ಕರ್ನಾಟಕ

ನೌಕರರಿಗೆ ವೇತನ ನೀಡುವುದು ಕಷ್ಟ: ಹುಂಡಿ,ಮದ್ಯದ ಹಣಕ್ಕೆ ಕೈ ಹಾಕಿದ ಬ್ಯಾಂಕ್

Pinterest LinkedIn Tumblr
People queue up outside an ATM to withdraw money at State Bank of Mysore Dr Ambedkar Veedi Branch, in Bengaluru on Saturday. -Photo/ Ranju P
People

ಬೆಂಗಳೂರು: ನಗದು ಕೊರತೆ ಎದುರಿಸುತ್ತಿರುವ ಬ್ಯಾಂಕ್‌ಗಳು, ಗ್ರಾಹಕರ ಹಣದ ಅಗತ್ಯ ಪೂರೈಸಲು ದೇವಸ್ಥಾನಗಳ ಹುಂಡಿ ಮತ್ತು ಮದ್ಯದಂಗಡಿಗಳ ಹಣವನ್ನೇ ಬಹುವಾಗಿ ನೆಚ್ಚಿಕೊಂಡಿವೆ.

ದೇವಸ್ಥಾನಗಳ ಟ್ರಸ್ಟ್‌ಗಳ ಖಾತೆ ಮತ್ತು ಬಾರ್‌ ಮಾಲೀಕರಿಂದ ಎಂಎಸ್‌ಐಎಲ್‌ (ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ ) ಖಾತೆಗೆ ಬರುವ ಹಣವನ್ನೇ ಗ್ರಾಹಕರಿಗೆ ನೀಡಿ, ನಗದು ಅಭಾವ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ಸರಿದೂಗಿಸುತ್ತಿವೆ.

ಪ್ರತಿ ದೇವಸ್ಥಾನವೂ ಬ್ಯಾಂಕ್‌ನಲ್ಲಿ ಒಂದು ಖಾತೆ ಹೊಂದಿರುತ್ತದೆ. ಹುಂಡಿಯಲ್ಲಿ ತುಂಬುವ ದುಡ್ಡನ್ನು ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ಜಾತ್ರೆ ಅಥವಾ ವಿಶೇಷ ಉದ್ದೇಶಕ್ಕೆ ಬಳಸಿಕೊಳ್ಳುವುದು ಪರಂಪರಾಗತವಾಗಿ ನಡೆದುಕೊಂಡು ಬಂದಿದೆ.

‘ಸದ್ಯಕ್ಕೆ ಬ್ಯಾಂಕ್‌ಗಳು ನಗದು ಬರ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಬ್ಯಾಂಕ್‌ನ ಮ್ಯಾನೇಜರ್‌ಗಳು ದೇವಸ್ಥಾನಗಳ ಹುಂಡಿಯನ್ನು ಒತ್ತಾಯವಾಗಿ ಒಡೆಸಿ ಆ ಮೊತ್ತವನ್ನು ಖಾತೆಗೆ ಭರ್ತಿ ಮಾಡಲು ಮನವೊಲಿಸುತ್ತಿದ್ದಾರೆ. ಈ ಹಣವನ್ನೇ ಗ್ರಾಹಕರಿಗೆ ವಿತರಿಸಲಾಗುತ್ತಿದೆ’ ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆ (ಐಎನ್‌ಬಿಇಎಫ್‌) ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೆ.ನರಸಿಂಹ ಮೂರ್ತಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಸದ್ಯ, ಹೊಸ ನೋಟುಗಳು ಹೆಚ್ಚು ಚಲಾವಣೆಯಲ್ಲಿ ಇರುವುದು ಮದ್ಯದಂಗಡಿಗಳಲ್ಲಿ ಮಾತ್ರ. ಪ್ರತಿಯೊಂದು ಮದ್ಯದಂಗಡಿಯಿಂದ ಕನಿಷ್ಠ ₹2 ಲಕ್ಷ ಲಕ್ಷದವರೆಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ (ಎಂಎಸ್‌ಐಎಲ್‌) ಖಾತೆಗೆ ಜಮಾ ಆಗುತ್ತದೆ. ಈ ಹಣವೂ ನಗದು ಕೊರತೆಯನ್ನು ತುಸು ತಗ್ಗಿಸಲು ನೆರವಾಗಿದೆ’ ಎಂದು ಅವರು ಹೇಳುತ್ತಾರೆ.

