಿ ಕಲಾಸಿಪಾಳ್ಯ ಠಾಣೆ ಪಿಎಸ್ಐ ಮಲ್ಲಿಕಾರ್ಜುನ್, ಪೇದೆಗಳಾದ ಗಿರೀಶ್, ಮಂಜುನಾಥ್, ಚಂದ್ರಶೇಖರ್, ಅನಂತರಾಜು ಹಾಗೂ ಪೊಲೀಸ್ ಮಾಹಿತಿದಾರರಾದ ಜಾಫರ್, ಭಾಸ್ಕರ್ 35 ಲಕ್ಷ ರೂ. ದರೋಡೆ ಮಾಡಿದ್ದರು. ಗಿರಿನಗರ ಠಾಣೆಯ ಮಯೂರ್ ಮತ್ತು ರಾಘವಕುಮಾರ್ ವಾಹನ ತಪಾಸಣೆ ನೆಪದಲ್ಲಿ ವಕೀಲೆ ಸುಕನ್ಯಾ ಅವರಿಂದ 8 ಲಕ್ಷ ರೂ. ಕಸಿದುಕೊಂಡಿದ್ದರು. ಎಲೆಕ್ಟ್ರಿಕ್ ಉಪಕರಣ ಮಾರಾಟ ಮಳಿಗೆ ಮಾಲೀಕ ಜೈಶಂಕರ್ಗೆ ಕಮೀಷನ್ ಆಮಿಷವೊಡ್ಡಿ ನ.26ರಂದು ಸಿಸಿಬಿ ಪೇದೆ ಬಿ.ಶೇಷ ಮತ್ತು ಆತನ ಗ್ಯಾಂಗ್ 21.5 ಲಕ್ಷ ರೂ. ದರೋಡೆ ನಡೆಸಿತ್ತು.

ಈ ಹಿಂದೆಯೂ ಆಗಿತ್ತು: 2001ರಲ್ಲಿ ಕೇರಳ ಮೂಲದ ಆಭರಣ ವ್ಯಾಪಾರಿಗಳನ್ನು ವಂಚಿಸಿದ್ದ ವಿಜಯನಗರ ಸಂಚಾರ ವಿಭಾಗ ಎಸಿಪಿ ಆಗಿದ್ದ ಬೆಳ್ಳಿಯಪ್ಪ 19 ಲಕ್ಷ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ದೂರು ನೀಡಲು ಬಂದ ವ್ಯಾಪಾರಿಗಳನ್ನು ಎಳೆದೊಯ್ದು ಜೀವ ಬೆದರಿಕೆ ಹಾಕಲಾಗಿತ್ತು. ಇದನ್ನು ತಿಳಿದ ಅಂದಿನ ಪೊಲೀಸ್ ಕಮಿಷನರ್ 4 ದಿನದಲ್ಲೇ ಬೆಳ್ಳಿಯಪ್ಪರನ್ನು ಸೇವೆಯಿಂದ ವಜಾ ಮಾಡಿದ್ದರು. ಇದಾದ ಮೇಲೆ ಇಂತಹ ಪ್ರಕರಣ ನಡೆದಿರಲಿಲ್ಲ.

Comments are closed.