ಕರ್ನಾಟಕ

ಒಂದು ಮಗು ಸಾಕಲು ಒಂದು ಮಗುವಿನ ಮಾರಾಟ

Pinterest LinkedIn Tumblr

childಶಿವಮೊಗ್ಗ: ಮೊದಲ ಮಗುವಿನ ಪಾಲನೆ, ಶಿಕ್ಷಣಕ್ಕಾಗಿ ಹಣವಿಲ್ಲದ ಕಾರಣ ಕೇವಲ ₹ 20 ಸಾವಿರಕ್ಕೆ ತಾಯಿಯೇ ಎರಡನೇ ಮಗು ಮಾರಾಟ ಮಾಡಿದ ಮನಕಲಕುವ ಘಟನೆ ಸಾಗರ ತಾಲ್ಲೂಕು ಕಾರೆಹೊಂಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕಾರೆಹೊಂಡದ ನಾಗರತ್ನಾ ತನ್ನ ಒಂದು ತಿಂಗಳ ಹೆಣ್ಣು ಶಿಶು ಮಾರಾಟ ಮಾಡಿದ ಮಹಿಳೆ. ಭಟ್ಕಳದ ಜಾವೀದ್‌ ಹಾಗೂ ಸಲೀಮಾ ಮಗು ಖರೀದಿಸಿದ ದಂಪತಿ.

ನಾಗರತ್ನಾ ಅವರ ಮೊದಲ ಮಗಳು ಒಂದನೇ ತರಗತಿ ಓದುತ್ತಿದ್ದಾಳೆ. ಇದೇ ವರ್ಷದ ಅ.20ರಂದು ಎರಡನೇ ಮಗುವಿಗೆ ತ್ಯಾಗರ್ತಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನ್ಮ ನೀಡಿದ್ದಾರೆ.

ಕೂಲಿ ಕೆಲಸ ಮಾಡಿ ಬರುವ ಆದಾಯದಲ್ಲಿ ಮೊದಲ ಮಗಳನ್ನು ಸಲಹಲು ಕಷ್ಟಪಡುತ್ತಿದ್ದ ಅವರು ಪರಿಚಯದವರ ಮೂಲಕ ಭಟ್ಕಳದ ಮುಸ್ಲಿಂ ದಂಪತಿಗೆ ಮಗು ಮಾರಾಟ ಮಾಡಿದ್ದಾರೆ. ಮಗು ಮಾರಾಟ ಮಾಡಿದ ವಾರದ ಬಳಿಕ ವಿಷಯ ಮಕ್ಕಳ ಸಹಾಯವಾಣಿ ಮೂಲಕ ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಸಹಾಯವಾಣಿ ಸಿಬ್ಬಂದಿ ಭಟ್ಕಳಕ್ಕೆ ತೆರಳಿ ಮಗುವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ತಾಯಿ ಮತ್ತು ಮೊದಲ ಮಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಇದ್ದಾರೆ. ನವಜಾತ ಶಿಶುವನ್ನು ಉಡುಪಿಯ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ.

ಪುರುಷರ ಆಸರೆ ಇಲ್ಲದ ಬದುಕು: ಗ್ರಾಮದ ಪಾರ್ವತಮ್ಮ–ಜಗನ್ನಾಥ ದಂಪ ತಿಯ ಮೂವರು ಮಕ್ಕಳಲ್ಲಿ ನಾಗರತ್ನಾ. ಕೊನೆಯವರು. ಉಳಿದ ಇಬ್ಬರು ಅಣ್ಣಂದಿರೂ ಸೇರಿ ಇಡೀ ಕುಟುಂಬ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಾ ಬಂದಿತ್ತು. ಆದರೆ, ಕಳೆದ 10 ವರ್ಷಗಳ ಅವಧಿಯಲ್ಲಿ ಪತಿ ಜಗನ್ನಾಥ ಹಾಗೂ ಇಬ್ಬರು ಪುತ್ರರನ್ನೂ ಪಾರ್ವ ತಮ್ಮ ಕಳೆದುಕೊಂಡಿದ್ದಾರೆ. ಬದುಕಿಗೆ ಆಸರೆಯಾಗಿದ್ದ ಮೂವರೂ ಕಾಯಿಲೆ ಯಿಂದ ಮೃತಪಟ್ಟ ನಂತರ ತಾಯಿ–ಮಗಳು ಬದುಕು ನಡೆಸಲು ಹೆಣಗಾಡುತ್ತಿದ್ದಾರೆ.

