ಕರ್ನಾಟಕ

ಸಾರ್ವಜನಿಕ ಕ್ಷೇತ್ರದ ಶುದ್ಧೀಕರಣದ ಹೊಣೆ ಹೆಣ್ಣು ಹೊತ್ತರೆ ಭ್ರಷ್ಟಾಚಾರದಂತಹ ಅನಿಷ್ಟಗಳು ಕೊನೆ: ಪ್ರೊ. ಎಸ್.ಜಿ. ಸಿದ್ದರಾಮಯ್ಯ

Pinterest LinkedIn Tumblr

lekakiyaruಬೆಂಗಳೂರು, ಡಿ. ೧೨- ಸಾರ್ವಜನಿಕ ಕ್ಷೇತ್ರದ ಶುದ್ಧೀಕರಣದ ಹೊಣೆಯನ್ನು ಹೆಣ್ಣು ಹೊತ್ತರೆ ಭ್ರಷ್ಟಾಚಾರದಂತಹ ಅನಿಷ್ಟಗಳು ಕೊನೆಗೊಳ್ಳುತ್ತವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘ ನಗರದ ನಯನ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಸಂಘದ ಅಧ್ಯಕ್ಷರ ಸಾಕ್ಷ್ಯಚಿತ್ರ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾ‌ಡಿದ ಅವರು, ಹೆಣ್ತನದ ಮನಸ್ಸು ಅಥವಾ ಮಾತೃ ಹೃದಯ ಹೊಂದಿರುವವರು ಸಾರ್ವಜನಿಕ ಕ್ಷೇತ್ರದಲ್ಲಿದ್ದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ. ಕಲ್ಯಾಣ ರಾಜ್ಯ ಕಟ್ಟಬೇಕಾದರೆ ಅಹಿಂಸೆಯ ಅಸ್ತ್ರವನ್ನು ಹೆಣ್ಣು ಹಿಡಿದಿರಬೇಕು ಎಂದು ಗಾಂಧೀಜಿಯವರು ಹೇಳಿರುವುದು ಇದೇ ಉದ್ದೇಶದಿಂದ ಎಂದು ಹೇಳಿದರು.
ಸರ್ಕಾರಿ ಪ್ರಶಸ್ತಿಗಳಿಗೆ ಪುರುಷರು ಲಾಭಿ ನಡೆಸಿ ಪ್ರಶಸ್ತಿಯ ಮೌಲ್ಯವನ್ನೇ ಅಪವಿತ್ರಗೊಳಿಸಿದ್ದಾರೆ. ಆದರೆ ಯಾವ ಲೇಖಕಿಯರು ಇಂತಹ ಕೆಲಸಕ್ಕೆ ಇಳಿದಿಲ್ಲ. ಸಾಹಿತಿಕ ವಿದ್ರೋಹಿ ಕೆಲಸವನ್ನು ಯಾವ ಮಹಿಳೆಯೂ ಮಾಡಿಲ್ಲ ಎಂದು ಹೇಳಿದರು.
ಲಿಂಗ ತಾರತಮ್ಯ ಇಂದು ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲಾ ಕ‌ಡೆಗಳಲ್ಲೂ ಕಂಡುಬರುತ್ತಿದೆ. ನಾಗರಿಕತೆ ಬೆಳೆದಂತೆಲ್ಲಾ ಎಲ್ಲಾ ವ್ಯವಹಾರ ಪುರುಷಕೇಂದ್ರಿತವಾಗುತ್ತಿರುವುದರಿಂದ ಮಹಿಳೆಯನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಅದು ನಮ್ಮ ಭಾಷೆಯಲ್ಲೂ ಕಾಣುತ್ತಿದ್ದೇವೆ. ಭಾಷೆಯಲ್ಲಿ `ಅವನನ್ನು ಉದ್ದೇಶಿಸಿದಂತೆ, ಅವಳನ್ನು ಉದ್ದೇಶಿಸಿ ಹೇಳಲಾಗುತ್ತಿಲ್ಲ. ವಿದ್ಯಾರ್ಥಿ ಎಂದಾಗ ಅಲ್ಲಿ ವಿದ್ಯಾರ್ಥಿನಿ ಇಲ್ಲವಾಗಿಸುವ ಪ್ರಯೋಗ ನ‌ಡೆಸಲಾಗುತ್ತಿದೆ. ಮನುಷ್ಯ ಎಂದಾಗ ಕೇವಲ ಪುರುಷರನ್ನೇ ಪ್ರಯೋಗಿಸಲಾಗುತ್ತಿದೆ. ಭಾಷೆಯೊಳಗೆ ಇಷ್ಟು ತಾರತಮ್ಯವಿದ್ದಾಗ ಇತರ ಕ್ಷೇತ್ರಗಳಲ್ಲಿ ಅದೆಷ್ಟು ತಾರತಮ್ಯ ಇರಬಹುದು ಎಂದು ಅವರು ಪ್ರಶ್ನಿಸಿದರು.