ವೇತನ ಕೊಡುವುದು ಕಷ್ಟ: ನಗದು ಕೊರತೆ ಇರುವುದರಿಂದ ಗುರುವಾರ ವೇತನ ವರ್ಗದವರಿಗೆ ಬ್ಯಾಂಕ್‌ ಮೂಲಕ ಹಣ ಬಟವಾಡೆ ಮಾಡುವುದು ಕಷ್ಟವಾಗಲಿದೆ. ಎಟಿಎಂ ಗಳಿಗೆ ಭರ್ತಿ ಮಾಡಲು ಹಣ ಇಲ್ಲದೇ ಇರುವುದ ರಿಂದ ಗ್ರಾಹಕರು ಹಣ ಪಡೆಯಲು ಶಾಖೆಗಳಿಗೇ ಬರಬೇಕು. ಇದರಿಂದ ಶಾಖೆಗಳಲ್ಲಿ ಜನದಟ್ಟಣೆ ನಿರ್ವಹಣೆ ಕಷ್ಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

‘ವ್ಯಕ್ತಿಯೊಬ್ಬ ಒಂದು ವಾರಕ್ಕೆ ₹24 ಸಾವಿರ ಹಣ ಪಡೆಯುವ ಮಿತಿ ವಿಧಿಸಲಾಗಿದೆ. ಹೀಗಿದ್ದರೂ ಆ ಪ್ರಮಾಣದ ಹಣವೂ ಜನರಿಗೆ ಸಿಗುತ್ತಿಲ್ಲ. ₹20 ಸಾವಿ ರಕ್ಕೆ ಚೆಕ್‌ ನೀಡಿದರೆ ಸಿಗುವುದು ₹5 ಸಾವಿರ ಮಾತ್ರ. ಒಂದೊಮ್ಮೆ ಸ್ವಲ್ಪ ಹೆಚ್ಚು ಕೊಡಿ ಎಂದು ಕೇಳಿದರೆ ಹೆಚ್ಚೆಂದರೆ ₹8 ಸಾವಿರ ಸಿಗಬಹುದಷ್ಟೆ’ ಎಂದು ವಾಸ್ತವ ಚಿತ್ರಣ ನೀಡಿದರು.

ಇಲ್ಲದ ಭದ್ರತೆ, ಆತಂಕದಲ್ಲಿ ಸಿಬ್ಬಂದಿ: ನೋಟುಗಳ ರದ್ದು ಮತ್ತು ತೀವ್ರ ಸ್ವರೂಪದ ನಗದು ಕೊರತೆಯಿಂದ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಗ್ರಾಹಕರ ಕೋಪ, ಅಸಮಾಧಾನವನ್ನು ಎದುರಿಸುವುದು ಕಷ್ಟವಾಗಿದೆ. ಗುರುವಾರದಿಂದ ಪರಿಸ್ಥಿತಿ ಎದುರಿಸುವುದು ಹೇಗೆ ಎಂಬ ಆತಂಕ ಎದುರಾಗಿದೆ ಎಂದು ಬ್ಯಾಂಕ್‌ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಮುಂದಿನ 10 ದಿನಗಳವರೆಗೆ ವೇತನ ಮತ್ತು ಪಿಂಚಣಿ ಹಣ ನೀಡಬೇಕಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿಲೇ ಬಂದಿದೆ!: ‘ಆರ್‌ಬಿಐ ದಿನಕ್ಕೊಂದು ಹೊಸ ನಿಯಮ ರೂಪಿಸುತ್ತಿದೆ. ಈ ನಿಯಮ ಬ್ಯಾಂಕ್‌ನ ಕೇಂದ್ರ ಕಚೇರಿಯಿಂದ ಶಾಖೆಗಳಿಗೆ ಬರುವುದು ತಡವಾಗುತ್ತಿದೆ. ಆದರೆ ಗ್ರಾಹಕರು ಇದನ್ನು ಕೇಳಲು ಸಿದ್ಧರಿಲ್ಲ. ಆರ್‌ಬಿಐನ ಇಂತಹ ನಿಯಮಗಳು ಸಮಸ್ಯೆ ಬಗೆಹರಿಸುವುದಕ್ಕಿಂತಲೂ ಮತ್ತಷ್ಟು ಸಮಸ್ಯೆ ಸೃಷ್ಟಿಸುವಂತಾಗುತ್ತಿದೆ. ‘ಪ್ರಜಾವಾಣಿ’ಲೇ ಬಂದಿದೆ ಸಾರ್‌. ನೀವು ಗೊತ್ತಿಲ್ಲ ಎಂದ್ರೆ ಹೇಗೆ’ ಎಂದು ಗ್ರಾಹಕರು ಬ್ಯಾಂಕ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಪರಿಸ್ಥಿತಿಯ ಅರಿವಿದ್ದರೂ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಶಾಖೆಗಳಿಗೆ ಅಗತ್ಯ ಪೊಲೀಸ್‌ ಭದ್ರತೆ ಒದಗಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಶಾಖೆಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನೂ ಅವಲೋಕಿಸಿಲ್ಲ. ‘ಎ.ಸಿ. ಕೊಠಡಿಯಲ್ಲಿ ಕುಳಿತುಕೊಂಡೇ ಫೋನ್‌ ಮೂಲಕ ಸಂಪರ್ಕಿಸಿ ಮಾತನಾಡುತ್ತಿದ್ದಾರಷ್ಟೆ’ ಎಂದು ಬ್ಯಾಂಕ್‌ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಖೆಗಳಿಗೆ ಸೂಕ್ತ ಭದ್ರತಾ ಸಿಬ್ಬಂದಿ ಒದಗಿಸುವ ಬಗ್ಗೆ ಮಧ್ಯಪ್ರವೇಶ ಮಾಡುವಂತೆ ಭಾರತೀಯ ಬ್ಯಾಂಕ್‌ಗಳ ಒಕ್ಕೂಟಕ್ಕೆ (ಐಬಿಎ) ಮನವಿ ಮಾಡಲಾಗಿದೆ ಎಂದೂ ಬ್ಯಾಂಕ್‌ ಸಿಬ್ಬಂದಿ ತಿಳಿಸಿದ್ದಾರೆ.

