ಕರ್ನಾಟಕ

ಮುಟ್ಟಾದ ಮಹಿಳೆ ಮತ್ತು ಯುವತಿಯರು ಶಾಲೆಯ ಬಾಗಿಲಲ್ಲಿ!

Pinterest LinkedIn Tumblr

godduಚಿತ್ರದುರ್ಗ(ಡಿ.08): ದಿನಗಳು ಉರುಳಿವೆ ಆದರೆ ಗೊಡ್ಡು ಸಂಪ್ರದಾಯ ಮಾತ್ರ ದೂರವಾಗಿಲ್ಲ. ಈಗಲೂ ಮಹಿಳೆ ಮತ್ತು ಯುವತಿಯರು ಮುಟ್ಟಾದರೆ ಮನೆಯಿಂದ ಹೊರಗಿರುವ ಪದ್ಧತಿ ಜಾರಿಯಲ್ಲಿದೆ. ಚಿತ್ರದುರ್ಗ ಜಿಲ್ಲೆಯ ಹಲವು ಗೊಲ್ಲರಹಟ್ಟಿಗಳಲ್ಲಿ ಇನ್ನೂ ಜೀವಂತವಾಗಿದೆ ದುರಂತವೆಂದರೆ ಈ ಮಹಿಳೆಯರಿಗೆ ಸಮಾಜದ ಓರೆ-ಕೋರೆ ತಿದ್ದಿ ಅರಿವು ಮೂಡಿಸಬೇಕಾದ ಶಾಲೆಗಳೇ ಆಶ್ರಯ ಕೇಂದ್ರಗಳು.
ಶಾಲೆಯ ಅಂಗಳದಲ್ಲೇ ಮಹಿಳೆಯರಿಗೆ ಆಶ್ರಯ
ಶಾಲೆಯ ಒಳಗಡೆ ಮಕ್ಕಳಿಗೆ ಪಾಠ. ವರಾಂಡದಲ್ಲಿ ತಲೆಗೆ ಚಪ್ಪಲಿಗಳನ್ನೇ ತಲೆದಿಂಬು ಮಾಡಿಕೊಂಡು ತಟ್ಟೆಯ ಜೊತೆ ಒಬ್ಬಂಟಿಯಾಗಿ ಮಲಗಿರುವ ಹೆಣ್ಣುಮಗಳು. ಇದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗುಂಜಿನಗೂರು ಗೊಲ್ಲರಹಟ್ಟಿಯ ದೃಶ್ಯ.
ಇಷ್ಟಕ್ಕೂ ಈ ಹೆಣ್ಣುಮಗಳು ಮುಟ್ಟಾದ ಕಾರಣಕ್ಕೆ ಶಾಲೆಯ ಆವರಣದಲ್ಲಿ ಬಂದು ಮಲಗಿರುವುದು. ಒಟ್ಟು 5 ದಿನ ಇಲ್ಲೇ ಚಳಿ-ಗಾಳಿಯ ಜೊತೆ ಇರಬೇಕಿದೆ. ಇಲ್ಲದಿದ್ದರೆ ಲಕ್ಷ್ಮಿ ನರಸಿಂಹ ಸ್ವಾಮಿ ಕೆಟ್ಟದ್ದು ಮಾಡುತ್ತಾನೆ ಅಂತ ಇಲ್ಲಿನ ಜನ ನಂಬಿ ಗೊಡ್ಡು ಸಂಪ್ರದಾಯಕ್ಕೆ ಜೋತು ಬಿದ್ದಿದ್ದಾರೆ.
ಶಾಲೆಯ ಬಾಗಿಲಲ್ಲೇ ಅನಿಷ್ಠ ಪದ್ಧತಿ
ಮುಟ್ಟಾದ ಯುವತಿ-ಮಹಿಳೆಯರನ್ನು ಮನೆಯಿಂದ ಹೊರಗಡೆ ಒಂಟಿಯಾಗಿ ಮಲಗಿಸುವ ಪದ್ಧತಿ ವಿರುದ್ಧ ಭಾರೀ ಹೋರಾಟ ನಡೆದಿದೆ. ಸರ್ಕಾರ ಕೂಡ ಕೃಷ್ಣ ಕುಟೀರವನ್ನು ಕಟ್ಟಿಸಿಕೊಡುವ ಭರವಸೆ ನೀಡಿದೆ. ಆದರೆ ಸ್ಥಳದ ಸಮಸ್ಯೆಯಿಂದಾಗಿ ಭರವಸೆ ಇನ್ನೂ ಈಡೇರಿಲ್ಲವಂತೆ. ಹೀಗಾಗಿ ಶಾಲೆಯ ಬಾಗಿಲೇ ಸೂಕ್ತ ಅಂತಾರೆ ಗ್ರಾಮದ ಮಹಿಳೆಯರು.
ಸಚಿವೆ ಉಮಾಶ್ರೀ ಭೇಟಿ ಬಳಿಕವೂ ಬದಲಾಗಿಲ್ಲ ಪರಿಸ್ಥಿತಿ
ಈ ಹಿಂದೆಯೂ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂಥದ್ದೇ ಆಚರಣೆ ವಿರುದ್ಧ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. 6 ತಿಂಗಳ ಹಿಂದೆ ಸಚಿವೆ ಉಮಾಶ್ರೀ ಕೆಲ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸೋ ಪ್ರಯತ್ನ ಮಾಡಿದ್ದರು. ಆದ್ರೂ ಪರಿಸ್ಥಿತಿ ಬದಲಾಗಿಲ್ಲ. ಒಟ್ನಲ್ಲಿ ಈಗಲೂ ಇಂತಹ ಅನಿಷ್ಠ ಆಚರಣೆಗಳು ಜಾರಿಯಲ್ಲಿರೋ ಕಾರಣ ಇಡೀ ಸಮಾಜವೇ ತಲೆ ತಗ್ಗಿಸಬೇಕಾಗಿದೆ.

Comments are closed.