ಬಾಲ್ಯದಲ್ಲೇ ಮೋಸಹೋದ ನತದೃಷ್ಟೆ: ತಾಯಿಯ ಜತೆ ಕೂಲಿ ಕೆಲಸಕ್ಕೆ ಹೊಗುತ್ತಾ ನಾಗರತ್ನಾ ಜೀವನ ನಿರ್ವ ಹಣೆ ಮಾಡುತ್ತಿದ್ದರು. ಗ್ರಾಮದ ಯುವಕನೊಬ್ಬ ಮದುವೆಯಾಗುವು ದಾಗಿ ನಂಬಿಸಿ ಮೋಸ ಮಾಡಿದ್ದ. ಅದರ ಫಲವಾಗಿ 18 ವರ್ಷ ತುಂಬುವ ಮೊದಲೇ ಅವರು ತಾಯಿಯಾದರು. ಈ ಸಂಬಂಧ 6 ವರ್ಷಗಳ ಹಿಂದೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ, ವಂಚಿಸಿದವ ಊರನ್ನೇ ಬಿಟ್ಟುಹೋದ. ಹಾಗಾಗಿ, ಮಗುವನ್ನು ಪೋಷಿಸುತ್ತಾ ತಾಯಿ ಮನೆಯಲ್ಲೇ ನೆಲೆಸಿದ್ದರು.

‘ಸಹಾಯ ಮಾಡುವ ನೆಪದಲ್ಲಿ ಬಂದ ಕೆಲವರ ಬಳಿ ಸಲುಗೆ ಬೆಳೆಸಿಕೊಂಡಿದ್ದ ಪರಿಣಾಮ ಎರಡನೆ ಮಗು ಜನಿಸಿದೆ. ಆದರೆ, ಅವಳು ಸಮಾಜಕ್ಕೆ ಎಂದೂ ಹೆದರಿಲ್ಲ. ಗಂಡ ಇಲ್ಲದಿದ್ದರೂ ಮೊದಲ ಮಗುವನ್ನು ಕೂಲಿ ಮಾಡಿ ಸಾಕಿದ್ದರು. ಎರಡನೆ ಹೆರಿಗೆಯ ನಂತರ ಹಸುಗೂಸಿನ ಜತೆ ಮನೆಗೆ ಬಂದಿದ್ದರು. ವಾರದ ಹಿಂದೆ ಆಸ್ಪತ್ರೆಗೆ ಹೋದವರು ಮರಳಿ ಬಂದಿಲ್ಲ. ಎರಡು ದಿನದ ಹಿಂದೆ ಅಧಿಕಾರಿಗಳು, ಪೊಲೀಸರು ಗ್ರಾಮಕ್ಕೆ ಬಂದಾಗಲೇ ಮಗು ಮಾರಾಟ ಮಾಡಿದ ವಿಷಯ ಗಮನಕ್ಕೆ ಬಂತು’ ಎನ್ನುತ್ತಾರೆ ಕಾರೆಹೊಂಡ ಗ್ರಾಮಸ್ಥರು.

* ಪ್ರಕರಣವು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದಿದೆ. ತಾಯಿ, ಎರಡು ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಮಗು ಖರೀದಿಸಿದವರು ಹಾಗೂ ಮಾರಾಟಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.
-ವಾಣಿಶ್ರೀ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

Comments are closed.