ಕರ್ನಾಟಕ

ಮಂಗಳೂರು ಅಥವಾ ಭಾರತದ ಪಶ್ಚಿಮ ಕರಾವಳಿಗೆಯಲ್ಲಿ ಚಂಡಮಾರುತಗಳು ಬಡಿಯೋದಿಲ್ಲ ಯಾಕೆ?

Pinterest LinkedIn Tumblr

cyclone_imagesಬೆಂಗಳೂರು(ಡಿ. 12): ಭಾರತದ ಪೂರ್ವ ಕರಾವಳಿ ಭಾಗದಲ್ಲಿ(ಬಂಗಾಳ ಕೊಲ್ಲಿ) ಚಂಡಮಾರುತಗಳು ಸರ್ವೇಸಾಮಾನ್ಯ. ಮಂಗಳೂರು ಇತ್ಯಾದಿ ಪಶ್ಚಿಮ ಕರಾವಳಿ(ಅರೇಬಿಯನ್ ಸಮುದ್ರ) ಭಾಗದಲ್ಲಿ ಚಂಡಮಾರುತಗಳು ತೀರಾ ಅಪರೂಪ. ಎರಡೂ ಕೂಡ ಕರಾವಳಿ ತೀರಗಳೇ ಆದರೂ ಚಂಡಮಾರುತದ ವಿಷಯದಲ್ಲಿ ಈ ವ್ಯತ್ಯಾಸ ಯಾಕೆ? ಮಂಗಳೂರಿನ ಕಡೆ ಯಾಕೆ ಚಂಡಮಾರುತಗಳು ಬಡಿಯೋದಿಲ್ಲ? ಎಂಬ ಪ್ರಶ್ನೆಗಳು ಮೂಡುವುದು ಸಹಜ.
ಇದಕ್ಕೆ ಎರಡು ಮೂರು ರೀತಿಯ ಉತ್ತರಗಳಿವೆ. ಜಗತ್ತಿನಾದ್ಯಂತ ಪ್ರತೀ ವರ್ಷ ಸುಮಾರು 87 ಚಂಡಮಾರುತಗಳು ನಿರ್ಮಾಣವಾಗುತ್ತವೆ. ವಿಶ್ವದ ಪ್ರಮುಖ ಭೂಭಾಗಗಳಲ್ಲಿ ಪೂರ್ವ ಕರಾವಳಿ ತೀರಗಳು ಪಶ್ಚಿಮದವಕ್ಕಿಂತ ಹೆಚ್ಚಾಗಿ ಚಂಡಮಾರುತಕ್ಕೆ ತುತ್ತಾಗುತ್ತವೆ. ಅಮೆರಿಕದಲ್ಲೂ ಪೂರ್ವಕರಾವಳಿ ಭಾಗದಲ್ಲೇ ಚಂಡಮಾರುತ(ಹುರಿಕೇನ್)ಗಳು ಹೆಚ್ಚು ಉಪದ್ರವ ಕೊಡುತ್ತವೆ. ಚಂಡಮಾರುತಗಳು ಪಶ್ಚಿಮದಿಂದ ಪೂರ್ವದ ಕಡೆಗೆ ಬೀಸುವುದರಿಂದ ಇದಕ್ಕೆ ಕಾರಣವಿರಬಹುದು.
ಅರೇಬಿಯನ್ ಸಾಗರದ ಕಡಿಮೆ ಉಷ್ಣಾಂಶ:
ಚಂಡಮಾರುತಗಳು ನಿರ್ಮಾಣವಾಗಲು ಸಮುದ್ರದ ಉಷ್ಣಾಂಶ ಮೂಲಭೂತ ಅಂಶ. ಸಮುದ್ರದ ಮೇಲ್ಮೈನಲ್ಲಿ 25-27 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶವಿದ್ದರೆ ಚಂಡಮಾರುತದ ನಿರ್ಮಾಣಕ್ಕೆ ಹೇಳಿಮಾಡಿಸಿದ ವಾತಾವರಣ ಸೃಷ್ಟಿಯಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಈ ವಾತಾವರಣವಿದೆ. ಹೀಗಾಗಿ, ಅಲ್ಲಿ ಚಂಡಮಾರುತಗಳು ಸುಲಭವಾಗಿ ನಿರ್ಮಾಣವಾಗುತ್ತವೆ.
ಚಂಡಮಾರುತಗಳ ನಿರ್ಮಾಣ ಹೇಗೆ?
ಚಂಡಮಾರುತ ನಿರ್ಮಾಣವಾಗಬೇಕಾದರೆ ಈ ಕೆಳಕಾಣಿಸಿದ ನಾಲ್ಕು ಅಂಶಗಳು ಮುಖ್ಯ.
1) ಸಮುದ್ರದ ಉಷ್ಣಾಂಶ:
ಎರಡು ಪ್ಯಾರಾಗಳ ಹಿಂದೆ ವಿವರಿಸಿದಂತೆ ಸಮುದ್ರದ ಉಷ್ಣಾಂಶವು 25-27 ಡಿಗ್ರಿ ಸೆಲ್ಷಿಯಸ್ ಇರಬೇಕು. ಇದು ತೇವಾಂಶ ಹಿಡಿದಿಡಲು ಅನುಕೂಲವಾದ ಉಷ್ಣಾಂಶವಾಗಿರುತ್ತದೆ. ಚಂಡಮಾರುತಕ್ಕೆ ಪೂರಕ ವಾತಾವರಣ ಇದಾಗಿದೆ.
