
Resque works is in full swing after Patna Endore exxpress derail at pukhrayan village near kanpur on sunday.Express photo by Vishal Srivastav 20.11.2016
ಪುಖರಾಯಾಂ, ಉತ್ತರ ಪ್ರದೇಶ: ಇಂದೋರ್–ಪಟ್ನಾ ಎಕ್ಸ್ಪ್ರೆಸ್ನ 14 ಬೋಗಿಗಳು ಭಾನುವಾರ ಬೆಳಗಿನ ಜಾವ ಕಾನ್ಪುರ ಗ್ರಾಮಾಂತರ ಜಿಲ್ಲೆಯ ಪುಖರಾಯಾಂ ಸಮೀಪ ಹಳಿ ತಪ್ಪಿದ್ದರಿಂದ 142 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ.
ಗಾಯಗೊಂಡವರ ಪೈಕಿ ಅರ್ಧದಷ್ಟು ಜನರ ಪರಿಸ್ಥಿತಿ ಗಂಭೀರವಾಗಿದೆ. ಹಳಿಯಲ್ಲಿನ ಬಿರುಕು ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಭಾನುವಾರ ನಸುಕಿನ ಮೂರು ಗಂಟೆ ಸಮಯದಲ್ಲಿ ರೈಲು ಹಳಿತಪ್ಪಿದ್ದು ಬಹುತೇಕ ಪ್ರಯಾಣಿಕರು ನಿದ್ದೆಯಲ್ಲಿದ್ದರು.
ದುರಂತದಲ್ಲಿ ನಾಲ್ಕು ಸ್ಲೀಪರ್ ಬೋಗಿಗಳು (ಎಸ್1, 2, 3 ಮತ್ತು 4) ಸಂಪೂರ್ಣ ನಜ್ಜುಗುಜ್ಜಾಗಿವೆ. ಎಸ್1 ಮತ್ತು ಎಸ್2 ಒಂದರ ಒಳಗೊಂದು ನುಗ್ಗಿ ಹೋಗಿವೆ. ಮೃತರಲ್ಲಿ ಹೆಚ್ಚಿನವರು ಈ ಬೋಗಿಗಳಲ್ಲಿ ಇದ್ದವರು ಎನ್ನಲಾಗಿದೆ.
ಎ.ಸಿ. 3 ಟೈರ್ ಬೋಗಿಯೊಂದಕ್ಕೆ ಕೂಡ ಹಾನಿಯಾಗಿದೆ. ಆದರೆ ಈ ಬೋಗಿಯಲ್ಲಿದ್ದವರಿಗೆ ಹೆಚ್ಚಿನ ಅಪಾಯ ಸಂಭವಿಸಿಲ್ಲ. ನಿದ್ದೆಯಲ್ಲಿದ್ದ ಜನರು ಅಪಘಾತದಿಂದಾಗಿ ಬೆಚ್ಚಿ ಎದ್ದರು. ಹಲವು ಮಂದಿಯನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲೇ ಹೋಗಿದೆ. ಒಟ್ಟು 110 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಕಾನ್ಪುರ ವಲಯದ ರೈಲ್ವೆ ಆಯುಕ್ತ ಇಫ್ತಿಕಾರುದ್ದೀನ್ ತಿಳಿಸಿದ್ದಾರೆ.
76 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ 150 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ: ಗಾಯಗೊಂಡ 150ಕ್ಕೂ ಹೆಚ್ಚು ಮಂದಿಯನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈ ಪ್ರದೇಶದ ಎಲ್ಲ ಆಸ್ಪತ್ರೆಗಳಿಗೂ ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ 30ಕ್ಕೂ ಹೆಚ್ಚು ಆಂಬುಲೆನ್ಸ್ಗಳನ್ನು ಬಳಸಲಾಗಿದೆ.
ಸೇನೆಯ ವೈದ್ಯರು, ರೈಲ್ವೆ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೂಚಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಂಚಾರ ದಟ್ಟಣೆಯಿಂದ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ಸ್ಥಳದಲ್ಲಿ ಸಾಕಷ್ಟು ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು.
ಕೋಲ್ಡ್ ಕಟ್ಟರ್ ಬಳಕೆ: ನಜ್ಜುಗುಜ್ಜಾದ ಬೋಗಿಗಳ ಒಳಗೆ ಹಲವು ಮಂದಿ ಸಿಲುಕಿಕೊಂಡಿದ್ದರು. ಕೋಲ್ಡ್ ಕಟ್ಟರ್ಗಳನ್ನು ಬಳಸಿ ಬೋಗಿಗಳನ್ನು ಕತ್ತರಿಸಿ ಅವರನ್ನು ರಕ್ಷಿಸಲಾಗಿದೆ. ಬೋಗಿಗಳನ್ನು ಕತ್ತರಿಸಲು ಗ್ಯಾಸ್ ಕಟ್ಟರ್ಗಳನ್ನು ಬಳಸುವುದರಿಂದ ಬೋಗಿ ಬಿಸಿಯಾಗುತ್ತದೆ. ಜತೆಗೆ ಅದರಿಂದ ಬೆಂಕಿಯ ಕಿಡಿಗಳು ಹಾರುತ್ತವೆ. ಆದರೆ ಕೋಲ್ಡ್ ಕಟ್ಟರ್ಗಳನ್ನು ಬಳಸುವುದರಿಂದ ಇದನ್ನು ತಪ್ಪಿಸಬಹುದು. ಹಾಗಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚಾಗಿ ಕೋಲ್ಡ್ ಕಟ್ಟರ್ಗಳನ್ನು ಬಳಸಲಾಗುತ್ತಿದೆ.
ಮೃತರ ಕುಟುಂಬಕ್ಕೆ ಪರಿಹಾರ: ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಅಖಿಲೇಶ್ ಯಾದವ್ ಅವರು ತಲಾ ₹5 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ. ರೈಲ್ವೆಯಿಂದ ನೀಡಲಾಗುವ ಪರಿಹಾರ ಮೊತ್ತವನ್ನು ₹2 ಲಕ್ಷದಿಂದ ₹3.5 ಲಕ್ಷಕ್ಕೆ ಏರಿಸಲಾಗಿದೆ.
ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹50 ಸಾವಿರ ಮತ್ತು ಗಾಯಗೊಂಡ ಇತರರಿಗೆ ತಲಾ ₹25 ಸಾವಿರ ಪರಿಹಾರ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.
ಅಪಘಾತಕ್ಕೆ ಕಾರಣವೇನು?
ರೈಲು ಹಳಿಯಲ್ಲಿನ ಬಿರುಕು ದುರಂತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ರೈಲ್ವೆಯ ಎಂಜಿನಿಯರಿಂಗ್ ವಿಭಾಗದ ಸದಸ್ಯರು ಅಪಘಾತದ ಕಾರಣ ಕಂಡು ಹಿಡಿಯಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.