ಕರ್ನಾಟಕ

ನೋಟುಗಳ ಬಿಕ್ಕಟ್ಟು ಎಪ್ರಿಲ್ ವರೆಗೆ ಮುಂದುವರಿಕೆ

Pinterest LinkedIn Tumblr

500-noteಬೆಂಗಳೂರು: ನೋಟುಗಳ ಕೊರತೆಯ ಸಮಸ್ಯೆ ಸದ್ಯಕ್ಕೆ ಬಗೆ ಹರಿಯುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಎಲ್ಲಾ ನೋಟು ಮುದ್ರಣಾಲಯಗಳು ದಿನದ 24 ಗಂಟೆ ಕೆಲಸ ಮಾಡಿದರೂ ಕೊರತೆಯನ್ನು ನೀಗಿಸುವುದಕ್ಕೆ ಆರು ತಿಂಗಳು ಬೇಕಾಗುತ್ತದೆ.

₹500 ನೋಟಿನ ಮುದ್ರಣ ನವೆಂಬರ್ 10ರಿಂದಷ್ಟೇ ಆರಂಭವಾಗಿದೆ. ₹2,000 ನೋಟುಗಳ ಪೂರೈಕೆ ಸಾಕಷ್ಟಿದ್ದರೂ ಚಿಲ್ಲರೆಯ ಅಲಭ್ಯತೆ ಅದರ ಬಳಕೆಗೆ ಕುತ್ತಾಗಿದೆ.

ಸರ್ಕಾರ ನೋಟು ಕೊರತೆಯ ಸಮಸ್ಯೆಯನ್ನು ಬಗೆಹರಿಸುವ ಕುರಿತು ಅತಿ ಆಶಾವಾದದ ಬೆನ್ನು ಹಿಡಿದಿದೆಯೇ ಎಂಬ ಸಂಶಯ ಹಲವರನ್ನು ಕಾಡುತ್ತಿದೆ. ಏಕೆಂದರೆ ನೋಟು ಮುದ್ರಣಾಲಯಗಳ ಸಾಮರ್ಥ್ಯ ಈಗ ಕಂಡುಬಂದಿರುವ ಕೊರತೆಯನ್ನು ಪೂರೈಸುವಷ್ಟಿಲ್ಲ ಎಂಬದು ವಾಸ್ತವ.

ಭಾರತದಲ್ಲಿ ಒಟ್ಟು ನಾಲ್ಕು ನೋಟು ಮುದ್ರಣಾಲಯಗಳಿವೆ. ಮಹಾರಾಷ್ಟ್ರದ ನಾಸಿಕ್, ಮಧ್ಯಪ್ರದೇಶದ ದೇವಾಸ್, ಪಶ್ಚಿಮ ಬಂಗಾಳದ ಸಲ್ಬೋನಿ ಮತ್ತು ಕರ್ನಾಟಕದ ಮೈಸೂರಿನಲ್ಲಿ ತಲಾ ಒಂದೊಂದು ಮುದ್ರಣ ಕೇಂದ್ರಗಳಿವೆ.

ನಾಸಿಕ್ ಮತ್ತು ದೇವಾಸ್‌ನಲ್ಲಿರುವ ಮುದ್ರಣಾಲಯಗಳು ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ ನಿರ್ವಹಣೆಯಲ್ಲಿವೆ. ಹಣಕಾಸು ಸಚಿವಲಾಯದ ವಾರ್ಷಿಕ ವರದಿ ಹೇಳುತ್ತಿರುವಂತೆ ಈ ಮುದ್ರಣಾಲಯಗಳು ದೇಶದ ನೋಟುಗಳ ಅಗತ್ಯದ ಶೇಕಡಾ 40ರಷ್ಟು ಪೂರೈಸುವ ಸಾಮರ್ಥ್ಯ ಹೊಂದಿವೆ.

ಸಲ್ಬೋನಿ ಮತ್ತು ಮೈಸೂರಿನಲ್ಲಿರುವ ಮುದ್ರಣಾಲಯಗಳು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿವೆ. ಈ ಸಂಸ್ಥೆಯ ಮಾಲೀಕತ್ವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ್ದಾಗಿದೆ. ಇವರೆಡು ಶೇಕಡಾ 60ರಷ್ಟು ನೋಟುಗಳನ್ನು ಪೂರೈಸುತ್ತವೆ. ಎರಡು ಪಾಳಿಗಳಲ್ಲಿ ಕೆಲಸ ಮಾಡಿದರೆ ಒಂದು ವರ್ಷಕ್ಕೆ 16 ಶತಕೋಟಿ ನೋಟುಗಳನ್ನು ಮುದ್ರಿಸಬಹುದು ಎಂಬುದು ಈ ಮುದ್ರಣಾಲಯಗಳ ವೆಬ್ ಸೈಟ್ ಹೇಳುತ್ತದೆ.

