ಬಾಗಲಕೋಟೆ: ಕಳೆದ ಮೂರು ದಿನಗಳಿಂದ ನನ್ನ ಪತ್ನಿ ಕಾಣಿಸುತ್ತಿಲ್ಲ ಮತ್ತು ದೂರವಾಣಿ ಕರೆಗೂ ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಎಚ್.ವೈ.ಮೇಟಿ ಅವರ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿರುವ ಮಹಿಳೆಯ ಪತಿ ಸೋಮವಾರ ಆರೋಪಿಸಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂತ್ರಸ್ಥ ಮಹಿಳೆಯ ಪತಿ, ಕಳೆದ ಮೂರು ದಿನಗಳಿಂದ ನನ್ನ ಪತ್ನಿ ನಾಪತ್ತೆಯಾಗಿದ್ದು, ಆಕೆಯ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ ಎಂದಿದ್ದಾರೆ. ಅಲ್ಲದೆ
ಆಕೆಯನ್ನು ಹುಡುಕಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
ಇದೇ ವೇಳೆ ಈಗಾಗಲೇ ಮಾಧ್ಯಮಗಳಲ್ಲಿ ಮಹಿಳೆ ನೋವು ತೋಡಿಕೊಂಡಿರುವ ವಿಡಿಯೋ ಬಿತ್ತರವಾಗುತ್ತಿದ್ದು, ಆ ವಿಡಿಯೋದಲ್ಲಿರುವುದು ನನ್ನ ಪತ್ನಿ ಎಂದು ಪತಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಸಟಿವ ಎಚ್.ವೈ.ಮೇಟಿ ನನಗೆ ಸಂಬಂಧಿಯಾಗಬೇಕು ಎಂದಿರುವ ಮಹಿಳೆಯ ಪತಿ, ಸಂಬಂಧದಲ್ಲಿ ಮೇಟಿ ಸಾಹೇಬರು ನನಗೆ ಅಜ್ಜನಾಗಬೇಕು. ಅವರಿಗೂ ನಮಗೂ ಬೇರೆ ರೀತಿ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದು ಸುಳ್ಳು.ಯಾರದೋ ರಾಜಕೀಯ ದ್ವೇಷಕ್ಕೆ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವ ಎಚ್.ವೈ.ಮೇಟಿ ಅವರ ರಾಸಲೀಲೆ ಪ್ರಕರಣದ ಸುತ್ತ ಇದೀಗ ಹಲವು ಅನುಮಾನಗಳು ಮೂಡುತ್ತಿದ್ದು, ಈ ವಿದ್ಯಮಾನಗಳನ್ನು ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆಯೋ ಎನ್ನುವ ಸಂಶಯಗಳು ಮೂಡುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ನಾನು ವಿಡಿಯೋ ನೋಡಿದ್ದೇನೆ ಆದರೆ ಅದು ನನ್ನ ಬಳಿ ಇಲ್ಲ ಎಂದಿದ್ದಾರೆ. ಇನ್ನೊಂದೆಡೆ ಮಹಿಳೆಯ ಪತಿ ನನ್ನ ಪತ್ನಿ ನಾಪತ್ತೆಯಾಗಿದ್ದಾರೆ ಎಂದಿದ್ದು, ಹಲವು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.