ಸಾಹಿತ್ಯದಲ್ಲಿರುವ ತಾರತಮ್ಯವನ್ನು ಒಡೆಯುವ ಕೆಲಸ 12ನೇ ಶತಮಾನದಲ್ಲಿ ಆರಂಭಗೊಂ‌ಡಿತ್ತು. ಜಗತ್ತಿನ ಎಲ್ಲಾ ಶ್ರೇಷ್ಟ ಸಾಹಿತ್ಯಗಳು, ಮಹಾಕಾವ್ಯಗಳು ಮಾತೃಸಂವೇದನೆಯಿಂದಲೇ ಹುಟ್ಟಿದೆ. ಕುವೆಂಪು ಅವರ ಕಾನೂರು ಹೆಗ್ಗ‌ಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳಲ್ಲಿ ಮಹಿಳಾ ಸಂವೇದನೆಗಳಿವೆ. ಕುವೆಂಪು ಅವರ ಸಾಹಿತ್ಯಗಳಲ್ಲಿ ಸ್ತ್ರೀ ಮೂಲದ ಸಂವೇದನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ರಾಮಾಯಣ ಕೂಡ ಹೆಣ್ಣಿನ ಕಣ್ಣೀರ ಕಥಾನಕವಾಗಿದೆ. ಎಲ್ಲಾ ಮಹಾಕಾವ್ಯಗಳ ಶೀರ್ಷಿಕೆಯಲ್ಲಿ ಗಂಡು ಧ್ವನಿ ಅಡಗಿದ್ದರೂ ಅದರ ಆಂತರ್ಯದಲ್ಲಿ ಹೆಣ್ಣಿನ ಒಳಸಂಕಟಗಳ ನಿವೇದನೆಗಳಿವೆ ಎಂದು ಹೇಳಿದರು.
ವಿಮರ್ಶೆ ಪುರುಷ ಪ್ರಧಾನವಾಗಿ ನಡೆದಾಗ ಅಥವಾ ಅಹಂಕಾರದ ನೆಲೆಯೊಳಗೆ ನಡೆದಾಗ ಅನೇಕ ಅನಾಹುತಗಳು ಸಂಭವಿಸುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಕೆರೆಗೆ ಹಾರ ಕಾವ್ಯವಾಗಿದೆ. ಇಲ್ಲಿ ವಿಮರ್ಶಕಾರರು ಹೆಣ್ಣಿನ ದುರಂತವನ್ನು ಪ್ರಧಾನವಾಗಿ ತೆಗೆದುಕೊಳ್ಳದೆ ಬಲಿ ಪ್ರಸಂಗಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ನಿಜವಾಗಿಯೂ ಕೆರೆಗೆ ಹಾರ ಎಂಬುದು ಹೆಣ್ಣಿನ ಸಂಕಟ ಹೇಳುವ ಕಥಾನಕವಾಗಿದೆ ಎಂದು ವಿಮರ್ಶಕಾರರನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ಲೇಖಕಿಯರ ಸಂಘದ 8 ಜನ ಅಧ್ಯಕ್ಷರು ಸ್ತ್ರೀಸಂವೇದನೆಯ ನೆಲೆಯೊಳಗೆ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಕಳೆದು ಹೋಗುತ್ತಿರುವ ಚರಿತ್ರೆಯನ್ನು ಸಾಕ್ಷ್ಯ ಚಿತ್ರದ ಮೂಲಕ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಸಾಕ್ಷ್ಯ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಹೇಮಲತಾ ಮಹಿಷಿ, ನಾಗಮಣಿ ಎಸ್. ರಾವ್, ಶಶಿಕಲಾ ವೀರಯ್ಯಸ್ವಾಮಿ, ಉಷಾ ಪಿ. ರೈ, ಡಾ. ಕೆ.ಆರ್. ಸಂಧ್ಯಾರೆಡ್ಡಿ , ಹಾಲಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮತ್ತಿತರರು ಭಾಗವಹಿಸಿದ್ದರು. ವಿದ್ವಾಂಸ ಪ್ರೊ. ಎಂ.ಎಚ್. ಕೃಷ್ಣಯ್ಯ ಅಭಿನಂದನಾ ನುಡಿಗಳನ್ನು ಆಡಿದರು. ಮಾಜಿ ಅಧ್ಯಕ್ಷೆ ನಾಗಮಣಿ ಎಸ್. ರಾವ್ ಅವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

Comments are closed.