ಕರ್ನಾಟಕ

ನೋಟು ನಿಷೇಧ ವಿರೋಧಿಸಿ ಕರೆ ನೀಡಲಾಗಿದ್ದ ‘ಆಕ್ರೋಶ್ ದಿವಸ್’ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

Pinterest LinkedIn Tumblr

3232

ಬೆಂಗಳೂರು: ಕೇಂದ್ರ ಸರ್ಕಾರ ಘೋಷಿಸಿರುವ ನೋಟು ನಿಷೇಧ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಹಾಗೂ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತ್ ಬಂದ್ ಜನಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ.

ಕರ್ನಾಟಕದ ರಾಮನಗರ ಜಿಲ್ಲೆಯನ್ನು ಹೊರತು ಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಸಾರಿಗೆ ಸಂಚಾರ ಸಾಮಾನ್ಯದಂತಿದೆ. ಬೆಳಗಾವಿ, ಕೋಲಾರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಎಪಿಎಂಸಿ ಯಾರ್ಡ್ ಗಳಲ್ಲಿ ವಹಿವಾಟು ಎಂದಿನಂತೆ ನಡೆದಿದೆ. ಬೆಳಗಾವಿಯಲ್ಲೂ ಭಾರತ್ ಬಂದ್ ಯಾವುದೇ ಪರಿಣಾಮ ಬೀರದೇ ಅಂಗಡಿ ಮುಂಗಟ್ಟುಗಳು ಎಂದಿನಿಂತೆ ಇಂದೂ ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿವೆ.

ಬೆಳಗಾವಿಯಲ್ಲಿ ಕೆಲ ವರ್ತಕರು ಭಾರತ್ ಬಂದ್ ಅನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಬೆಂಬಲಿಸಿ ಅಂಗಡಿಗಳನ್ನು ತೆರೆದಿದ್ದಾರೆ. ಅಲ್ಲದೆ ಇಂದು ತಮ್ಮ ಮಳಿಗೆಗೆ ಭೇಟಿ ನೀಡುವ ಗ್ರಾಹಕರಿಗೆ ಶೇ.25ರಷ್ಟು ರಿಯಾಯಿತಿ ನೀಡುವ ಮೂಲಕ ಆಕ್ರೋಶ್ ದಿವಸ್ ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ಸಿಲಿಕಾನ್ ಸಿಟಿಗಿಲ್ಲ ಆಕ್ರೋಶ್ ದಿವಸ್ ಎಫೆಕ್ಟ್
ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲೂ ಭಾರತ್ ಬಂದ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೋಟು ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಆಡಳಿತಾರೂಢ ಕಾಂಗ್ರೆಸ್ ಶಾಸಕರು ವಿರೋಧಿಸಿದ್ದಾರೆಯಾದರೂ ಬಂದ್ ಗೆ ತಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಸಹಜ ಸ್ಥಿತಿ ಇದ್ದು, ಆಟೋ, ಟ್ಯಾಕ್ಸಿ, ಬಸ್, ಮೆಟ್ರೋ ಎಂದಿನಂತೆ ಓಡಾಡುತ್ತಿವೆ. ಮಾರುಕಟ್ಟೆಯೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.

ಬೆಂಗಳೂರಿನ ಕೆ ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದ್ದು, ಸಾಮಾನ್ಯ ದಿನದಂತೆ ಇಂದೂ ಸಹ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇನ್ನು ನಮ್ಮ ಮೆಟ್ರೋ ಯಥಾಸ್ಥಿತಿಯಲ್ಲಿ ಸಂಚಾರ ನಡೆಸುತ್ತಿದ್ದು, ಜನರು ಸಹ ಮೆಟ್ರೋದಲ್ಲಿ ಎಂದಿನಂತೆ ಸಂಚರಿಸುತ್ತಿದ್ದಾರೆ. ಇನ್ನು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಇಂದು ಸಾಮಾನ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಆಟೋ ಓಡಿಸುವ ಮೂಲಕ ಆಟೋ ಚಾಲಕರು ಪ್ರಧಾನಿ ಮೋದಿಗೆ ಬೆಂಬಲ ‌ನೀಡುತ್ತಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೂ ಸಾರಿಗೆ ಸಂಚಾರ ಎಂದಿನಂತೆ ಇದ್ದು, ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸಾಮಾನ್ಯವಾಗಿದೆ. ಜನರೂ ಕೂಡ ಯಾವುದೇ ಬಂದ್ ಭೀತಿ ಇಲ್ಲದೇ ಸಂಚಾರ ನಡೆಸುತ್ತಿದ್ದಾರೆ.

Comments are closed.