ಒಟ್ಟೂ ನಾಲ್ಕೂ ಮುದ್ರಣಾಲಯಗಳು ಎರಡು ಪಾಳಿಯಲ್ಲಿ ಕೆಲಸ ಮಾಡಿದರೆ ಒಂದು ವರ್ಷದ ಅವಧಿಯಲ್ಲಿ 26.66 ಶತಕೋಟಿ ನೋಟುಗಳನ್ನು ಮುದ್ರಿಸಬಹುದು. ಮೂರು ಪಾಳಿಗಳಲ್ಲಿ ಕೆಲಸ ಮಾಡಿದರೆ ವರ್ಷಕ್ಕೆ 50 ಶತಕೋಟಿ ನೋಟುಗಳ ಮುದ್ರಣ ಸಾಧ್ಯ. ಈಗ ಸರ್ಕಾರ ಹೇಳುತ್ತಿರುವಂತೆ ನೋಟುಗಳನ್ನು ರದ್ದು ಮಾಡುವ ಮೊದಲು ಚಲಾವಣೆಯಲ್ಲಿದ್ದ 500 ಮತ್ತು 1000 ರೂಪಾಯಿಗಳ ಒಟ್ಟು ಮೌಲ್ಯ 17.54 ಲಕ್ಷ ಕೋಟಿ ರೂಪಾಯಿಗಳು. ಇದರಲ್ಲಿ ಶೇಕಡಾ 45ರಷ್ಟು 500 ರೂಪಾಯಿ ನೋಟುಗಳು. ಅದು ಸುಮಾರು 7.89 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ. ಉಳಿದಂತೆ ಶೇಕಡಾ 39ರಷ್ಟು ನೋಟುಗಳು 1000 ರೂಪಾಯಿಗಳವು. ಇದರ ಮೌಲ್ಯ ಸುಮಾರು 6.84 ಲಕ್ಷ ಕೋಟಿ ರೂಪಾಯಿಗಳು. ನೋಟುಗಳ ಸಂಖ್ಯೆಯಲ್ಲಿ ಹೇಳುವುದಾದರೆ 15.78 ಶತಕೋಟಿ 500 ರೂಪಾಯಿಗಳ ಮತ್ತು 6.84 ಶತಕೋಟಿ 1,000 ರೂಪಾಯಿಗಳ ನೋಟುಗಳು ಚಲಾವಣೆಯಲ್ಲಿದ್ದವು.

1,000 ರೂಪಾಯಿಗಳಿಗೆ ಪರ್ಯಾಯವಾಗಿ 2,000 ರೂಪಾಯಿಗಳ ನೋಟನ್ನು ಮುದ್ರಿಸುವುದಾದರೆ 3.42 ಶತಕೋಟಿ ನೋಟುಗಳು ಬೇಕಾಗುತ್ತವೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಇವುಗಳ ಮುದ್ರಣ ಆರಂಭಗೊಂಡಿದ್ದರೆ ಮುದ್ರಣಾಲಯಗಳ ಸಾಮರ್ಥ್ಯದ ಅರ್ಧವನ್ನು ಬಳಸಿಕೊಂಡರೂ ಈ ಹೊತ್ತಿಗಾಗಲೇ ಇವುಗಳ ಮುದ್ರಣ ಕ್ರಿಯೆ ಮುಗಿದಿರುತ್ತದೆ.

500 ರೂಪಾಯಿಗಳ ಮುದ್ರಣ ನವೆಂಬರ್ 10ರಿಂದ ಆರಂಭವಾಗಿದೆ ಎಂದು ಕೊಂಡರೆ ಅದು ಪೂರ್ಣಗೊಳ್ಳಲು ಇನ್ನೂ ಆರು ತಿಂಗಳ ಬೇಕಾಗುತ್ತದೆ. ಮುದ್ರಣಾಲಯಗಳ ಪೂರ್ಣ ಸಾಮರ್ಥ್ಯದ ಶೇಕಡಾ 80ರಷ್ಟನ್ನು ಮುದ್ರಣಕ್ಕೆ ಬಳಸಿಕೊಳ್ಳಬಹುದು. ಇನ್ನುಳಿದ ಶೇಕಡಾ 20ರಷ್ಟನ್ನು 100 ರೂಪಾಯಿಗಳಿಂದ 5 ರೂಪಾಯಿಗಳ ತನಕದ ನೋಟುಗಳ ಮುದ್ರಣಕ್ಕೆ ಬಳಬೇಕಾಗುತ್ತದೆ. ಕೊರತೆ ಇರುವ ನೋಟುಗಳಲ್ಲಿ ಈಗ ಇವೂ ಸೇರಿಕೊಂಡಿವೆ.

ಅಂದರೆ ಏಪ್ರಿಲ್ ತಿಂಗಳ ಕೊನೆಯ ಹೊತ್ತಿಗಷ್ಟೇ ನೋಟುಗಳ ಕೊರತೆ ಪೂರ್ಣವಾಗಿ ನಿವಾರಣೆಯಾಗುತ್ತದೆ. ಅಂದರೆ ಪ್ರಧಾನ ಮಂತ್ರಿಗಳ ಭರವಸೆಯ 50 ದಿನಗಳಲ್ಲಿ ನೋಟಿನ ಸಮಸ್ಯೆ ಪರಿಹಾರವಾಗುವುದಿಲ್ಲ.

Comments are closed.