ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ 82 ಜನರು ಏಕಕಂಠದಿಂದ ನಾಡಗೀತೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಇದಕ್ಕಾಗಿ ಸುಮಾರು ಒಂದು ತಿಂಗಳಿಂದ ತಾಲೀಮು ಕೂಡ ನಡೆಯುತ್ತಿದೆ.
82 ಜನರಲ್ಲಿ 58 ಮಹಿಳೆಯರಿದ್ದು ಅವರಲ್ಲಿ ಶಿಕ್ಷಕಿಯರು, ಗೃಹಿಣಿಯರು, ವಿದ್ಯಾರ್ಥಿಗಳು ಇದ್ದಾರೆ. 24 ಪುರುಷರು ಇದ್ದು, ವೈದ್ಯರು, ವಕೀಲರು ಇದ್ದಾರೆ. ಈ ಹಾಡುಗಾರರಿಗೆ ಹಿಮ್ಮೇಳದಲ್ಲಿ ಇಬ್ಬರು ತಬಲ ವಾದಕರು, ಹಾರ್ಮೋನಿಯಂ, ರಿದಂಪ್ಯಾಡ್, ಇನ್ನಿತರ ಪರಿಕರಗಳಲ್ಲಿ ಸಾಥ್ ನೀಡಲಿದ್ದಾರೆ.
ಸಂಗೀತಗಾರರಾದ ಕೊಪ್ರೇಶ ದೇಸಾಯಿ ಮತ್ತು ಲಕ್ಷ್ಮೀ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಗಾಯನ ಪ್ರಸ್ತುತವಾಗಲಿದೆ. ಮಹಿಳೆಯರಿಗೆ ಕಿತ್ತಲೆ ಮತ್ತು ಹಳದಿ ಬಣ್ಣದ ಸೀರೆ ಮತ್ತು ಪುರುಷರು ಬಿಳಿ ಜುಬ್ಬಾ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯನಿರ್ವಹಿಸುತ್ತಿರುವ ಕನ್ನಡ ಭವನ, ಟಾಗೋರ್ ಪ್ರಾಥಮಿಕ ಶಾಲೆ, ರಂಗಮಂದಿರದಲ್ಲಿ ಒಂದೂವರೆ ತಿಂಗಳಿಂದ ದಿನಾ ಒಂದರಿಂದ ಒಂದೂವರೆ ತಾಸು ವಾದ್ಯಗಳ ಸಂಗಡ ತಾಲೀಮು ಮಾಡಲಾಗಿದೆ.
‘ನಾಡಗೀತೆ ಹಾಡಲು ನೂರಾರು ಜನರು ಆಸಕ್ತಿ ತೋರಿದರು. ನಾವು ತಾಲೀಮು ಆರಂಭ ಮಾಡಿದ ಮೇಲೂ ಹಲವರು ಬಂದು ಕೇಳಿಕೊಂಡರು. ಆದರೆ, 82ನೇ ಸಮ್ಮೇಳನವಾದ ಕಾರಣ 82 ಜನರನ್ನು ಮಾತ್ರ ಆಯ್ಕೆ ಮಾಡಿಕೊಂಡುವು. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದೆವು’ ಎಂದು ಕೊಪ್ರೇಶ್ ದೇಸಾಯಿ ಹೇಳಿದರು.
**
‘ಮಂತ್ರಾಲಯ: ವಸತಿಗೆ ಯಾರೂ ಸಂಪರ್ಕಿಸಿಲ್ಲ’
ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಮಂತ್ರಾಲಯದಲ್ಲಿ ವಸತಿ ವ್ಯವಸ್ಥೆಗೆ ಭರವಸೆ ದೊರೆತಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಹೇಳಿದೆ. ಆದರೆ, ಇಂತಹ ಯಾವುದೇ ಕೋರಿಕೆ ಬಂದಿಲ್ಲ ಸಮ್ಮೇಳನಕ್ಕೆ ಆಹ್ವಾನವನ್ನೂ ನೀಡಿಲ್ಲ ಎಂದು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠ ಖಚಿತ ಪಡಿಸಿದೆ.
‘ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಶ್ರೀಗಳಿಗೆ ತೋರಿಸಿದ್ದಾರೆ. ಶ್ರೀಗಳು ಒಳ್ಳೆಯದಾಗಲಿ ಆಶೀರ್ವದಿಸಿದ್ದಾರೆ. ಇದನ್ನು ಬಿಟ್ಟರೆ ಸ್ವಾಮೀಜಿ ಅವರಿಗೆ ಅಥವಾ ಶ್ರೀಮಠಕ್ಕೆ ಅಧಿಕೃತವಾಗಿ ಆಹ್ವಾನ ಪತ್ರಿಕೆ ಬಂದಿಲ್ಲ. ವಸತಿಗೆ ಅವಕಾಶ ಕಲ್ಪಿಸುವಂತೆ ಶ್ರೀಮಠವನ್ನು ಯಾರೂ ಸಂಪರ್ಕಿಸಿಲ್ಲ’ ಎಂದು ಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ ರಾವ್ ತಿಳಿಸಿದರು.
ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳು ಮತ್ತು ಅತಿಥಿಗಳಿಗೆ (ಸುಮಾರು 8 ಸಾವಿರ) ರಾಯಚೂರು ನಗರದಲ್ಲೇ ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೂ ವಸತಿ ಕೊರತೆ ಆಗಬಾರದೆಂಬ ದೃಷ್ಟಿಯಿಂದ ಮಂತ್ರಾಲಯದ ಶ್ರೀಮಠದ ವಸತಿಗೃಹಗಳಲ್ಲಿ ಅವಕಾಶ ನೀಡುವಂತೆ ಕೋರಲಾಗಿದೆ ಎಂದು ಸ್ವಾಗತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದರು.
**
ಅಂಕಿಅಂಶ
* 58: ಮಹಿಳೆಯರು
* 24: ಪುರುಷರು
* 82: ಒಟ್ಟು ಗಾಯಕರು
* 05: ಪಕ್ಕವಾದ್ಯದ ಸಾಥಿಗಳು
**
‘ನಾಡಗೀತೆ ಹಾಡುವ ತಂಡದಲ್ಲಿ ಸಂಗೀತ ಬಲ್ಲವರು 15 ಜನರಿದ್ದು, ಉಳಿದವರಿಗೆ ಅಭ್ಯಾಸ ಮಾಡಿಸಲಾಗಿದೆ’
– ಕೊಪ್ರೇಶ ದೇಸಾಯಿ, ತಂಡದ ಸಂಗೀತ ಮಾರ್ಗದರ್ಶಕ