ಕರ್ನಾಟಕ

ಶಿಕ್ಷಣ, ಆರೋಗ್ಯ ಉದ್ಯಮವಾಗಿರುವುದರಿಂದ ಹಲವು ಬಿಕ್ಕಟ್ಟು: ಬರಗೂರು ರಾಮಚಂದ್ರಪ್ಪ

Pinterest LinkedIn Tumblr

Baraguru-ramachandrappaಬೆಂಗಳೂರು, ನ. ೨೨ – ಸೇವಾ ಕ್ಷೇತ್ರಗಳಾಗಿರಬೇಕಾಗಿದ್ದ ಶಿಕ್ಷಣ ಮತ್ತು ಆರೋಗ್ಯ ಇಂದು ಉದ್ಯಮ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಇದರಿಂದ ಹಲವು ಬಿಕ್ಕಟ್ಟುಗಳು ಸೃಷ್ಟಿಯಾಗಿವೆ ಎಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಗರದಲ್ಲಿ ಇಂದು ಏರ್ಪ‌ಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಎಲ್ಲವನ್ನೂ ಉದ್ಯಮವಾಗಿ ನೋಡುವ, ಎಲ್ಲವನ್ನೂ ಹಣದ ಮೇಲೆ ನೋಡುವ ಪ್ರವೃತ್ತಿ ಜಾಸ್ತಿಯಾಗುತ್ತಿದೆ. ಜ್ಯಾಟ್ ಒಪ್ಪಂದದಲ್ಲಿ ಶಿಕ್ಷಣವನ್ನು ಉದ್ಯಮವಾಗಿ ಪರಿಗಣಿಸಲಾಗಿದೆ. ಇದರಿಂದ ಭಾಷೆ ಮತ್ತು ಪರಿಭಾಷೆಯಲ್ಲಿ ಬದಲಾವಣೆ ಉಂಟಾಗಿದೆ ಎಂದು ಹೇಳಿದರು.
ಪತ್ರಿಕೋದ್ಯಮ ಬದಲಾಗಿದ್ದು, ಜಗತ್ತಿನಲ್ಲಿ ವಿದ್ಯುನ್ಮಾದ ಹೆಚ್ಚಾಗುತ್ತಿದೆ. ದೇಶಗಳ ನಡುವೆ ಸಂಘರ್ಷ ಸೃಷ್ಟಿಸಿ ಯುದ್ಧವನ್ನು ಉದ್ಯಮವನ್ನಾಗಿ ಮಾಡಲಾಗಿದೆ ಎಂದು ಹೇಳಿದ ಅವರು, ಮಾತೃಭಾಷೆಯ ವಿರುದ್ಧ ತೀರ್ಪು ನೀಡುವ ಮೂಲಕ ಸುಪ್ರೀಂ ಕೋರ್ಟ್ ತನ್ನ ಹಿಂದಿನ ತೀರ್ಪನ್ನೇ ಉಲ್ಲಂಘಿಸಿದೆ. ನ್ಯಾಯಾಲಯದ ಮೇಲಿನ ವಿಶ್ವಾಸಾರ್ಹತೆ ಪ್ರಶ್ನಿಸುವಂತಾಗಿದೆ. ಕಾವೇರಿ ವಿಷಯದಲ್ಲಿ ಇದು ಬಹಿರಂಗಗೊಂಡಿತ್ತು ಎಂದು ಹೇಳಿದರು.
ಸರ್ಕಾರಗಳು ನಮ್ಮನ್ನು ಆಳುತ್ತಿಲ್ಲ. ಉದ್ಯಮಪತಿಗಳು ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ. ಬೌದ್ಧಿಕ ಬಂಡವಾಳಕ್ಕೆ ಗೌರವ ಕೊಡಬೇಕಾಗಿದ್ದ ಸರ್ಕಾರಗಳು ಆರ್ಥಿಕ ಬಂಡವಾಳಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಮಾತನಾಡಿ, ಪತ್ರಿಕೋದ್ಯಮ ತಮಗೆ ಹೂವಿನ ಹಾಸಿಗೆಯಾಗಿರಲಿಲ್ಲ, ಈಗ ಆಯೋಗದ ಅಧ್ಯಕ್ಷೆಯಾಗಿ ಕುಳಿತುಕೊಂಡಾಗಲೂ ಅನ್ಯಾಯಗಳನ್ನು ನೋಡಿ ರಕ್ತ ಕುದಿಯುತ್ತಿದೆ. ನೋವು ಮತ್ತು ಸವಾಲುಗಳನ್ನು ತಾಳ್ಮೆಯಿಂದ ಎದುರಿಸಬೇಕಾಗಿದೆ ಎಂದರು.
ರಾಜ್ಯ ಮಾಹಿತಿ ಹಕ್ಕು ಆಯುಕ್ತ ಡಾ. ಸುಚೇತನ ಸ್ವರೂಪ್, ಪುಸ್ತಕದ ಪ್ರೀತಿ ಕಡಿಮೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲೂ ಅನಿಶ್ಚಿತತೆ ತಲೆದೋರಿಕೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎನ್. ರಾಜು, ಸೊಗಡು ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.

Comments are closed.