ತುಮಕೂರು(ನ.30): ಫೈನಾನ್ಸ್ ಕಂಪನಿಯೊಂದು ಸಾಲ ಮರುಪಾವತಿ ಮಾಡಿಕೊಳ್ಳುವಾಗ ಹಳೆಯ 500 ರೂ ನೋಟನ್ನು ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ಮನನೊಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.
ಶಾಹಿನಾ ಭಾನು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಲ್ಲಿನ ಮಾವಿನ ತೋಪಿನಲ್ಲಿರುವ ಗ್ರಾಮೀಣ ಕೂಟ ಫೈನಾನ್ಸ್ ಸರ್ವಿಸ್ ನಲ್ಲಿ ಒಟ್ಟು 45 ಸಾವಿರ ರೂ ಸಾಲ ಮಾಡಿದ್ದರು. ಪ್ರತಿ ವಾರ 800 ರೂ ಸಾಲದ ಕಂತು ಕಟ್ಟಬೇಕಿತ್ತು. 500 ರೂ ನೋಟು ಚಲಾವಣೆ ಆಗದ ಕಾರಣ ಕಳೆದ ಎರಡು ವಾರದಿಂದ ಕಂತು ತುಂಬಲು ಸಾಧ್ಯವಾಗಿರಲಿಲ್ಲ. ನಿನ್ನೆ ಕಂತು ಕಟ್ಟಲು 500 ರೂ ನೋಟು ಹಾಗೂ 100 ರು ಮಖಬೆಲೆಯ 2 ನೋಟನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಫೈನಾನ್ಸ್`ನವರು 500 ರೂಪಾಯಿ ನೋಟನ್ನು ತಿರಸ್ಕರಿಸಿದ್ದಾರೆ. ಶಾಹಿನಾ ಪರಿಚಯಸ್ಥರಲ್ಲಿ ಹಾಗೂ ಅಂಗಡಿಗಳಲ್ಲಿ ಚೆಂಜ್ ಕೇಳಿದ್ದಾರೆ. ಎಲ್ಲೂ ಸಿಗದೇ ಇದ್ದಾಗ ಮನೆಗೆ ವಾಪಸ್ ಆಗಿದ್ದಾರೆ. ಆದರೆ, ಫೈನಾನ್ಸ್`ನವರು ಶಾಹಿನಾ ಭಾನು ಮನೆ ತನಕ ಬಂದು ಪುನಃ ಸಾಲದ ಕಂತು ಕೇಳಿದ್ದಾರೆ. ಇದರಿಂದ ಮನನೊಂದ ಶಾಹಿನಾ ನೇಣಿಗೆ ಶರಣಾಗಿದ್ದಾಳೆ.