2) ವಿಂಡ್ ಶೇರ್:
ಗಾಳಿಯ ವೇಗದಲ್ಲಿ ಆಗುವ ಬದಲಾವಣೆಯನ್ನು ವಿಂಡ್ ಶೇರ್ ಎನ್ನುತ್ತಾರೆ. ಸಮನಾಂತರ ರೇಖೆಯ ಮತ್ತು ಲಂಬ ರೇಖೆ ಎಂಬ ಎರಡು ರೀತಿಯ ವಿಂಡ್ ಶೇರ್’ಗಳಿವೆ. ಅಕ್ಷಾಂಶ(Latitude)ದೊಂದಿಗೆ ಗಾಳಿಯ ವೇಗದಲ್ಲಿರುವ ಬದಲಾವಣೆಯು ಸಮಾನಾಂತರ ವಿಂಡ್ ಶೇರ್ ಎನಿಸುತ್ತದೆ. ಎತ್ತರ(Altitude)ದೊಂದಿಗೆ ಗಾಳಿಯ ವೇಗ ಬದಲಾವಣೆಯನ್ನು ಲಂಬ ವಿಂಡ್ ಶೇರ್ ಎನ್ನುತ್ತಾರೆ. ತೀರಾ ಕಡಿಮೆ ಪ್ರಮಾಣದ ಲಂಬ ವೇಗ ಬದಲಾವಣೆ ಇದ್ದಾಗ ಚಂಡಮಾರುತ ಏಳುವ ಸಾಧ್ಯತೆ ಹೆಚ್ಚಿರುತ್ತದೆ. ಬಂಗಾಳ ಕೊಲ್ಲಿಯಲ್ಲಿ ಇಂತಹ ವಾತಾವರಣವಿದೆ.
3) ಹೆಚ್ಚಿನ ತೇವಾಂಶ:
ಚಂಡಮಾರುತದ ತೀವ್ರತೆ ಹೆಚ್ಚಾಗಲು ವಾತಾವರಣದ ತೇವಾಂಶದ ಪ್ರಮಾಣ ಮುಖ್ಯವಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಆದಾಗೆಲ್ಲಾ ಸೌಥ್ ಚೀನಾ ಸಾಗರದಲ್ಲೂ ಪ್ರಬಲ ಚಂಡಮಾರುತಗಳೆದ್ದಿರುತ್ತವೆ. ದಕ್ಷಿಣ ಚೀನಾ ಸಾಗರದಲ್ಲಿ ಏಳುವ ಚಂಡಮಾರುತದಿಂದ ಉಳಿಯುವ ತೇವಾಂಶವು ಬಂಗಾಳ ಕೊಲ್ಲಿಯನ್ನು ಸೇರಿಕೊಳ್ಳುತ್ತದೆ. ಇದು ಇಲ್ಲಿಯ ಚಂಡಮಾರುತಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.
4) ಎತ್ತರ ಪರ್ವತದ ಅನುಪಸ್ಥಿತಿ:
ಎತ್ತರದ ಪರ್ವತ ಶ್ರೇಣಿಗಳು ಗಾಳಿಯ ವೇಗವನ್ನು ತಗ್ಗಿಸುತ್ತವೆ. ಪೂರ್ವ ಕರಾವಳಿ ಭಾಗದಲ್ಲಿ ಇಂತಹ ಪರ್ವತಗಳು ತೀರಾ ಕಡಿಮೆ. ಪಶ್ವಿಮ ಕರಾವಳಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶವು ಗಾಳಿಗೆ ತಡೆಯಾಗಿ ನಿಲ್ಲುತ್ತವೆ.
ಈ ಮೇಲೆ ತಿಳಿಸಿದ ನಾಲ್ಕೂ ಅಂಶಗಳು ಪೂರ್ವಭಾಗದ ಕರಾವಳಿಯಲ್ಲಿರುವುದರಿಂದ ಅಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಿಯೇ ಇರುತ್ತದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಚಂಡಮಾರುತ ಸಂಭವಿಸುತ್ತದಾದರೂ ತೀವ್ರತೆ ಹಾಗೂ ಪ್ರಮಾಣ ತೀರಾ ಕಡಿಮೆಯೇ.

Comments are closed.