ಕರ್ನಾಟಕ

ಕನಿಷ್ಠ ತಾಪಮಾನ ದಾಖಲು: ಚಳಿಗೆ ತತ್ತರಿಸಿದ ಬೆಂಗಳೂರಿನ ಜನ

Pinterest LinkedIn Tumblr

bangalore-finalಬೆಂಗಳೂರು: ನಗರದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮೈ ಕೊರೆಯುವ ಚಳಿಯಿಂದಾಗಿ ಜನರು ಬೆಳಗಿನ ಜಾವ ಮನೆಗಳಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.

ನಗರದ ಎಲ್ಲೆಡೆ ಮಂಜು ಆವರಿಸಿದ್ದು, ಚಳಿಯಿಂದ ಜನರು ತತ್ತರಿಸಿದ್ದಾರೆ. ವಾಯುವಿಹಾರಕ್ಕೆ ಹೋಗುವವರ ಸಂಖ್ಯೆಯೂ ಕಡಿಮೆ ಆಗಿದೆ.

ಕನಿಷ್ಠ ತಾಪಮಾನ: ನಗರದಲ್ಲಿ ಶನಿವಾರ ರಾತ್ರಿ ದಾಖಲೆಯ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ‘ಕಳೆದ ಒಂಬತ್ತು ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಇದಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘ಡಿಸೆಂಬರ್‌ 10ರಂದು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 13 ಡಿಗ್ರಿ ಸೆಲ್ಸಿಯಸ್‌ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿತ್ತು’ ಎಂದರು.

‘2007ರ ಡಿಸೆಂಬರ್‌ 25ರಂದು ನಗರದಲ್ಲಿ ಕನಿಷ್ಠ ತಾಪಮಾನ 11.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2016ರ ಡಿಸೆಂಬರ್‌ 10ರಂದು ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 1883ರ ಡಿಸೆಂಬರ್‌ 29ರಂದು 8.9 ಡಿಗ್ರಿ ಸೆಲ್ಸಿಯಸ್‌ ದಾಖಲೆಯ ಕನಿಷ್ಠ ತಾಪಮಾನ ದಾಖಲಾಗಿತ್ತು’ ಎಂದು ಮಾಹಿತಿ ನೀಡಿದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್‌.ಶ್ರೀನಿವಾಸರೆಡ್ಡಿ ಮಾತನಾಡಿ, ‘ಡಿಸೆಂಬರ್‌, ಜನವರಿ ತಿಂಗಳಿನಲ್ಲಿ ಚಳಿಯ ತೀವ್ರತೆ ಹೆಚ್ಚಿರುತ್ತದೆ. ಶನಿವಾರ ನಗರದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಶುಭ್ರವಾದ ಆಕಾಶದಿಂದ ಚಳಿ ಹೆಚ್ಚಾಗಿದೆ. ಆಕಾಶದಲ್ಲಿ ಮೋಡಗಳಿದ್ದರೆ ಸೂರ್ಯನ ಕಿರಣಗಳನ್ನು ತಡೆಯುತ್ತದೆ. ಆದರೆ, ಶುಭ್ರವಾದ ಆಕಾಶ ಇದ್ದಾಗ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬೀಳುತ್ತವೆ. ಇದರಿಂದ ವಾತಾವರಣದಲ್ಲಿರುವ ಇಬ್ಬನಿ ಭೂಮಿಗೆ ಬಿದ್ದು ತಂಪಾಗುತ್ತದೆ. ಇದರಿಂದ ಚಳಿ ಹೆಚ್ಚಾಗುತ್ತದೆ’ ಎಂದರು.

**
ಇಂದು ಮಳೆ ಸಾಧ್ಯತೆ
‘ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ‘ವಾರ್ದಾ’ ಚಂಡಮಾರುತ ಚೆನ್ನೈನಿಂದ 300 ಕಿ.ಮೀ. ದೂರದಲ್ಲಿದ್ದು, ಸೋಮವಾರ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ. ಸಂಜೆ ವೇಳೆಗೆ ಗಡಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ಶ್ರೀನಿವಾಸರೆಡ್ಡಿ ಹೇಳಿದರು.

‘ಸೋಮವಾರದಿಂದ ಬುಧವಾರದವರೆಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ನಗರದಲ್ಲಿ ಚಳಿ ಇಳಿಮುಖ
ವಾಗಲಿದೆ’ ಎಂದು ಹೇಳಿದರು.

Comments are closed.