‘ಜನಧನ’ದಿಂದ ₹10 ಸಾವಿರ ಮಾತ್ರ

ಮುಂಬೈ: ಜನಧನ ಖಾತೆ ಯಿಂದ ತೆಗೆಯಬಹುದಾದ ಮೊತ್ತ ವನ್ನು ತಿಂಗಳಿಗೆ ₹10 ಸಾವಿರಕ್ಕೆ ಮಿತಿಗೊಳಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಆದೇಶ ಹೊರಡಿಸಿದೆ. ಜನಧನ ಖಾತೆಗಳ ದುರ್ಬಳಕೆ ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ.

‘ಅಕ್ರಮ ವಹಿವಾಟು ನಡೆಸುವವರು ಜನಧನ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪ್ರಾಮಾಣಿಕ ರೈತರು ಮತ್ತು ಗ್ರಾಮೀಣ ಪ್ರದೇಶದ ಜನರು ಬೇನಾಮಿ ಸೊತ್ತು ವಹಿವಾಟು ಮತ್ತು ಹಣ ಅಕ್ರಮ ವರ್ಗಾವಣೆ ಕಾನೂನು ಗಳ ಅಡಿ ಶಿಕ್ಷೆಗೆ ಒಳಗಾಗಬಹುದು. ಇದನ್ನು ತಪ್ಪಿಸಲು ಕೆಲವು ಮಿತಿ ಹೇರಲಾಗಿದೆ’ ಎಂದು ಆರ್‌ಬಿಐ ತಿಳಿಸಿದೆ.

ಖಾತೆಗೆ ಖಾತೆದಾರರು ಗುರುತು ಪತ್ರ ನೀಡಿದ್ದರೆ ಅಂಥವರು ತಿಂಗಳಿಗೆ ₹10 ಸಾವಿರ ಪಡೆದುಕೊಳ್ಳುವುದಕ್ಕೆ ಅವಕಾಶ ಇದೆ.

ಕೇಂದ್ರದ ಸಮಿತಿಯಲ್ಲಿ ನಿಲೇಕಣಿ

ದೇಶದಲ್ಲಿ ನಗದುರಹಿತ ಆರ್ಥಿಕ ವ್ಯವಸ್ಥೆ ಜಾರಿಗೆ ತರಲು ನೀಲ ನಕ್ಷೆ ರೂಪಿಸುವುದಕ್ಕಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಸಮಿತಿಯಲ್ಲಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಸ್ಥಾನ ಪಡೆದಿದ್ದಾರೆ.

ನಾಳೆಯಿಂದ ಟೋಲ್‌ ಸಂಗ್ರಹ ಪುನರಾರಂಭ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ (ಡಿ. 2) ಟೋಲ್‌ ಸಂಗ್ರಹ ಆರಂಭವಾಗಲಿದೆ. ನೋಟು ರದ್ದತಿಯ ನಂತರ ಜನರಿಗೆ ಆಗುವ ತೊಂದರೆ ತಪ್ಪಿಸಲು ಡಿ.2ರವರೆಗೆ ಟೋಲ್‌ ಸಂಗ್ರಹವನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು.

ರದ್ದಾದ ₹500 ಮುಖಬೆಲೆಯ ನೋಟುಗಳನ್ನು ಡಿ. 2ರಿಂದ 15ರವ ರೆಗೆ ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತದೆ. ಜತೆಗೆ ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

Comments are closed.